ರೆಡ್ಡಿ ಹೇಳಿಕೆ ಕೇವಲ ಸಾಂದರ್ಭಿಕ: ಬಿಜೆಪಿ
ರಾಯಚೂರು, ನ. 26 : ಮುಖ್ಯಮಂತ್ರಿ ಯಡಿಯೂರಪ್ಪ ನಮ್ಮ ನಾಯಕರು, ಬಿಜೆಪಿಯಲ್ಲಿ ಯಾವುದೇ ಆಂತರಿಕ ಸಮಸ್ಯೆ ಇಲ್ಲ. ಎಲ್ಲ ಶಾಸಕರು ಸಂತೃಪ್ತಿಯಿಂದ ತಮ್ಮ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಲ್ಲಿ ನಿರತರಾಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಡಿ ವಿ ಸದಾನಂದಗೌಡ ಸ್ಪಷ್ಟಪಡಿಸಿದರು.
ನಗರದಲ್ಲಿ ಮಾದ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡುತ್ತಿದ್ದರು. ಮುಖ್ಯಮಂತ್ರಿ ಪಟ್ಟಕ್ಕೆ ಶ್ರೀರಾಮುಲು ಅರ್ಹರು ಎಂದು ಸಚಿವ ಜನಾರ್ದನರೆಡ್ಡಿ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಸದಾನಂದಗೌಡ, ಜನಾರ್ದನರೆಡ್ಡಿ ಯಡಿಯೂರಪ್ಪ ವಿರುದ್ಧ ಶಕ್ತಿ ಪ್ರದರ್ಶನಕ್ಕಾಗಿ ಈ ಮಾತನ್ನು ಹೇಳಿಲ್ಲ. ವಾಲ್ಮೀಕಿ ಜನಾಂಗದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರೆಡ್ಡಿ, ರಾಮುಲು ಮೇಲಿನ ಅಭಿಮಾನದಿಂದ ಸಾಂದರ್ಬಿಕವಾಗಿ ಈ ಹೇಳಿಕೆ ನೀಡಿದ್ದಾರೆ. ಇದಕ್ಕೆ ಹೆಚ್ಚಿನ ಮಹತ್ವವಿಲ್ಲ ನೀಡುವ ಅವಶ್ಯಕತೆ ಇಲ್ಲ ಎಂದು ತೀವ್ರ ಕುತೂಹಲ ಕೆರಳಿಸಿದ್ದ ಸುದ್ದಿಗೆ ತೆರೆ ಎಳೆದರು.
ಜನಾರ್ದನರೆಡ್ಡಿ ಹೇಳಿಕೆಗೆ ಕಳೆದ ಎರಡು ದಿನಗಳಿಂದ ಅನೇಕರು ತಮ್ಮ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಇದರಿಂದ ಬಿಜೆಪಿ ಸರ್ಕಾರದಲ್ಲಿ ಏನೋ ನಡೆದು ಬಿಡುತ್ತದೆ ಎಂದು ಕನಸು ಕಾಣುತ್ತಿದ್ದಾರೆ. ಆದರೆ, ಅವರ ಕನಸು ಭಗ್ನಗೊಳ್ಳುವುದು ಖಚಿತ ಎಂದು ಸದಾನಂದಗೌಡ ಪರೋಕ್ಷವಾಗಿ ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದರು. ಯಡಿಯೂರಪ್ಪ ಅಡಳಿತದಲ್ಲಿ ರೆಡ್ಡಿಗಳಿಗೆ ನಂಬಿಕೆ ಇಲ್ಲ. ಆದ್ದರಿಂದ ಶ್ರೀರಾಮುಲು ಅವರನ್ನು ಮುಖ್ಯಮಂತ್ರಿ ಮಾಡಲು ವೇದಿಕೆಯನ್ನು ಸಿದ್ದಪಡಿಸುತ್ತಿದ್ದಾರೆ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದ್ದರು. ಶ್ರೀರಾಮುಲು ಮುಖ್ಯಮಂತ್ರಿಯಾದರೆ ಕರ್ನಾಟಕ ಪಾವನವಾಗಲಿದೆ ಎಂದು ಅವರು ಕಟುಕಿದ್ದರು.
ಬಿಜೆಪಿ ಆತ್ಮಾವಲೋಕನ ಸಭೆಯಲ್ಲಿ ಕೆಲ ಶಾಸಕರು ಬಹಿರಂಗವಾಗಿ ತಮ್ಮ ಅಭಿಪ್ರಾಯವನ್ನು ಮಂಡಿಸಿರುವುದರಲ್ಲಿ ತಪ್ಪೇನಿದೆ. ಅಲ್ಲದೆ ಬಿಜೆಪಿಯಲ್ಲಿ ಆಂತರಿಕ ಪ್ರಜಾಪ್ರಭುತ್ವ ಇರುವ ಪಕ್ಷವಾಗಿದೆ. ಹಾಗಾಗಿ ಶಾಸಕರು ತಮ್ಮ ನೋವು ನಲಿವುಗಳನ್ನು ಹಂಚಿಕೊಳ್ಳುವುದರಲ್ಲಿ ಯಾವ ಲೋಪವೂ ಇಲ್ಲ ಎಂದು ಹೇಳಿದರು. ಸರ್ಕಾರ ಮಂಡಿಸಿರುವ ಬಜೆಟ್ ನ ಎಲ್ಲ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಇನ್ನಷ್ಟು ಚುರುಕಿನಿಂದ ಕೆಲಸ ಮಾಡಬೇಕಾದ ಅಗತ್ಯ ಇರುವುದನ್ನು ಶಾಸಕರಿಗೆ ಮನವರಿಕೆ ಕೊಡಲಾಗಿದೆ. ಮುಂದಿನ ಉಪಚುನಾವಣೆಯಲ್ಲಿ ಬಿಜೆಪಿ 100 ಕ್ಕೆ 100 ರಷ್ಟು ಪಲಿತಾಂಶ ಬರಲಿದೆ. ಇದರಲ್ಲಿ ಸಂಶಯಬೇಡ ಎಂದು ಸದಾನಂದಗೌಡ ವಿಶ್ವಾಸದಿಂದ ಹೇಳಿದರು.
(ದಟ್ಸ್ ಕನ್ನಡ ವಾರ್ತೆ)


Click it and Unblock the Notifications
