ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿ ಚಿದಂಬರಂ ಭಾರತದ ನೂತನ ಗೃಹಸಚಿವ

By Staff
|
Google Oneindia Kannada News

ನವದೆಹಲಿ, ನ. 30 : ದೇಶವನ್ನೇ ತಲ್ಲಣಗೊಳಿಸಿದ್ದ ಮುಂಬೈ ಭಯೋತ್ಪಾದನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದಲ್ಲಿ ಭಾರಿ ಬದಲಾವಣೆಗಳು ಆರಂಭವಾಗಿವೆ. ವಿತ್ತ ಸಚಿವ ಪಿ ಚಿದಂಬರಂ ನೂತನ ಗೃಹ ಸಚಿವರಾಗಿ ನೇಮಕವಾಗಿದ್ದಾರೆ. ಪ್ರಧಾನಮಂತ್ರಿ ಮನಮೋಹನ್ ಸಿಂಗ್ ವಿತ್ತ ಖಾತೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.

ರಾಷ್ಟ್ರದ ಭದ್ರತೆಯಲ್ಲಿ ಸತತ ವೈಫಲ್ಯ ಕಂಡು ಭಾರಿ ಟೀಕೆಗೆ ಗುರಿಯಾಗಿದ್ದ ಕೇಂದ್ರದ ಮಾಜಿ ಗೃಹ ಸಚಿವ ಶಿವರಾಜ್ ಪಾಟೀಲ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಎಂ ಕೆ ನಾರಾಯಣನ್ ಈಗಾಗಲೇ ರಾಜೀನಾಮೆ ನೀಡಿದ್ದಾರೆ. ಮಹಾರಾಷ್ಟ್ರ ಮುಖ್ಯಮಂತ್ರಿ ವಿಲಾಸ್ ರಾವ್ ದೇಶಮುಖ್ ಮೇಲೆ ರಾಜೀನಾಮೆ ನೀಡುವಂತೆ ಭಾರಿ ಒತ್ತಡ ಆರಂಭವಾಗಿದ್ದು, ಯಾವ ಕ್ಷಣದಲ್ಲಾದರೂ ದೇಶಮುಖ್ ಕೂಡಾ ತಮ್ಮ ಸ್ಥಾನ ನೀಡುವ ಸಾಧ್ಯತೆಗಳಿವೆ. ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ಪೃಥ್ವಿರಾಜ್ ಚೌಹಾಣ್ ಅಧಿಕಾರ ಸ್ವೀಕರಿಸುವ ಬಹುತೇಕ ನಿಚ್ಚಳವಾಗಿದೆ.

ಇಂದು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಶಿವರಾಜ್ ಪಾಟೀಲ್ ಅವರ ಕಾರ್ಯವೈಖರಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತವಾಯಿತು. ಶನಿವಾರ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಭೆಯಲ್ಲಿ ಪಾಟೀಲ್ ಅವರನ್ನು ಸ್ಥಾನದಿಂದ ಕಿತ್ತು ಹಾಕಬೇಕು. ಇಲ್ಲದಿದ್ದರೆ ಸರ್ಕಾರ ಮತ್ತಷ್ಟು ಮುಖಭಂಗ ಅನುಭವಿಸಲಿದೆ. ದೇಶದಲ್ಲಿ ನಡೆದ ಸ್ಫೋಟಗಳ ಸಂದರ್ಭದಲ್ಲಿ ಶಿವರಾಜ್ ಪಾಟೀಲ್ ಪ್ರತಿಕ್ರಿಯಿಸುವ ದಾಟಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ರೀತಿಯಲ್ಲಿ ಇವೆ. ಕೂಡಲೆ ಅವರಿಂದ ರಾಜೀನಾಮೆ ಪಡೆದುಕೊಳ್ಳಿ ಎಂದು ಕಾರ್ಯಕಾರಿ ಸಮಿತಿಯ ಸದಸ್ಯರೆಲ್ಲರೂ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರನ್ನು ಒತ್ತಾಯಿಸಿದ್ದರು.

ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಕೂಡಾ ಶಿವರಾಜ್ ಪಾಟೀಲ್ ಅವರ ಅದಕ್ಷತೆಯ ಬಗ್ಗೆ ಕೆಂಡಾಮಂಡಲವಾಗಿದ್ದರು. ಶನಿವಾರ ನಡೆದ ಕಾರ್ಯಕಾರಿ ಸಮಿತಿಗೆ ಶಿವರಾಜ್ ಪಾಟೀಲ್ ಅವರನ್ನು ಅಹ್ವಾನಿಸಿರಲಿಲ್ಲ. ಅದನ್ನು ಅರಿತ ಪಾಟೀಲ್ ಇಂದು ತಮ್ಮ ರಾಜೀನಾಮೆ ಪತ್ರವನ್ನು ಪ್ರಧಾನಮಂತ್ರಿಯವರಿಗೆ ಸಲ್ಲಿಸಿದ್ದಾರೆ. ಆದರೆ ರಾಷ್ಟ್ರೀಯ ಸಲಹೆಗಾರ ಎಂ ಕೆ ನಾರಾಯಣನ್ ನೀಡಿರುವ ರಾಜೀನಾಮೆಯನ್ನು ಪ್ರಧಾನಮಂತ್ರಿ ತಿರಸ್ಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇನ್ನೊಂದಡೆ, ಮಹಾರಾಷ್ಟ್ರ ಮುಖ್ಯಮಂತ್ರಿ ವಿಲಾಸ್ ದೇಶಮುಖ್ ತಲೆದಂಡಕ್ಕೆ ವೇದಿಕೆ ಸಿದ್ದವಾಗಿದೆ. ಆವರಿಂದ ಯಾವ ಕ್ಷಣದಲ್ಲಾದರೂ ರಾಜೀನಾಮೆ ಪಡೆಯಬಹುದಾಗಿದೆ. ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ಫೃಥ್ವಿರಾಜ್ ಚೌಹಾಣ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಈ ಬೆಳವಣಿಗೆಗೆ ಪ್ರತಿಕ್ರಿಯಿಸಿರುವ ದೇಶಮುಖ್, ನನ್ನಿಂದಾಗಿರುವ ತಪ್ಪೇನು, ನಾನ್ಯಾಕೆ ರಾಜೀನಾಮೆ ನೀಡಲಿ ಎಂದು ಪ್ರಶ್ನಿಸಿದ್ದಾರೆ.

ಸರ್ಕಾರಕ್ಕೆ ಮುಜುಗರ ತರುವ ಹೇಳಿಕೆ ನೀಡಿದ್ದ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಆರ್ ಆರ್ ಪಾಟೀಲ್ ಮೇಲೆ ಕೂಡಾ ರಾಜೀನಾಮೆ ನೀಡುವಂತೆ ಒತ್ತಡ ಹೆಚ್ಚಿದೆ. ಇದರ ಜೊತೆಗೆ ಕೇಂದ್ರ ಖಾತೆ ಕಾರ್ಯದರ್ಶಿ ಮಧುಕರ್ ಗುಪ್ತಾ, ಕೇಂದ್ರ ಗುಪ್ತಚರ ಇಲಾಖೆಯ ಪಿ ಸಿ ಹವಾಲ್ದಾರ್ ಅವರನ್ನು ವರ್ಗಾವಣೆ ಮಾಡುವ ಇಂಗಿತವನ್ನು ಪ್ರಧಾನಮಂತ್ರಿ ವ್ಯಕ್ತಪಡಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X