ಭಾರತದಲ್ಲಿ ಹುಲಿಗಳ ಸಂಖ್ಯೆ1500 ಮಾತ್ರ
ರಾಂಚಿ, ಡಿ. 12 : ಭಾರತೀಯ ರಾಷ್ಟ್ರೀಯ ಪ್ರಾಣಿ ಹುಲಿರಾಯನ ಸಂತತಿಗೆ ಕುತ್ತು ಎದುರಾಗಿದೆ. ವ್ಯಾಘ್ರನ ಘರ್ಜನೆಯು ದಿನೆದಿನೇ ಕುಸಿಯತೊಡಗಿದ್ದು, ಇತ್ತೀಚೆಗೆ ಭಾರತೀಯ ವನ್ಯಜೀವಿ ಇಲಾಖೆ ಅಧಿಕಾರಿಗಳು ನಡೆಸಿದ ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ ಒಟ್ಟು 1500 ಹುಲಿಗಳು ಮಾತ್ರ ಇವೆ ಎಂದು ತಿಳಿದು ಬಂದಿದೆ. ಇದು ವನ್ಯಜೀವಿಗಳ ಸಂಘ ಸೇರಿದಂತೆ ಪ್ರಾಣಿ ಪ್ರಿಯರಿಗೆ ಕಹಿ ಸುದ್ದಿಯಾಗಿದೆ.
ಡೆಹ್ರಾಡೂನಿನ ಭಾರತೀಯ ವನ್ಯಜೀವಿ ಸಂಸ್ಥೆ, ರಾಷ್ಟ್ರೀಯ ಹುಲಿ ಸಂರಕ್ಷಣಾ ಇಲಾಖೆ ಮತ್ತು ಭಾರತೀಯ ಪರಿಸರ ಮತ್ತು ಅರಣ್ಯ ಇಲಾಖೆ ಜಂಟಿ ಸಹಯೋಗದಲ್ಲಿ ನಡೆಸಿದ ಸರ್ವೆ ಪ್ರಕಾರ, ಹುಲಿಗಳ ಸಂಖ್ಯೆ 1500 ಎಂದು ನಿಖರವಾಗಿ ತಿಳಿದು ಬಂದಿದೆ. ಕಾಡಿನಲ್ಲಿರುವ ಅನೇಕ ಹುಲಿಗಳನ್ನು ಸದ್ದಿಲ್ಲದೆ ಭೇಟಿಯಾಡುತ್ತಿರುವುದರಿಂದ ಹುಲಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಲು ಪ್ರಮುಖ ಕಾರಣವಾಗಿದೆ. ಇದರ ಜೊತೆಗೆ ಪರಿಸರಕ್ಕೆ ಹೊಂದಿಕೊಳ್ಳದ ಕೆಲ ಹುಲಿಗಳು ಮೃತಪಟ್ಟರೆ, ಮತ್ತಷ್ಟು ಹುಲಿಗಳು ಇನ್ನಿತರ ಆರೋಗ್ಯ ತೊಂದರೆಗಳಿಂದ ಸಾವನ್ನಪ್ಪುತ್ತಿವೆ ಎಂದು ಸರ್ವೆ ನಡೆಸಿದ ಅಧಿಕಾರಿಗಳು ತಿಳಿಸಿದ್ದಾರೆ.
2001-02 ರಲ್ಲಿ ಮಾಡಿದ ಸರ್ವೆ ಪ್ರಕಾರ, ಅಂದು 3642 ಹುಲಿಗಳು ಇದ್ದವು. ಅಂದರೆ ಅಲ್ಲಿಂದ ಇಲ್ಲಿಯವರೆಗೆ ಸುಮಾರು ಶೇ. 60 ಹುಲಿಗಳ ಸಂಖ್ಯೆ ಇಳಿಕೆಯಾಗಿರುವುದು ಆಘಾತಕಾರಿ ಅಂಶವೇ ಸರಿ ಎಂದು ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ದೇಶದ ನಾಲ್ಕು ವಿಭಾಗಗಳ ವಿವಿಧ ಪ್ರದೇಶದಲ್ಲಿ ಹುಲಿಗಳಿದ್ದು, ಮೊದಲ ವಿಭಾಗವಾಗಿರುವ ಉತ್ತರಖಂಡ, ಉತ್ತರ ಪ್ರದೇಶ ಹಾಗೂ ಬಿಹಾರದಲ್ಲಿ 297 ಹುಲಿಗಳಿವೆ.
ಎರಡನೇ ವಿಭಾಗದ ಆಂಧ್ರಪ್ರದೇಶ, ಛತ್ತೀಸ್ ಗಢ, ಮಧ್ಯಪ್ರದೇಶ, ಕರ್ನಾಟಕ ಮಹಾರಾಷ್ಟ್ರ, ಒರಿಸ್ಸಾ, ರಾಜಸ್ತಾನ ಮತ್ತು ಜಾರ್ಖಂಡ್ ನಲ್ಲಿ ಒಟ್ಟು 402 ಹುಲಿಗಳಿವೆ. ಮೂರನೇ ವಿಭಾಗವಾಗಿರುವ ಅಸ್ಸಾಂ, ಅರುಣಾಚಲ ಪ್ರದೇಶ, ಮಿಜೋರಾಂ, ಪಶ್ಚಿಮ ಬಂಗಾಲದಲ್ಲಿ 200 ಹಾಗೂ ನಾಲ್ಕನೇ ವಿಭಾಗದಲ್ಲಿ ಸರ್ವೆ ಕಾರ್ಯಮುಂದುವರೆದಿದೆ. ಒಟ್ಟು 1500 ಹುಲಿಗಳ ಸಂಖ್ಯೆ ಇರುವುದಾಗಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಚಿರತೆ ಚರ್ಮ ಜಾಲ ಪತ್ತೆ, 3 ಬಂಧನ


Click it and Unblock the Notifications
