ಯುದ್ಧ ಭೀತಿ : ಕಟ್ಟೆಚ್ಚರದಲ್ಲಿ ವಾಯು ದಳ
ನವದೆಹಲಿ, ಡಿ. 10 : ಪಾಕಿಸ್ತಾನದ ಭಯೋತ್ಪಾದಕರಿಂದ ಭಾರತದ ಮೇಲೆ ವೈಮಾನಿಕ ದಾಳಿ ಆಗುವ ಎಚ್ಚರಿಕೆಯನ್ನು ಗುಪ್ತಚರ ಇಲಾಖೆ ನೀಡಿರುವ ಹಿನ್ನೆಲೆಯಲ್ಲಿ ಅತಿ ಕಟ್ಟೆಚ್ಚರದಿಂದ ಇರುವಂತೆ ಭಾರತೀಯ ವಾಯು ದಳಕ್ಕೆ ಆದೇಶ ನೀಡಲಾಗಿದೆ. 2001ರಲ್ಲಿ ಆಪರೇಷನ್ ಪರಾಕ್ರಮ್ ಆದ ನಂತರ ಈ ಬಗೆಯ ಕಟ್ಟೆಚ್ಚರಿಕೆಯನ್ನು ನೀಡಲಾಗಿದ್ದಿಲ್ಲ.
ಉಗ್ರರನ್ನು ಯಾವುದೇ ಕಾರಣಕ್ಕೂ ಭಾರತಕ್ಕೆ ಒಪ್ಪಿಸುವುದಿಲ್ಲ. ಅಗತ್ಯ ಬಿದ್ದರೆ ಯುದ್ಧಕ್ಕೂ ಸಿದ್ಧ ಎಂದು ಪಾಕಿಸ್ತಾನ ಹೇಳಿರುವ ಹಿನ್ನೆಲೆಯಲ್ಲಿ ಎಚ್ಚರದಿಂದಿರುವಂತೆ ಭೂ, ವಾಯು ಮತ್ತು ನೌಕಾ ದಳಗಳಿಗೆ ಎಚ್ಚರಿಕೆ ನೀಡಲಾಗಿದೆ. ಭಾರತೀಯ ವಾಯು ದಳದ ಎಲ್ಲ ವಿಮಾನಗಳು ಬಾಂಬ್, ಮಿಸೈಲ್ ಗಳಿಂದ ಸುಸಜ್ಜಿತವಾಗಿದ್ದು ಯಾವುದೇ ಕ್ಷಣದಲ್ಲಿ ಪ್ರತಿದಾಳಿ ನಡೆಸಲು ಸನ್ನದ್ಧವಾಗಿವೆ. ನೌಕಾದಳ ಕೂಡ ಸರ್ವಸನ್ನದ್ಧವಾಗಿದ್ದು ಯುದ್ಧನೌಕೆಗಳನ್ನು ಪಶ್ಚಿಮ ಕರಾವಳಿಗುಂಟ ಸಿದ್ಧಗೊಳಿಸಿದೆ.
ಪಶ್ಚಿಮ ಮತ್ತು ನೈರುತ್ಯ ಕಮಾಂಡ್ ನ ವಾಯು ದಳದ ಎಲ್ಲ ಸಿಬ್ಬಂದಿಗಳ ರಜೆಯನ್ನು ರದ್ದುಗೊಳಿಸಲಾಗಿದೆ. ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಿದ್ಧರಾಗಿರಬೇಕಾಗಿ ಹೇಳಲಾಗಿದೆ. ಈ ಎಲ್ಲ ಸಿದ್ಧತೆಗಳನ್ನು ಭಾರತದ ರಕ್ಷಣೆಗೋಸ್ಕರ ಮಾಡಲಾಗಿದೆಯೇ ಹೊರತು ಪಾಕಿಸ್ತಾನದ ಮೇಲೆ ದಾಳಿ ನಡೆಸಲು ನಡೆಸಲಾಗಿಲ್ಲ.
ಮುಂಬೈನಲ್ಲಿ ಉಗ್ರರ ದಾಳಿ ನಡೆದ ನಂತರ ಮೂರೂ ರಕ್ಷಣಾ ವಿಭಾಗದ ಮುಖ್ಯಸ್ಥರು ಕೇಂದ್ರ ರಕ್ಷಣಾ ಸಚಿವ ಎಕೆ ಆಂಟೋನಿಯವರಿಗೆ ಭಾರತದ ದಳಗಳ ಸಿದ್ಧತೆಯ ಬಗ್ಗೆ ವಿವರ ನೀಡಿದ್ದರು.
(ಏಜೆನ್ಸೀಸ್)












Click it and Unblock the Notifications