ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಧಾನಿಯಿಂದ ಅದೇ ಭರವಸೆಯ ರಾಗ

By Staff
|
Google Oneindia Kannada News

ನವದೆಹಲಿ, ನ. 27 : ದೇಶದ ವಾಣಿಜ್ಯ ನಗರಿ ಮುಂಬೈನಲ್ಲಿ ಉಗ್ರರು ನಡೆಸಿದ ಮಾರಣಹೋಮವನ್ನು ಪ್ರಧಾನಮಂತ್ರಿ ಡಾ. ಮನಮೋಹನ್ ಸಿಂಗ್ ತೀವ್ರವಾಗಿ ಖಂಡಿಸಿದ್ದಾರೆ. ಭಯೋತ್ಪಾದನೆಯನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ಕಟಿಬದ್ಧವಾಗಿದ್ದು, ಜನರು ಯಾವ ಕಾರಣಕ್ಕೂ ದೃತಿಗೆಡಬಾರದು ಎಂದು ಗುರುವಾರ ಸಂಜೆ 4 ಗಂಟೆಗೆ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ದೇಶವಾಸಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

ದೇಶದ ಶಾಂತಿ ಕದಡುವ ಭಯೋತ್ಪಾದಕರ ಸಂಚು ಇನ್ನು ನಡೆಯುವುದಿಲ್ಲ. ಭಾರತೀಯ ಇಂತಹ ಗೊಡ್ಡು ಬೆದರಿಕೆಗೆ ಹೆದರುವುದಿಲ್ಲ. ದೇಶದಲ್ಲಿ ಶಾಂತಿ ಸ್ಥಾಪಿಸಿ, ಉಗ್ರರನ್ನು ಮಟ್ಟಹಾಕಲು ಸರ್ಕಾರ ಮುಂದಿನ ದಿನಗಳಲ್ಲಿ ಇನ್ನಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಲಿದೆ. ಭಯೋತ್ಪಾದನೆ ನಿಗ್ರಹಕ್ಕೆ ನೂತನ ಕಾನೂನು ಜಾರಿಗೆ ತರಬೇಕು ಎಂದು ಪ್ರತಿಪಕ್ಷಗಳು ಒತ್ತಾಯಿಸುತ್ತವೆ. ಆದರೆ, ಈಗಿರುವ ರಾಷ್ಟ್ರೀಯ ಭದ್ರತಾ ಕಾನೂನು ಈ ದುಷ್ಕೃತ್ಯಗಳನ್ನು ಮಟ್ಟಹಾಕಲು ಸಾಕಾಗುತ್ತದೆ. ಪೊಲೀಸ್ ಇಲಾಖೆ ದೇಶದದಾದ್ಯಂತ ಸಮರ್ಥ ರೀತಿಯಲ್ಲಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಭಯೋತ್ಪಾದನೆ ನಿಗ್ರಹಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ಶಕ್ತಿಶಾಲಿಯಾದ ನೂತನ ನಿಗ್ರಹ ಪಡೆಯೊಂದನ್ನು [ Federal Agency] ಸ್ಫಾಪನೆ ಮಾಡಲು ಸರ್ಕಾರ ಚಿಂತನೆ ನಡೆಸಿದೆ. ಈ ನಿಟ್ಟಿನಲ್ಲಿ ಸರ್ಕಾರ ಮುಂದಿನ ದಿನಗಳಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ. ಮುಂಬೈನಲ್ಲಿ ನಡೆಯುತ್ತಿರುವ ಉಗ್ರರ ಅಟ್ಟಹಾಸದಲ್ಲಿ ವಿದೇಶಿ ಸಂಘಟನೆಗಳ ಕೈವಾಡವಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದಿದೆ.

ಪ್ರಜೆಗಳ ಮೇಲೆ ಎರಗಿರುವ ಅಪಾಯಗಳನ್ನು ಮನಗಂಡಿದ್ದೇವೆ, ಇದಕ್ಕಾಗಿ ನಾವು ಕೂಡಾ ಸ್ಪಷ್ಟವಾದ ಹೆಜ್ಜೆಯನ್ನು ಇಡಬೇಕಾಗುತ್ತದೆ. ಈ ಬಗ್ಗೆ ನೆರೆ ರಾಷ್ಟ್ರಗಳ ಮುಖ್ಯಸ್ಥರು ದೇಶದ್ರೋಹ ಕೃತ್ಯದಲ್ಲಿ ತೊಡಗಿರುವವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಪರೋಕ್ಷವಾಗಿ ಪಾಕಿಸ್ತಾನಕ್ಕೆ ತಾಕೀತು ಮಾಡಿದರು. ದೇಶದ ಶಾಂತಿ ಹಾಳು ಮಾಡುವ ಕೃತ್ಯದಲ್ಲಿ ತೊಡಗಿರುವವರು ಯಾರೇ ಆದರೂ ಅಂತವರ ವಿರುದ್ಧ ಉಗ್ರ ಕ್ರಮಕೈಗೊಳ್ಳಲು ಹಿಂದೇಟು ಹಾಕುವುದಿಲ್ಲ ಎಂದು ಪ್ರಧಾನಿ ಮನಮೋಹನ್ ಸಿಂಗ್ ಖಾರವಾಗಿ ಪ್ರತಿಕ್ರಿಯಿಸಿದರು.

ಹುತಾತ್ಮ ಯೋಧರಿಗೆ ನಮನ : ಉಗ್ರರು ನಡೆಸಿದ ಗುಂಡಿನ ಚಕಮಕಿಯಲ್ಲಿ ಹುತಾತ್ಮಾರಾದ ಮಹಾರಾಷ್ಟ್ರ ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ, ಎಸಿಪಿ ವಿಜಯ್ ಸಲಸ್ಕರ್ ಹಾಗೂ ಡಿಸಿಪಿ ಅಶೋಕ್ ಅಮ್ಟೆ ಅವರ ಸಾವು ದೇಶಕ್ಕೆ ತುಂಬಲಾರದ ನಷ್ಟ. ಆ ಧೀರ ಯೋಧರ ಸಾಧನೆಯನ್ನು ಎಷ್ಟುಕೊಂಡಾಡಿದರೂ ಸಾಲದು. ಜೀವವನ್ನೆ ಪಣಕ್ಕಿಟ್ಟು ಹೋರಾಟ ನಡೆಸಿದ ಈ ವ್ಯಕ್ತಿಗಳು ನಿಜವಾದ ಹಿರೋಗಳು ಎಂದು ಮನಮೋಹನ್ ಸಿಂಗ್ ಪ್ರಶಂಸೆ ವ್ಯಕ್ತಪಡಿಸಿದರು.

ಹುತಾತ್ಮ ಅಧಿಕಾರಿಗಳ ಕುಟಂಬಗಳಿಗೆ ಆಕಸ್ಮಿಕವಾಗಿ ಒದಗಿ ಬಂದ ದುಖಃವನ್ನು ತಡೆದುಕೊಳ್ಳುವ ಶಕ್ತಿಯನ್ನು ಆ ಭಗವಂತ ಕರುಣಿಸಲಿ. ಮೃತ ಅಧಿಕಾರಿಗಳ ಹಾಗೂ ಪೊಲೀಸರ ಕುಟುಂಬಗಳಿಗೆ ಸರ್ಕಾರ ಸಮಸ್ತ ರೀತಿಯ ನೆರವನ್ನು ನೀಡಲಿದೆ ಎಂದು ಅವರು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.
(ಯುಎನ್ ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X