9/11 ರೀತಿ ವೈಮಾನಿಕ ದಾಳಿ ಸಾಧ್ಯತೆ
ನವದೆಹಲಿ, ಡಿ. 4 : ಅಲ್ ಖೈದಾ ಉಗ್ರರು ಅಮೆರಿಕದ WTC ಜೋಡಿ ಕಟ್ಟಡದ ಮೇಲೆ ನಡೆಸಿದ ವೈಮಾನಿಕ ದಾಳಿಯ ಮಾದರಿಯಲ್ಲಿಯೇ ದೇಶದ ಬೆಂಗಳೂರು, ಚೆನ್ನೈ ಹಾಗೂ ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ಮೇಲೆ ವೈಮಾನಿಕ ದಾಳಿ ನಡೆಸುವ ಸಂಚು ಉಗ್ರರು ರೂಪಿಸಿರುವುದು ಕೇಂದ್ರ ಗುಪ್ತಚರ ಇಲಾಖೆ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಮೂರು ವಿಮಾನ ನಿಲ್ದಾಣಗಳಿಗೆ ಭಾರಿ ಭದ್ರತೆಯನ್ನು ನಿಯೋಜಿಸಲಾಗಿದೆ ಎಂದು ಏರ್ ಚೀಪ್ ಮಾರ್ಷಲ್ ಫಾಲಿ ಹೋಮಿ ಮೇಜರ್ ಸ್ಪಷ್ಟಪಡಿಸಿದ್ದಾರೆ.
ನಗರದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡುತ್ತಿದ್ದರು. ಉಗ್ರರ ಬೆದರಿಕೆ ಹಿನ್ನೆಲೆಯಲ್ಲಿ ರಕ್ಷಣಾ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ರಕ್ಷಣಾ ಸಚಿವ ಎ ಕೆ ಎಂಟನಿ ಜತೆಗೆ ಸಮಗ್ರವಾಗಿ ಚರ್ಚೆ ಮಾಡಲಾಗಿದೆ. ಬೆದರಿಕೆಯೊಡ್ಡಿರುವ ಬೆಂಗಳೂರು. ಚೆನ್ನೈ ಹಾಗೂ ದೆಹಲಿ ವಿಮಾನ ನಿಲ್ದಾಣಗಳಿಗೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
ಕಳೆದ ರಾತ್ರಿಯೇ ಈ ಬಗ್ಗೆ ನಮಗೆ ಮಾಹಿತಿ ದೊರೆಯಿತು. ತಕ್ಷಣ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮುಂದೆ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ನಡೆಸಿದ್ದೇವೆ. ವೈಮಾನಿಕ ದಾಳಿ ತಡೆಯಲು ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ. ಡಿ. 6 ರಂದು ಬಾಬ್ರಿ ಮಸೀದಿ ಧ್ವಂಸ ದಿನಾಚರಣೆಯಲ್ಲಿ ಈ ಕೃತ್ಯ ಎಸಗುವ ಸಂಚನ್ನು ಉಗ್ರರು ರೂಪಿಸಿದ್ದಾರೆ ಎಂದು ಗುಪ್ತಚರ ಇಲಾಖೆ ತಿಳಿಸಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications