ಯುರೋಪ್ ಸಂಸ್ಥೆಗಾಗಿ ಇಸ್ರೋದಿಂದ ಉಪಗ್ರಹ ಉಡಾವಣೆ
ಬೆಂಗಳೂರು, ಡಿ. 11 : ಯುರೋಪ್ನ ಇಎಡಿಎಸ್ ಆಸ್ಟ್ರಿಯಮ್ ಸಂಸ್ಥೆಗಾಗಿ ತಯಾರಿಸಲಾಗಿರುವ 'ಡಬ್ಲೂ2ಎಮ್ ಉಪಗ್ರಹ'ವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ) ಡಿಸೆಂಬರ್ 20ರಂದು ಫ್ರೆಂಚ್ ಗಯಾನಾದಲ್ಲಿರುವ ಕೌರೊದಿಂದ ಉಡಾಯಿಸಲಿದೆ. ಇಎಡಿಎಸ್ ಆಸ್ಟ್ರಿಯಮ್ ಸಂಸ್ಥೆ ಯುರೋಪಿಯನ್ ಏರೋನಾಟಿಕ್ ಡಿಫೆನ್ಸ್ ಅಂಡ್ ಸ್ಪೇಸ್ (ಇಎಡಿಎಸ್) ಕಂಪನಿಯ ಅಂಗ ಸಂಸ್ಥೆ.
ಅಕ್ಟೋಬರ್ 22ರ ಚಂದ್ರಯಾನ 1 ಉಡಾವಣೆಯಿಂದಾಗಿ ರಷ್ಯಾ, ಅಮೆರಿಕ, ಜಪಾನ್, ಚೀನಾ ಮತ್ತು ಯುರೋಪಿ ಸ್ಪೇಸ್ ಏಜೆನ್ಸಿಗಳಿರುವ ಪ್ರತಿಷ್ಠಿತ ಕ್ಲಬ್ ಸೇರಿರುವ ಭಾರತದ ಮುಕುಟಕ್ಕೆ ಈ ಉಡಾವಣೆಯಿಂದ ಮತ್ತೊಂದು ಗರಿ ಸಿಕ್ಕಂತಾಗಲಿದೆ. 3462 ಕಿ.ಗ್ರಾಂ. ತೂಗುವ ವಾಣಿಜ್ಯ ಉದ್ದೇಶಕ್ಕಾಗಿ ತಯಾರಿಸಲಾಗಿರುವ ಈ ಕೃತಕ ಉಪಗ್ರಹ ಬೆಂಗಳೂರು ಮೂಲದ ಇಸ್ರೋ ತಯಾರಿಸಿರುವ ಅತ್ಯಂತ ಭಾರದ ಉಪಗ್ರಹ.
ಇದು 26 ತಿಂಗಳಲ್ಲಿ ತಯಾರಾಗಿದೆ. ಇಎಡಿಎಸ್ ಸಂಸ್ಥೆ ನಿಗದಿಪಡಿಸಿದ ಅವಧಿಯೊಳಗೇ ಉತ್ತಮ ಗುಣಮಟ್ಟದ ಉಪಗ್ರಹವನ್ನು ಇಸ್ರೋ ತಯಾರಿಸಿದೆ ಎಂದು ಇಸ್ರೋದ ವಕ್ತಾರ ಎಸ್ ಸತೀಶ್ ಹೆಮ್ಮೆಯಿಂದ ಹೇಳಿದ್ದಾರೆ. ಇಸ್ರೋದ ವಾಣಿಜ್ಯ ಜತೆಗಾರನಾಗಿರುವ ಆನ್ಟ್ರಿಕ್ಸ್ ಮತ್ತು ಇಎಡಿಎಸ್ ಆಸ್ಟ್ರಿಯಮ್ 2006 ಫೆಬ್ರವರಿಯಲ್ಲಿಯೇ ವಾಣಿಜ್ಯ ಉದ್ದೇಶಕ್ಕಾಗಿ ಉಪಗ್ರಹ ತಯಾರಿಸುವ ಒಪ್ಪಂದಕ್ಕೆ ಸಹಿ ಹಾಕಿದ್ದವು.
ಇವೆರಡು ಯಶಸ್ಸಿನಿಂದ ಉತ್ತೇಜಿತಗೊಂಡಿರುವ ಇಸ್ರೋ 2012ರಲ್ಲಿ ಸೂರ್ಯನ ಅಧ್ಯಯನಕ್ಕಾಗಿ 'ಆದಿತ್ಯ' ಉಪಗ್ರಹವನ್ನು ಉಡಾಯಿಸುವ ಉದ್ದೇಶ ಹೊಂದಿದೆ. ಅದೇ ವರ್ಷದಲ್ಲಿ ಗಗನಯಾತ್ರಿಯನ್ನು ಬಾಹ್ಯಾಕಾಶಕ್ಕೆ ಕಳಿಸಲಿದೆ ಮತ್ತು 2020ರಲ್ಲಿ ಮಾನವಸಹಿತ ಉಪಗ್ರಹವನ್ನು ಚಂದ್ರನಿಗೂ ಕಳುಹಿಸುವ ಗುರಿ ಇಟ್ಟುಕೊಂಡಿದೆ.
(ಏಜೆನ್ಸೀಸ್)


Click it and Unblock the Notifications
