ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಜವಾಣಿ :ಚೆನ್ನಿಗಪ್ಪ ಮೇಲೆ ರೆಡ್ಡಿ ರೊಕ್ಕ

By Staff
|
Google Oneindia Kannada News

ಬೆಂಗಳೂರು, ಡಿ. 2 : ರಾಜ್ಯದಲ್ಲಿ ಉಪಚುನಾವಣೆಯ ಕಾವು ದಿನೆದಿನೇ ಹೆಚ್ಚಾಗತೊಡಗಿದೆ. ರಾಜಕೀಯದಲ್ಲಿ ಯಾರೂ ಶತೃಗಳಲ್ಲ, ಯಾರೂ ಮಿತ್ರರಲ್ಲ ಎನ್ನುವುದಕ್ಕೆ ಇನ್ನೊಂದು ತಾಜ ಉದಾಹರಣೆ ಕೇಳಿ . ಒಂದು ಕಾಲದಲ್ಲಿ ಬದ್ಧ ವೈರಿಗಳೆಂದು ಬಿಂಬಿತರಾಗಿದ್ದ ಮಾಜಿ ಸಚಿವ ಸಿ. ಚೆನ್ನಿಗಪ್ಪ ಹಾಗೂ ಪ್ರವಾಸೋಧ್ಯಮ ಸಚಿವ ಜನಾರ್ದನರೆಡ್ಡಿ ಇದೀಗ ಸಕತ್ ಪ್ರೆಂಡ್ಸ್. ಮಧುಗಿರಿ ಕ್ಷೇತ್ರದಿಂದ ಬಿಜೆಪಿ ಪಕ್ಷದಿಂದ ಕಣಕ್ಕಿಳಿಯಲಿರುವ ಚೆನ್ನಿಗಪ್ಪ ಅವರ ಚುನಾವಣಾ ವೆಚ್ಚವನ್ನು ಜನಾರ್ದನರೆಡ್ಡಿ ವಹಿಸಿಕೊಂಡಿದ್ದಾರೆ. ಹೇಗಿದೆ ನೋಡ್ರಿ ರಾಜಕೀಯ ಅಂತ ಜನರು ಮತ್ತೆ ಮತ್ತೆ ಮಾತನಾಡಿಕೊಳ್ಳುವಂತಾಗಿದೆ.

ನಿಮಗೆ ನೆನಪಿರಬಹುದು. 2006 ರ ಸಮಯ, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಕಾಲಘಟ್ಟ. ಅರಣ್ಯ ಮಂತ್ರಿಯಾಗಿ ಸಿ. ಚೆನ್ನಿಗಪ್ಪ ಪೀಠದಲ್ಲಿ ವಿರಾಜಮಾನರಾಗಿದ್ದರು. ಕುಮಾರಸ್ವಾಮಿ ಸರ್ಕಾರದಲ್ಲಿ ಹೊತ್ತಿ ಉರಿದ ಗಣಿ ಬೆಂಕಿಯಲ್ಲಿ ಕೇಂದ್ರ ಬಿಂದು ಇದೇ ಚೆನ್ನಿಗಪ್ಪ. ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಅರಣ್ಯ ಮಂತ್ರಿ ಸಿ ಚೆನ್ನಿಗಪ್ಪ ಇಬ್ಬರೂ ಸೇರಿ ಗಣಿ ಮಾಲೀಕರಿಂದ ಬರೋಬ್ಬರಿ 150 ಕೋಟಿ ರುಪಾಯಿಯಷ್ಟು ಹಣ ವಸೂಲಿ ಮಾಡಿದ್ದಾರೆ ಎಂದು ಗಣಿ ದೊರೆ ಜನಾರ್ದನರೆಡ್ಡಿ ನೇರ ಆರೋಪ ಮಾಡಿದ್ದರು.

ಅಲ್ಲಿಂದ ಶುರುವಾಗಿದ್ದ ಜಗಳ, ಪರಸ್ಪರ ಆರೋಪ ಪ್ರತ್ಯಾರೋಪಗಳ ದಂಡಿದಂಡಿಯಾಗಿ ಬಂದು ಹೋದವು. ರಾಜ್ಯದ ಅಮಾಯಕ ಮತದಾರರಿಗೆ ಸರ್ಕಾರ ಹಾಗೂ ರೆಡ್ಡಿ ನಡುವಿನ ಜಗಳ ಮನರಂಜನೆಯನ್ನೂ ನೀಡಿತ್ತು. ಕುಮಾರಸ್ವಾಮಿ ಹಣ ವಸೂಲಿ ಮಾಡಿರುವ ಬಗ್ಗೆ ತಮ್ಮ ಬಳಿ ಸಾಕ್ಷ್ಯಾಧಾರಗಳಿವೆ ಎಂದು ಹೇಳಿಕೆ ನೀಡಿ, ಅದಕ್ಕೊಂದು ಮಹೂರ್ತ ಫಿಕ್ಸ್ ಮಾಡಿ, ರಾಜ್ಯ ಹಾಗೂ ರಾಷ್ಟ್ರ ಮಾದ್ಯಮಗಳ ಮುಂದೆ ಸಿಡಿ ಬಿಡುಗಡೆ ಮಾಡುವುದಾಗಿ ರೆಡ್ಡಿ ಹೇಳಿದ್ದರು. ಅದರಂತೆ ನಡೆದುಕೊಂಡರು.

ಆದರೆ ಸಿಡಿ ಬಿಡುಗಡೆ ಮಾಡಿದರಾದರೂ ಅವರಿಂದ ಸರ್ಕಾರಕ್ಕೆ ಯಾವ ಅಪಾಯವೂ ಅಗಲಿಲ್ಲ. ಈ ಜಗಳ ನ್ಯಾಯಾಲಯದ ಮೆಟ್ಟಿಲೇರಿದೆ. ಇನ್ನು ಮುಗಿದಿಲ್ಲ. ನಾನು ದೇವೇಗೌಡರ ಮನೆಯ ನಿಯತ್ತಿನ ನಾಯಿ ಎಂದು ಹೇಳಿಕೆ ನೀಡಿದ್ದ ಚೆನ್ನಿಗಪ್ಪ ಇಂದು ಮಧುಗಿರಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ. ಹಣ ನೀಡುವ ಉಸ್ತುವಾರಿಯನ್ನು ರೆಡ್ಡಿ ವಹಿಸಿಕೊಂಡಿದ್ದಾರೆ ಎನ್ನವ ಸುದ್ದಿ ರಾಜಕೀಯ ಮೊಗಸಾಲೆಗಳಲ್ಲಿ ಝಣಝಣ ಎನ್ನುತ್ತಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಚೆನ್ನಿಗಪ್ಪ, ಬಿಜೆಪಿಯಿಂದ ಮಧುಗಿರಿ ಕ್ಷೇತ್ರದಲ್ಲಿ ಅಖಾಡಕ್ಕೆ ಇಳಿಯಲಿದ್ದೇನೆ. ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಪ್ರವಾಸೋದ್ಯಮ ಸಚಿವ ಜನಾರ್ದನರೆಡ್ಡಿ ಇಬ್ಬರೂ ಕೂಡಾ ನಾನು ಬಿಜೆಪಿ ಸೇರಲು ಕಾರಣರಾಗಿದ್ದಾರೆ. ನನ್ನ ಚುನಾವಣಾ ವೆಚ್ಚವನ್ನು ಸ್ವತಃ ರೆಡ್ಡಿ ವಹಿಸಿಕೊಳ್ಳುವುದಾಗಿ ರೆಡ್ಡಿ ಹೇಳಿದ್ದಾರೆಂದು ಹೇಳುವುದರ ಮೂಲಕ ರಾಜಕೀಯ ವೀಕ್ಷಕರ ಹುಬ್ಬು ಮೇಲೇರುವಂತೆ ಮಾಡಿದ್ದಾರೆ ಚೆನ್ನಿಗಪ್ಪ. ಜತೆಗೆ ಚುನಾವಣೆ ಪ್ರಚಾರಕ್ಕೂ ಶೀಘ್ರದಲ್ಲಿ ರೆಡ್ಡಿ ಮಧುಗಿರಿಗೆ ಆಗಮಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ. ದೇವೇಗೌಡರ ಕುಟಿಲ ರಾಜಕಾರಣಕ್ಕೆ ಬೇಸತ್ತು ರೆಡ್ಡಿ ಸಮರ ಸಾರಿದ್ದರೆ ಹೊರತು, ಅದು ನನ್ನ ವಿರುದ್ಧವಲ್ಲ ಎಂದು ಚೆನ್ನಿಗಪ್ಪ ಸಮರ್ಥನೆ ನೀಡುತ್ತಾರೆ. ಇದು ಮಜಾವಾಣಿ ಅಲ್ಲ ಸ್ವಾಮೀ, ಕರ್ನಾಟಕ ರಾಜಕೀಯದ ನಿಜವಾಣಿ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X