ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನಲ್ಲಿ ನ್ಯಾನೊ ತಂತ್ರಜ್ಞಾನ ಪರಿಷೆ

By Staff
|
Google Oneindia Kannada News

ಬೆಂಗಳೂರು, ನ. 26 : ರಾಜ್ಯ ಸರ್ಕಾರದ ಮಾಹಿತಿ ತಂತ್ರಜ್ಞಾನ ಇಲಾಖೆ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಜೆಎನ್‌ಸಿಎಎಸ್‌ಆರ್ (ಜವಹರಲಾಲ್ ನೆಹರು ಮುಂದುವರಿದ ವೈಜ್ಞಾನಿಕ ಸಂಶೋಧನಾ ಕೇಂದ್ರ) ನಗರದ ಗ್ರ್ಯಾಂಡ್ ಅಶೋಕಾ ಹೋಟೆಲ್‌ನಲ್ಲಿ ಡಿಸೆಂಬರ್ 13 ರಂದು ನಡೆಯಲಿರುವ ಎರಡನೇ ಆವೃತ್ತಿಯ ಬೆಂಗಳೂರು ನ್ಯಾನೊದ ಒಂದು ಭಾಗವಾಗಿ ಯೆಸ್ಸ್ (YASSS) ಮತ್ತು ರಿಚ್ (RICH) ಎಂಬ ಎರಡು ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸಿವೆ.

ವಾರ್ಷಿಕವಾಗಿ ಆಯೋಜಿಸಲಾಗುವ ಬೆಂಗಳೂರು ನ್ಯಾನೊದ ಎರಡನೇ ಆವೃತ್ತಿಯಲ್ಲಿ ಯೆಸ್ಸ್ ಮತ್ತು ರಿಚ್ ಪ್ರಮುಖ ಆಕರ್ಷಣೆ ಎನಿಸಿವೆ. ಯೆಸ್ಸ್ ಮತ್ತು ರಿಚ್ ಅನ್ನು ಇಂಡಿಯನ್ ವೆಂಚರ್ ಕ್ಯಾಪಿಟಲ್ ಅಸೋಸಿಯೇಷನ್‌ನ (IVCA) ಸಹಭಾಗಿತ್ವದಲ್ಲಿ ನಡೆಸಲಾಗುತ್ತಿದೆ. ಹಾಗೆಯೇ, ರಿಚ್‌ಗೆ ( Research Industry Collaboration Hub) ಸಹ ಇದು ಎರಡನೇ ಆವೃತ್ತಿಯಾಗಿದೆ.

ರಿಚ್ ನ್ಯಾನೋ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಹೊಸ ಆವಿಷ್ಕಾರ ಮತ್ತು ವಿನೂತನ ಸಂಶೋಧನಾ ಯೋಜನೆಗಳನ್ನು ಸಾಕಾರಗೊಳಿಸಿಕೊಳ್ಳಲು ಬಯಸುವವರು ಮತ್ತು ಹೂಡಿಕೆದಾರರು ಹಾಗೂ ವೃತ್ತಿಪರ ಕೈಗಾರಿಕೋದ್ಯಮಿಗಳ ನಡುವೆ ಸಹಕಾರ ಬೆಸೆಯುವ ಒಂದು ವೇದಿಕೆಯಾಗಿದೆ. ಹಾಗೆಯೇ, ಅವುಗಳ ವಾಣಿಜ್ಯೋದ್ಯಮ ಅವಕಾಶಗಳ ಬಗ್ಗೆಯೂ ಬೆಂಬಲ ನೀಡುತ್ತದೆ. ಒಂದು ಅರ್ಥದಲ್ಲಿ ರಿಚ್ ನ್ಯಾನೊ ತಂತ್ರಜ್ಞಾನ ವಲಯದ ಸಂಶೋಧಕರು ಮತ್ತು ಇದಕ್ಕೆ ಸಂಬಂಧಿಸಿದ ಉದ್ದಿಮೆದಾರರೊಂದಿಗೆ ನೇರವಾಗಿ ಮುಖಾ-ಮುಖಿ ಭೇಟಿಯನ್ನು ಆಯೋಜಿಸಿಕೊಡುತ್ತದೆ. ಹಲವಾರು ಐವಿಸಿಎ ಸದಸ್ಯರು, ಸ್ವತಂತ್ರ ವಿಸಿಎಸ್ ಮತ್ತು ಹೂಡಿಕೆದಾರ ಸಂಸ್ಥೆಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿವೆ.

ದೇಶದ ಹಲವಾರು ಪ್ರಮುಖ ಶೈಕ್ಷಣಿಕ ಸಂಸ್ಥೆಗಳು ಸೇರಿದಂತೆ ಮಧ್ಯಮ ಮತ್ತು ಸಣ್ಣ ಮಟ್ಟದ ಸಂಸ್ಥೆಗಳು ನ್ಯಾನೋ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಪ್ರಯೋಗಾಲಯದ ಮಟ್ಟದಲ್ಲಿ ಅತ್ಯಂತ ಮಹತ್ವದ ಸಂಶೋಧನೆಗಳನ್ನು ನಡೆಸಿದ್ದಾರೆ. ರಿಚ್ ಕಾರ್ಯಕ್ರಮದಲ್ಲಿ ಇಂತಹ ಪ್ರಯೋಗಾಲಯದ ಪ್ರಯೋಗಳನ್ನು ಮಂಡಿಸಲು ಅವಕಾಶ ಕಲ್ಪಿಸಲಾಗುವುದು. ಇದರಿಂದ ತಮ್ಮ ಯೋಜನೆಗಳಿಗೆ ಮೂರ್ತ ರೂಪ ನೀಡಲು ಪ್ರಯತ್ನಿಸುವವರಿಗೆ ಹೂಡಿಕೆದಾರರನ್ನು ಸೆಳೆಯಲು ಇಲ್ಲವೆ ಉದ್ದಿಮೆದಾರರೊಂದಿಗೆ ಒಪ್ಪಂದ ಮಾಡಿಕೊಳ್ಳಲು ಅಥವಾ ಸಹಭಾಗಿತ್ವ ಪಡೆದುಕೊಳ್ಳಲು ಇದು ಸಹಕಾರಿಯಾಗಲಿದೆ. ಒಟ್ಟಾರೆಯಾಗಿ ಇದು ಪ್ರಯೋಗಾಯಲದಿಂದ ಮಾರುಕಟ್ಟೆಗೆ ಎನ್ನುವ ಸೂತ್ರವನ್ನು ಪ್ರತಿಬಿಂಬಿಸುತ್ತದೆ.

ಯೆಸ್ಸ್ ಕಾರ್ಯಕ್ರಮ: ಬೆಂಗಳೂರು ನ್ಯಾನೊದಲ್ಲಿ ಯೆಸ್ಸ್ ವಿಶೇಷ ವಲಯವಾಗಿದೆ. ಭವಿಷ್ಯದ ವಾಣಿಜೋದ್ಯಮಿಗಳ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಯೆಸ್ಸ್ (Young Entrepreneurs Startups in Soaring Spirits) ನೆರವಾಗುತ್ತದೆ. ಈ ವಲಯದ ವೃತ್ತಿಪರ ವಾಣಿಜ್ಯೋದ್ಯಮಿಗಳು ಮತ್ತು ವಿಸಿಎಸ್‌ಗಳ ನಡುವೆ ಈಗಷ್ಟೇ ಉದ್ಯಮಕ್ಕೆ ಕಾಲಿರಿಸಿರುವ ಭವಿಷ್ಯದ ವಾಣಿಜ್ಯೋದ್ಯಮಿಗಳೊಂದಿಗೆ ಮುಖಾ-ಮುಖಿ ಸಂದರ್ಶನವನ್ನು ಆಯೋಜಿಸುತ್ತದೆ. ನ್ಯಾನೊ ಉದ್ಯಮದಲ್ಲಿ ಈಗಷ್ಟೇ ಕಾಲಿರಿಸಿರುವ ಆರಂಭಿಕ ವಾಣಿಜ್ಯೋದ್ಯಮಿಗಳು ತಮ್ಮ ವಹಿವಾಟು ಯೋಜನೆಗಳನ್ನು ವೃತ್ತಿಪರರ ಮುಂದೆ ಬಿಚ್ಚಿಡಬಹುದು. ತಮ್ಮ ಕಂಪನಿಯನ್ನು ಪೋಷಿಸಿಕೊಳ್ಳಲು ಇಲ್ಲಿ ವಿದೇಶಿ ಕಂಪನಿಗಳೊಂದಿಗೆ ಸಂಬಂಧ ಬೆಸೆದುಕೊಳ್ಳಬಹುದು. ಒಟ್ಟಾರೆಯಾಗಿ ದೇಶದ ನ್ಯಾನೊ ಆಧಾರಿತ ಸಂಸ್ಥೆಗಳ ಅವಶ್ಯಕತೆ ಮತ್ತು ಅಗತ್ಯಗಳನ್ನು ಪೂರೈಸುವ ಉನ್ನತ ಗುರಿ ಹೊಂದಿದೆ.

ಸುಮಾರು ಹತ್ತು ವ್ಯಕ್ತಿಗಳು ಹಾಗೂ ಸಂಘಟನೆಗಳಿಗೆ ಹತ್ತು ನಿಮಿಷಗಳ ಕಾಲ ತಮ್ಮ ಸಂಶೋಧನೆ ಮತ್ತು ವಹಿವಾಟು ಯೋಜನೆಗಳನ್ನು ಮಂಡಿಸಲು ವೇದಿಕೆಯಲ್ಲಿ ಅವಕಾಶ ಕಲ್ಪಿಸಲಾಗುವುದು. ಇದಾದ ಬಳಿಕ ನೇರ ಮುಖಾಮುಖಿ ವಹಿವಾಟು ಸಭೆಗಳನ್ನು ನಡೆಸಿಕೊಡಲಾಗುವುದು. ನ್ಯಾನೊ ಉದ್ದಿಮೆಯನ್ನು ಪ್ರತಿನಿಧಿಸುವ ಆಯ್ದ ಪ್ರೇಕ್ಷಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶವಿದೆ. ಹಾಗೆಯೇ, ಇದೇ ಸೂತ್ರವನ್ನು ಆಧರಿಸಿ ಈ ವಲಯದ ಹೂಡಿಕೆದಾರರ ಸಂಖ್ಯೆಯನ್ನು ಸೀಮಿತಗೊಳಿಸಲಾಗಿದೆ. ರಿಚ್ ಮತ್ತು ಯೆಸ್ಸ್ ಕಾರ್ಯಕ್ರಮದಲ್ಲಿ ನಿಯೋಗ ಸೇರಿದಂತೆ ಆಸಕ್ತರು ಯಾವುದೇ ಶುಲ್ಕವಿಲ್ಲದೆ ನೇರವಾಗಿ ಭಾಗವಹಿಸಬಹುದು.

ವಿನೂತನ ತಂತ್ರಜ್ಞಾನ ಮತ್ತು ಭವಿಷ್ಯದ ತಂತ್ರಜ್ಞಾನವನ್ನು ಉತ್ತೇಜಿಸುವಲ್ಲಿ ಕರ್ನಾಟಕ ಸರ್ಕಾರದ ಪಾತ್ರ ಅತ್ಯಂತ ಮಹತ್ವದ್ದು. ಬೆಂಗಳೂರು ಈಗಾಗಲೇ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ವಲಯಗಳ ರಾಜಧಾನಿಯಾಗಿದೆ. ಹಾಗೆಯೇ, ನ್ಯಾನೊ ತಂತ್ರಜ್ಞಾನ ರಂಗದ ಮುಂಚೂಣಿ ಸಂಶೋಧನಾ ಕೇಂದ್ರಗಳಾದ ಜೆಎನ್‌ಸಿಎಎಸ್‌ಆರ್ ಮತ್ತು ಐಐಎಸ್‌ಸಿಗಳು ಇಲ್ಲಿವೆ. ಬೆಂಗಳೂರು ನ್ಯಾನೊ ಬೆಂಗಳೂರಿನ ಇನ್ನೊಂದು ಮಹತ್ವದ ಕೊಡುಗೆ. ವಿಜ್ಞಾನ ಮತ್ತು ತಂತ್ರಜ್ಞಾನ ವಲಯದಲ್ಲಿ ಮುಂಚೂಣಿ ಸ್ಥಾನಕ್ಕೇರುವ ನಿಟ್ಟಿನಲ್ಲಿ ಸರ್ಕಾರ ಇಟ್ಟಿರುವ ದೃಢ ಹೆಜ್ಜೆಗಳನ್ನು ಇದು ಪ್ರತಿಬಿಂಬಿಸುತ್ತದೆ. ಇದರಡಿ ಯೆಸ್ಸ್ ಮತ್ತು ರಿಚ್ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಕಾರ್ಯಕ್ರಮದಲ್ಲಿ ಭಾಗಹಿಸಲು ಇಲ್ಲವೆ ವಿಷಯ ಮಂಡಿಸಲು ಹೆಚ್ಚಿನ ಮಾಹಿತಿಗಾಗಿ ವಿನಯ್ ಕುಮಾರ್ ಅವರನ್ನು ಮೊಬೈಲ್ +91 98452 10272 ರ ಮೂಲಕ ಸಂಪರ್ಕಿಸಿ ಇಲ್ಲವೆ ಅವರ ಇ-ಮೇಲ್ [email protected] ಗೆ ಮೇಲ್ ಕಳುಹಿಸಿ.

ಹೆಚ್ಚಿನ ಮಾಹಿತಿಗೆ
ರವಿಕುಮಾರ್, ಮೊಬೈಲ್ : +91 99646 16589, ಇಮೇಲ್: [email protected]
ರಾಜೀವ್ ಶಂಕರ್, ಮೊಬೈಲ್ : + 91 98808 93823, ಇಮೇಲ್: [email protected]
ಸೆರಿನ್ ಪಾರ್ಥೋಸ್, ಮೊಬೈಲ್: + 91 98867 22101, ಇಮೇಲ್: [email protected]
(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X