ಕುಮಾರಸ್ವಾಮಿಗಿಂತ ಅನಿತಾ ಹೆಚ್ಚು ಆಸ್ತಿವಂತೆ
ತುಮಕೂರು, ಡಿ. 9 : ಮಧುಗಿರಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಅವರ ಒಟ್ಟು ಆಸ್ತಿ ಬರೋಬ್ಬರಿ 28 ಕೋಟಿ ರುಪಾಯಿಗಳು. ಸೋಮವಾರ ತಮ್ಮ ನಾಮಪತ್ರ ಸಲ್ಲಿಸಿದ ಅನಿತಾ ಅವರು ನಾಮಪತ್ರದ ಜೊತೆಗೆ ತಮ್ಮ ಒಟ್ಟಿ ಅಸ್ತಿ ವಿವರವನ್ನು ಸಲ್ಲಿಸಿದರು. ಪತಿ ಕುಮಾರಸ್ವಾಮಿಗಿಂತ ಹೆಚ್ಚು ಅಸ್ತಿಯನ್ನು ಹೆಗ್ಗಳಿಕೆಗೆ ಅನಿತಾ ಅವರು ಪಾತ್ರರಾಗಿದ್ದಾರೆ.
ಒಟ್ಟು 28 ಕೋಟಿ ರುಪಾಯಿ, 57 ಲಕ್ಷ 99 ಸಾವಿರ 933 ರು ಆಸ್ತಿ ಎಂದು ಅನಿತಾ ಘೋಷಿಸಿಕೊಂಡಿದ್ದಾರೆ. ತಮ್ಮ ಹೆಸರಿನಲ್ಲಿ 1, 12, 372 ರುಪಾಯಿ ಹಾಗೂ ಪತಿ ಕುಮಾರಸ್ವಾಮಿ ಅವರ ಹೆಸರಿನಲ್ಲಿ 66, 524 ರುಪಾಯಿ ನಗದು ಇದೆ ಎಂದು ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ಅಲ್ಲದೇ ತಮ್ಮ ಮೇಲೆ ಯಾವುದೇ ಅಪರಾಧ ಪ್ರಕರಣಗಳು ಇಲ್ಲ ಎಂದು ತಿಳಿಸಿದ್ದಾರೆ. ಅನಿತಾ ಹೆಸರಿನಲ್ಲಿ ಸ್ಟೇಟ್ ಬ್ಯಾಂಕ್ ಇಂಡಿಯಾ ಸೇರಿದಂತೆ 11 ಬ್ಯಾಂಕುಗಳಲ್ಲಿ 6,31,198 ರುಪಾಯಿ ಠೇವಣಿ ಇದೆ. ವಿವಿಧೆಡೆ ಬಾಂಡ್, ಡಿಬೆಂಚರ್ ಮತ್ತು ಷೇರುಗಳಲ್ಲಿ 9,23,15,000 ರುಪಾಯಿ ತೊಡಗಿಸಲಾಗಿದೆ.
ಅನಿತಾ ಕುಮಾರಸ್ವಾಮಿ ಹೆಸರಿನಲ್ಲಿ 13,58,045 ರುಪಾಯಿ ಮೌಲ್ಯದ ಚಿನ್ನಾಭರಣಗಳಿವೆ. 33,95,75 ರುಪಾಯಿ ಮೌಲ್ಯದ ಬೆಳ್ಳಿ ಆಭರಣಗಳಿವೆ. ಅನಿತಾ ಬಳಿ 40 ಕ್ಯಾರೆಟ್ ವಜ್ರದ ಆಭರಣಗಳಿವೆ. ಇವುಗಳ ಮೊತ್ತ ಒಟ್ಟು 8 ಲಕ್ಷ ರುಪಾಯಿ ಎಂದು ಪ್ರಮಾಣ ಪತ್ರದಲ್ಲಿ ವಿವರಿಸಲಾಗಿದೆ. ಇತರೆ ಆಸ್ತಿಗಳ ಪೈಕಿ ಅಮೋಘ ಕನ್ ಸ್ಟ್ರಕ್ಷನ್, ಡೆಕ್ಕನ್ ನೆಟ್ ವರ್ಕ್ , ಅಮೋಘ ಬ್ರಾಡ್ ಬ್ಯಾಂಡ್ ಸರ್ವಿಸ್ ಸೇರಿದಂತೆ ವಿವಿಧೆಡೆ 7,06,74,082 ಹಣವನ್ನು ವಿನಿಯೋಗಿಸಲಾಗಿದೆ. ಬೆಸ್ಕಾಂ ಠೇವಣಿ ಸೇರಿದಂತೆ ವಿವಿಧ ಫರ್ಮ್ ಗಳಲ್ಲಿ ಹಣವನ್ನು ತೊಡಗಿಸಲಾಗಿದೆ.
ಅನಿತಾ ಕುಮಾರಸ್ವಾಮಿ ಹೆಸರಿನಲ್ಲಿ ದೊಡ್ಡ ನೆಕ್ಕುಂದಿಯಲ್ಲಿ ಆರೂವರೆ ಕೋಟಿ ಮೌಲ್ಯದ ಸ್ಥಿರಾಸ್ತಿ, ಜಯನಗರ4 ನೇ ಬ್ಲಾಕ್ ನಲ್ಲಿ ಮೂರು ಕೋಟಿಗಿಂತ ಅಧಿಕ ಮೌಲ್ಯದ ಸ್ಥಿರಾಸ್ತಿ ಇದೆ, ಅನಿತಾ ಅವರು ಮೂರು ಬ್ಯಾಂಕ್ ಸೇರಿದಂತೆ ಒಟ್ಟು 6 ಕೋಟಿ ರು ಗಿಂತ ಹೆಚ್ಚು ಸಾಲ ಮಾಡಿದ್ದಾರೆ. ಬ್ಯಾಂಕ್ ಸಾಲವಲ್ಲದೇ ಇನ್ನಿತರ ಮೂಲಗಳಿಂದ 6 ಕೋಟಿ ಗಿಂತ ಮಿಕ್ಕ ಸಾಲ ಮಾಡಿದ್ದಾರೆ. ಅಪೆಕ್ಸ್ ಬ್ಯಾಂಕ್ ಸೇರಿ 9 ಬ್ಯಾಂಕುಗಳಲ್ಲಿ 7 ಲಕ್ಷ ರು ಗಿಂತ ಹೆಚ್ಚು ಹಣವನ್ನು ಹೂಡಲಾಗಿದೆ. ಬಾಂಡ್ ರೂಪದಲ್ಲಿ 17 ಕೋಟಿ ರುಗಳನ್ನು ತೊಡಗಿಸಲಾಗಿದೆ. ಬೇರೆ ಹಣಕಾಸು ಯೋಜನೆಗಳು, ಪೋಸ್ಟ್ ಆಫೀಸ್ ಎನ್ಎಸ್ಎಸ್, ಎಲ್ಐಸಿ ಇತ್ಯಾದಿ ಸೇರಿ ಕೇವಲ 50 ಸಾವಿರ ರುಗಳನ್ನು ಹೂಡಲಾಗಿದೆ.
(ದಟ್ಸ್ ಕನ್ನಡ ವಾರ್ತೆ)
ಅನಿತಾ ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆ












Click it and Unblock the Notifications