ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮದ್ದೂರಿನ ದುಡ್ಡು,ದೊಡ್ಡಬಳ್ಳಾಪುರದ ಲೆಕ್ಕ

By Staff
|
Google Oneindia Kannada News

ಬೆಂಗಳೂರು, ಡಿ.12: ನೀವು ದೊಡ್ಡ ಕುಳ ಆಗಿರದಿದ್ದರೆ ಚುನಾವಣೆಯಲ್ಲಿ ಸ್ಪರ್ಧಿಸುವುದು ದುಸ್ಸಾಧ್ಯ. ಪ್ರಸಕ್ತ ಕರ್ನಾಟಕದ ಎಂಟು ವಿಧಾನಸಭೆಗಳಿಗೆ ನಡೆಯುತ್ತಿರುವ ಉಪಚುನಾವಣೆಯಲ್ಲಿ ಈ ಸಂಗತಿ ಮತ್ತೊಮ್ಮೆ ಸುಸ್ಪಷ್ಟವಾಗಿದೆ. ಚುನಾವಣಾ ಆಯೋಗದ ನೀತಿಸಂಹಿತೆ ಪ್ರಕಾರ ಪ್ರತಿಯೊಬ್ಬ ಅಭ್ಯರ್ಥಿಯೂ ತನ್ನ ಆಸ್ತಿ ಪಾಸ್ತಿ ಸಾಲ ಸೋಲದ ವಿವರಗಳನ್ನು ಘೋಷಿಸಬೇಕಾಗಿರುವುದು ನಿಯಮ. ಇದುವರೆಗೆ ನಾವು ಓದಿದ ಅಂತಹ ಆಸ್ತಿ ವಿವರ ಘೋಷಣೆಯಲ್ಲಿ ದಂಗುಬಡಿಸುವಷ್ಟು ಆಸ್ತಿ ಹೊಂದಿರುವ ಆಸಾಮಿ ಮದ್ದೂರಿನಿಂದ ಕಣಕ್ಕಿಳಿದಿರುವ ಭಾಜಪದ ಅಭ್ಯರ್ಥಿ ಡಿ ಸಿ ತಮ್ಮಣ್ಣ. ಅವರಿಗೆ ಸುಮಾರು 100 ಕೋಟಿ ಆಸ್ತಿ ಉಂಟು.

ಇವತ್ತು ಡಿಸೆಂಬರ್ 12 ರಂದು ದೊಡ್ಡಬಳ್ಳಾಪುರ ಉಪ ಚುನಾವಣೆಯ ಅಭ್ಯರ್ಥಿಗಳು ತಮ್ಮ ತಮ್ಮ ಆಸ್ತಿ ವಿವರ ಸಲ್ಲಿಸಿದ್ದಾರೆ. ಆ ವಿವರಗಳ ಮೇಲೆ ಕಣ್ಣಾಡಿಸೋಣ: ಉಪ ಚುನಾವಣೆ ಡಿಸೆಂಬರ್ 27ರಂದು ಶನಿವಾರ ನಡೆಯಲಿದೆ.

ಜೆ. ನರಸಿಂಹಸ್ವಾಮಿ : ಐದೂವರೆ ಕೆ ಜಿ ಬಂಗಾರದ ಒಡವೆಗಳು ಹಾಗೂ 19 ಕೆ ಜಿ ಬೆಳ್ಳಿ ಇದು ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಜೆ. ನರಸಿಂಹಸ್ವಾಮಿ ಅವರ ಕುಟುಂಬದ ಹಳದಿ ಮತ್ತು ಬಿಳಿ ಲೋಹಗಳ ವಿವರಗಳು. ನರಸಿಂಹಸ್ವಾಮಿ ಅವರು ಘೋಷಿಸಿಕೊಂಡಿರುವ ಕುಟುಂಬದ ಬಂಗಾರದ ಒಡವೆಗಳ ಒಟ್ಟಾರೆ ಮೌಲ್ಯ ಸುಮಾರು 55 ಲಕ್ಷ ರೂ ಹಾಗೂ ಬೆಳ್ಳಿಯ ಮೌಲ್ಯ ಸುಮಾರು 3.9 ಲಕ್ಷ ರೂ.

ಅಂತೆಯೇ, ಮಾಸ್ತಿಮನ ಹಳ್ಳಿಯಲ್ಲಿ ತಮ್ಮ ಹೆಸರಲ್ಲಿ ಒಂದೂವರೆ ಕೋಟಿ ರೂ ಮೌಲ್ಯದ 14.23 ಎಕರೆ ಮತ್ತು ತೂಬಗೆರೆಯಲ್ಲಿ ತಮ್ಮ ಮಗನ ಹೆಸರಿನಲ್ಲಿ 95 ಲಕ್ಷ ರೂ ಮೌಲ್ಯದ 9.3 ಎಕರೆ ಕೃಷಿ ಜಮೀನು ಹಾಗೂ ಕೃಷಿಯೇತರ ಜಮೀನಿನಲ್ಲಿ ಮಾಸ್ತಿಮನ ಹಳ್ಳಿಯಲ್ಲಿ 20 ಲಕ್ಷ ರೂ ಮೌಲ್ಯದ 30,000 ಚದುರ ಕೋಳಿ ಸಾಕಾಣಿಕಾ ಕೇಂದ್ರ, 20 ಚದುರದ ಕಟ್ಟಡ ಮಗನ ಹೆಸರಿನಲ್ಲಿ 15 ಚದುರದ ವಾಸದ ಮನೆ ಇದೆ. ತಮ್ಮ ಬಳಿ ಮಹೇಂದ್ರ,ಸ್ಕಾರ್ಪಿಯೋ ಮತ್ತು ಟಾಟಾ ಮೊಬೈಲ್, ತಮ್ಮ ಮಗನ ಬಳಿ ಸ್ಕಾರ್ಪಿಯೋ ಮತ್ತು ಮಾರುತಿ 800 ಹಾಗೂ ತಮ್ಮ ಸೊಸೆಯ ಬಳಿ ಮಾರುತಿ 800 ವಾಹನಗಳಿವೆ ಎಂದು ಭಾಜಪದ ನರಸಿಂಹಸ್ವಾಮಿ ಅವರು ಘೋಷಣಾ ಪತ್ರದಲ್ಲಿ ತಿಳಿಸಿದ್ದಾರೆ.

ತಮ್ಮ ಬಳಿ 11.25 ಲಕ್ಷ ರೂ, ತಮ್ಮ ಪತ್ನಿ ಜೆ.ಎನ್.ಎಸ್. ನವ್ಯ ಅವರ ಬಳಿ 1.75 ಲಕ್ಷ ರೂ ಮಗ ಎನ್. ಅರವಿಂದ್ ಅವರ ಬಳಿ 12 ಲಕ್ಷ ರೂ ಹಾಗೂ ಸೊಸೆ ಶ್ವೇತ ಅರವಿಂದ್ ಅವರ ಬಳಿ ಎರಡು ಲಕ್ಷ ರೂ ನಗದು ಇರುವುದಾಗಿ ನರಸಿಂಹಸ್ವಾಮಿ ಅವರು ಘೋಷಿಸಿ ಕೊಂಡಿದ್ದಾರೆ.

ಇನ್ನು ಋಣಬಾರದ ವಿಷಯ. ತಾವು 12.22ಲಕ್ಷ ರೂ ಕೋಳಿ ಸಾಕಾಣಿಕಾ ಸಾಲ ಮತ್ತು 8.65 ಲಕ್ಷ ರೂ ವಾಹನ ಸಾಲ ತಮ್ಮ ಪುತ್ರ ಅರವಿಂದ್ ಅವರು 1.27 ಲಕ್ಷ ರೂ ದ್ರಾಕ್ಷಿ ಸಾಲ ಹಾಗೂ 5.21 ಲಕ್ಷ ರೂ ವಾಹನ ಸಾಲ ಪಡೆದಿರುವುದಾಗಿ ಹೇಳಿದ್ದಾರೆ.

ಆರ್. ಜಿ. ವೆಂಕಟಾಚಲಯ್ಯ

ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆರ್ ಜಿ ವೆಂಕಟಾಚಲಯ್ಯ ಅವರು ಹಣಬೆ ಗ್ರಾಮದಲ್ಲಿನ ವಿವಿದೆಡೆಗಳಲ್ಲಿ 13.20 ಎಕರೆ ಕೃಷಿ ಭೂಮಿ ಹಾಗೂ ಆರು ನಿವೇಶನಗಳು ಹಾಗೂ ಮನೆಯನ್ನೂ ಹೊಂದಿದ್ದಾರೆ. ಇವುಗಳೆಲ್ಲದರ ಒಟ್ಟಾರೆ ಮೌಲ್ಯ 3.5 ಕೋಟಿ ರೂ ಆಗಿದೆ.

ಅಲ್ಲದೆ, ತಮ್ಮ ಪತ್ನಿ ಹೆಚ್. ಎಸ್. ಪದ್ಮಾವತಮ್ಮ ಅವರ ಹೆಸರಿನಲ್ಲಿ ಹೊಂದಿರುವ ಕೃಷಿಯೇತರ ಜಮೀನಿನ ಒಟ್ಟಾರೆ ಮೌಲ್ಯ 1.65 ಕೋಟಿ ರೂ. ಆಗಿದೆ. ಇದಲ್ಲದೆ, ತಮ್ಮ ಪುತ್ರ ಹೆಚ್.ವಿ.ಶ್ರೀವತ್ಸ ಮತ್ತು ಪುತ್ರಿ ಕುಮಾರಿ ಹೆಚ್ ವಿ ನಾಗರತ್ನ ಅವರ ಹೆಸರಿನಲ್ಲಿ ತಲಾ ಒಂದು ನಿವೇಶನಗಳಿದ್ದು ಅವುಗಳ ಒಟ್ಟಾರೆ ಮೌಲ್ಯ 14 ಲಕ್ಷ ರೂ ಎಂದು ಅವರು ತಮ್ಮ ಘೋಷಣಾ ಪತ್ರದಲ್ಲಿ ತಿಳಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)
ಪಕ್ಷಾಂತರ ನಿಷೇಧ ಕಾಯ್ದೆ ಜಾರಿಗೆ ತನ್ನಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X