ದತ್ತ ಜಯಂತಿ ಶೋಭಾಯಾತ್ರೆ ಬೇಡ :ಡಿಸಿ
ಚಿಕ್ಕಮಗಳೂರು, ಡಿ. 11 : ಸಂಘ ಪರಿವಾರ ಹಮ್ಮಿಕೊಂಡಿರುವ ಮೂರು ದಿನಗಳ ದತ್ತ ಜಯಂತಿಗೆ ಜಿಲ್ಲೆಯ ಬಾಬಾ ಬುಡನ್ ಗಿರಿಯಲ್ಲಿ ಮಹಿಳೆಯರು ಚಾಲನೆ ನೀಡಿದರು. ಒಂದು ಸಾವಿರಕ್ಕೂ ಅಧಿಕ ಮಹಿಳೆಯರು ಭಾಗವಹಿಸಿದ್ದು ವಿಶೇಷವಾಗಿತ್ತು.
ಜಿಲ್ಲಾಡಳಿತದ ನಿರ್ಬಂಧದ ನಡುವೆಯೂ ಹೋಮ ಹವನ ನಡೆಯಿತು. ಸಭೆ ನಡೆದು ಪೀಠದ ಮುಕ್ತಿಗೆ ಸಂಕಲ್ಪ ತೆಗೆದುಕೊಂಡರು. ಇದಕ್ಕೂ ಮೊದಲು ಜಿಲ್ಲಾ ಕೇಂದ್ರದಲ್ಲಿ ಮೆರವಣಿಗೆ ನಡೆಸಿ ಹೊಸ ಪರಂಪರೆಗೆ ನಾಂದಿ ಹಾಡಲಾಯಿತು. ಬೆಳಗ್ಗೆಯಿಂದಲೇ ರಾಜ್ಯ ನಾನಾ ಕಡೆಗಳಿಂದ ಆಗಮಿಸಿದ ಮಹಿಳೆಯರು ಬೋಳರಾಮೇಶ್ವರ ದೇವಸ್ಥಾನದಲ್ಲಿ ಸಮಾವೇಶಗೊಂಡು ಸಾಮೂಹಿಕ ಭಜನೆ ಮಾಡಿದರು. ಅಲ್ಲಿಂದ ಭಜನೆ, ದತ್ತಾತ್ರೇಯ ಸ್ಮರಣೆ ಜಯಘೋಷಗಳೊಂದಿಗೆ ಕೇಸರಿ ಧ್ವಜ ಹೊತ್ತು ಹೊರಟ ಮೆರವಣಿಗೆ ಪ್ರಮುಖ ರಸ್ತೆಗಳಲ್ಲಿ ಸಾಗಿ ಶ್ರೀರಾಮ ದೇವಾಲಯದ ಬಳಿ ಸಮಾಪನಗೊಂಡಿತು.
ದತ್ತ ಜಯಂತಿ ಆರಂಭದ ದಿನ ಈ ಹಿಂದೆ ಎಂದೂ ಮೆರವಣಿಗೆ ನಡೆದಿರಲಿಲ್ಲ. ಹೊಸ ಪರಂಪರೆಗೆ ಇದು ನಾಂದಿಯಾಯಿತು. ಬಳಿಕ ಸಾಲಿನಲ್ಲಿ ಆಗಮಿಸಿ ಅನುಸೂಯಾ ಪೂಜೆ ನೆರವೇರಿಸಿದರು. ಸಾಂಪ್ರಾದಾಯಕ ಅರಿಶಿನ, ಕುಂಕುಮ. ಬಳೆ ನೀಡಿ ಗೌರವಿಸಲಾಯಿತು.
ಕೋಮುಸಂಘರ್ಷ ಸಮಿತಿಯವರು ಹೋಮ ಹವನಕ್ಕೆ ಅವಕಾಶ ಕಲ್ಪಿಸಿದ ಜಿಲ್ಲಾಡಳಿತವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಡಿ.15 ರಿಂದ ಮೂರು ದಿನಗಳ ಜಾಥಾ ನಡೆಸಿ, ಶೋಭಾಯಾತ್ರೆ ನಡೆಸಿದ ಹಿಂದೂ ಸಂಘಟನೆಗಳ ಕ್ರಮವನ್ನು ಖಂಡಿಸಲಾಗುವುದು ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿಯ ನಾಯಕ ಸಿಟಿ ರವಿ, ಕೋಮು ಸಂಘರ್ಷ ಸಮಿತಿ ಅವರು ಜನರ ಮನಸ್ಸಿನಲ್ಲಿ ವಿಷ ಬೀಜ ಬಿತ್ತುತ್ತಿದ್ದಾರೆ. ಹೋಮ ಹವನದಿಂದ ಮನಸ್ಸಿಗೆ ಶಾಂತಿ ಲಭಿಸುವುದೇ ಹೊರತು ಶಾಂತಿಭಂಗವಾಗುವುದಿಲ್ಲ ಎಂದು ಕಿಡಿಕಾರಿದರು.
(ದಟ್ಸ್ ಕನ್ನಡ ವಾರ್ತೆ)


Click it and Unblock the Notifications
