ಮಾಲೇಗಾಂವ್ ಸ್ಫೋಟ, ಪುರೋಹಿತ್ ವಜಾ
ಮುಂಬೈ, ನ. 26 : ಮಾಲೇಗಾಂವ್ ಸ್ಫೋಟಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಭಯೋತ್ಪಾದನೆ ನಿಗ್ರಹ ಪಡೆಯ ವಶದಲ್ಲಿರುವ ಶಂಕಿತ ವ್ಯಕ್ತಿ ಭಾರತೀಯ ಸೇನಾಧಿಕಾರಿ ಕರ್ನಲ್ ಪ್ರಸಾದ್ ಶ್ರೀಕಾಂತ್ ಪುರೋಹಿತ್ ಅವರನ್ನು ಭಾರತೀಯ ಸೇನಾ ಇಲಾಖೆ ಇಂದು ಸೇವೆಯಿಂದ ಗೇಟ್ ಪಾಸ್ ನೀಡಿದೆ.
ಕಳೆದ ಸೆಪ್ಟೆಂಬರ್ 29 ರಂದು ಮಾಲೇಗಾಂವ್ ನಲ್ಲಿ ನಡೆದ ಸರಣಿ ಸ್ಫೋಟದಲ್ಲಿ 6 ಮೃತಪಟ್ಟು, 101 ಜನರು ಗಾಯಗೊಂಡಿದ್ದರು. ದೇಶದ್ರೋಹ ಕೆಲಸದಲ್ಲಿ ಭಾಗಿಯಾಗಿರುವ ಪುರೋಹಿತ್ ಇಲಾಖೆಯ ಶಿಸ್ತನ್ನು ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಮಾಲೇಗಾಂವ್ ಸ್ಫೋಟ ಪ್ರಕರಣದಲ್ಲಿ ನಿರ್ದೋಷಿ ಎಂದು ಸಾಬೀತಾಗುವವರೆಗೂ ಸೇನಾ ಸಮವಸ್ತ್ರ ಧರಿಸಲು ಸಾಧ್ಯವಿಲ್ಲ. ಮಹಾರಾಷ್ಟ್ರ ಎಟಿಎಸ್ ಪೊಲೀಸರು ಮೋಕಾ ನ್ಯಾಯಾಲಯದಲ್ಲಿ ದಾವೆ ಹೂಡಿರುವ ಹಿನ್ನೆಲೆಯಲ್ಲಿ ಕನಿಷ್ಠ ಎಂದರೂ ಆರು ತಿಂಗಳವರೆಗೆ ಪುರೋಹಿತ್ ಅವರಿಗೆ ಜಾಮೀನು ಸಿಗುವ ಸಾಧ್ಯತೆಗಳು ಕಡಿಮೆ ಇವೆ. ಪ್ರಕರಣದ ಬಗ್ಗೆ ಸಮಗ್ರವಾಗಿ ಚಿಂತನೆ ನಡೆಸಿದ ನಂತರ ಪುರೋಹಿತ್ ಅವರನ್ನು ವಜಾ ಮಾಡುವ ಕ್ರಮಕ್ಕೆ ಮುಂದಾಗಿರುವುದಾಗಿ ಇಲಾಖೆ ಸ್ಪಷ್ಟಪಡಿಸಿದೆ. ಪ್ರಕರಣದ ಇನ್ನೊಬ್ಬ ಆರೋಪಿ ಉತ್ತರ ಪ್ರದೇಶದ ದಯಾನಂದ ಪಾಂಡೆ ಇಂದು ಮೋಕಾ ನ್ಯಾಯಾಲಯದ ಮುಂದೆ ಹಾಜರಾಗಲಿದ್ದಾರೆ.
ಸ್ಫೋಟ ಪ್ರಕರಣದ ಶಂಕಿತರು ಎನ್ನಲಾದ ಪ್ರಗ್ಯಾಸಿಂಗ್, ರಮೇಶ್ ಉಪಾಧ್ಯಾಯ, ಪುರೋಹಿತ್ ಮಹಾರಾಷ್ಟ್ರ ಎಟಿಎಸ್ ಪೊಲೀಸರು ವಿಚಾರಣೆ ನೆಪದಲ್ಲಿ ಚಿತ್ರಹಿಂಸೆ ನೀಡಿದ್ದಾರೆ ಎಂದು ಪ್ರಮಾಣಪತ್ರ ಸಲ್ಲಿಸಿರುವ ಹಿನ್ನೆಲೆಯಲ್ಲಿ ಮೋಕಾ ನ್ಯಾಯಾಲಯ ಡಿ.3 ರೊಳಗೆ ಈ ಬಗ್ಗೆ ಸಮಗ್ರ ವರದಿ ನೀಡುವಂತೆ ಮಹಾರಾಷ್ಟ್ರ ಎಟಿಎಸ್ ಪೊಲೀಸರಿಗೆ ಸೂಚನೆ ನೀಡಿದೆ.
(ದಟ್ಸ್ ಕನ್ನಡ ವಾರ್ತೆ)


Click it and Unblock the Notifications
