ವಿಶ್ವ ಬಾಕ್ಸಿಂಗ್ :ಭಾರತದ ಕಲಿಗಳು ಸೆಮಿಸ್ ಗೆ
ಮಾಸ್ಕೋ, ಡಿ.12: ಇಲ್ಲಿ ನಡೆಯುತ್ತಿರುವ ಎಐಬಿಎ ವಿಶ್ವ ಕಪ್ ಬಾಕ್ಸಿಂಗ್ ಪಂದ್ಯಾವಳಿಯ ಉಪಾಂತ್ಯ ಹಂತಕ್ಕೆ ಭಾರತದ ಜಿತೇಂದರ್ , ಎ.ಎಲ್ .ಲಾಕ್ರಾ, ದಿನೇಶ್ ಕುಮಾರ್ ಹಾಗೂ ಅಖಿಲ್ ತಲುಪಿ, ಪದಕದ ಆಸೆ ಹುಟ್ಟಿಸಿದ್ದಾರೆ.
51 ಕೆ.ಜಿ ವಿಭಾಗದಲ್ಲಿ 22 ವರ್ಷದ ಜಿತೇಂದರ್ ಕುಮಾರ್ ಅವರು 18-6 ಭಾರಿ ಅಂತರದಿಂದ ವೇಲ್ಸ್ ನ ಜೋ ಗಾಗೆ ವಿರುದ್ಧ ಗೆಲುವು ಸಾಧಿಸಿದರು. ಒಲಿಂಪಿಕ್ಸ್ ನಲ್ಲಿ ಪದಕ ವಂಚಿತ ಜಿತೇಂದರ್ ಸೆಮಿಸ್ ನಲ್ಲಿ ಕ್ಯೂಬಾದ ಲ್ಯಾಫಿಟಾ ಅವರನ್ನು ಎದುರಿಸಲಿದ್ದಾರೆ. 57 ಕೆಜಿ ವಿಭಾಗದಲ್ಲಿ ಎ.ಎಲ್ ಲಾಕ್ರಾ ವಾಕ್ ಓವರ್ ಪಡೆದು ಸೆಮಿಸ್ ತಲುಪಿದರು. ಉಳಿದಂತೆ 20 ವರ್ಷದ ದಿನೇಶ್ ಅವರು ಅಲ್ಜೀರಿಯಾದ ಅಬ್ದೆಲ್ಹಫೀಸ್ ಬೆಂಚ್ಬಲಾ ಅವರನ್ನು 17-11 ಅಂಕಗಳಿಂದ ಸೋಲಿಸಿದರು. ಒಲಿಂಪಿಕ್ಸ್ ನಲ್ಲಿ ಇದೇ ಸ್ಪರ್ಧಿಯ ವಿರುದ್ಧ ದಿನೇಶ್ ಮೊದಲ ಸುತ್ತಿನಲ್ಲಿ ಪರಾಭವಗೊಂಡಿದ್ದರು. ಈಗ ಆ ಸೇಡನ್ನು ತೀರಿಸಿಕೊಂಡಂತಾಯಿತು. ಡಿ.13 ರಂದು ನಡೆವ ಸೆಮಿಸ್ ನಲ್ಲಿ ರಷ್ಯಾದ ವ್ಲಾಡಿಮಿರ್ ಚೆಲ್ಸ್ ಅವರನ್ನು ಎದುರಿಸಲಿದ್ದಾರೆ.
ಬಾಂಟಮ್ ವೇಯ್ಟ್ಟ್ ವಿಭಾಗದಲ್ಲಿ ಅಖಿಲ್ ಅವರು ಜರ್ಮನಿಯ ಮಾರ್ಸೆಲ್ ಶಿನೈಡರ್ ಅವರನ್ನು 15-6 ಅಂತರದಿಂದ ಸುಲಭವಾಗಿ ಸೋಲಿಸಿ ಸೆಮಿಸ್ ಪ್ರವೇಶಿಸಿದ್ದಾರೆ. ಸೆಮಿಸ್ ನಲ್ಲಿ ಒಲಿಂಪಿಕ್ಸ್ ಬೆಳ್ಳಿಪದಕ ವಿಜೇತ ಕ್ಯೂಬಾದ ಯಾಂಕಿಲ್ ಲಿಯಾನ್ ಆರ್ಕೋನ್ ಅವರ ವಿರುದ್ಧ ಸೆಣಸಲಿದ್ದಾರೆ. ಈಗ ಭಾರತಕ್ಕೆ ಕನಿಷ್ಠ ಕಂಚಿನ ಪದಕ ಸಿಗುವುದು ಖಚಿತವಾಗಿದೆ. ಜೊತೆಗೆ 2,500 ಡಾಲರ್ ಮೊತ್ತದ ಹಣ ಕೂಡ ಸಿಗಲಿದೆ.
(ದಟ್ಸ್ ಕನ್ನಡ ಕ್ರೀಡಾ ವಾರ್ತೆ)


Click it and Unblock the Notifications
