ಅಭಿವೃದ್ಧಿ ಹೆಸರಿನಲ್ಲಿ ಚುನಾವಣೆಗೆ ವೆಚ್ಚ,: ಕಾಂಗ್ರೆಸ್
ಬೆಂಗಳೂರು, ನ. 26 : ಉಪಚುನಾವಣೆಗಳ ದಿನಾಂಕ ಘೋಷಣೆಯಾದ ನಂತರ ಸರ್ಕಾರ ಅಭಿವೃದ್ದಿ ಹೆಸರಿನಲ್ಲಿ ಸರ್ಕಾರಿ ಯಂತ್ರವನ್ನು ದುರ್ಬಳಿಕೆ ಮಾಡಿಕೊಳ್ಳುವುದಲ್ಲದೇ, ಸರ್ಕಾರದ ಬೊಕ್ಕಸದಲ್ಲಿರುವ ಹಣವನ್ನು ಚುನಾವಣೆಗೆ ವೆಚ್ಚ ಮಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಆರ್ ದೇಶಪಾಂಡೆ ಆರೋಪಿಸಿದರು. ಈ ಬಗ್ಗೆ ಶೀಘ್ರದಲ್ಲಿ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗುವುದು ಎಂದು ಅವರು ಹೇಳಿದರು.
ಮಾದ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಉಪಚುನಾವಣೆ ನಡೆಯಬೇಕಿರುವ ಕ್ಷೇತ್ರಗಳಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಹಣ ಹಂಚುವ ಕೆಲಸದಲ್ಲಿ ಬಿಜೆಪಿ ಸರ್ಕಾರ ಮುಂದಾಗಿದೆ. ಇದರಲ್ಲಿ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದರು. ಮುಖ್ಯಮಂತ್ರಿ ಯಡಿಯೂರಪ್ಪ ಶಾಸಕರ ಸಭೆ ನಡೆಸುವ ನಾಟಕ ಮಾಡಿ ಚುನಾವಣೆ ನಡೆಯುವ ಕ್ಷೇತ್ರಗಳ ಅಪಾರ ಹಣವನ್ನು ವೆಚ್ಚ ಮಾಡಲು ತಯಾರಿ ನಡೆಸಿದ್ದಾರೆ. ಈ ಬಗ್ಗೆ ರಾಜ್ಯ ಚುನಾವಣಾ ಆಯೋಗ ಶೀಘ್ರದಲ್ಲಿ ದೂರು ನೀಡಲಾಗುವುದು. ಹಾಗೂ ಸರ್ಕಾರದ ನಡೆಸಲು ಉದ್ದೇಶಿಸಿರುವ ಅಕ್ರಮಗಳನ್ನು ತಡೆಯಲು ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು. ನ್ಯಾಯಸಮ್ಮತವಾದ ರೀತಿಯಲ್ಲಿ ಚುನಾವಣೆ ನಡೆಸಲು ವಿಶೇಷ ವೀಕ್ಷಕರ ತಂಡವನ್ನು ರಚಿಸಬೇಕು ಎಂದು ದೇಶಪಾಂಡೆ ಆಯೋಗವನ್ನು ಒತ್ತಾಯಿಸಿದರು.
ಪಕ್ಷಾಂತರಿಗಳ ಟಿಕೆಟ್ ನೀಡಲು ಬಿಜೆಪಿ ಸಿದ್ದವಾಗಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ದೇಶಪಾಂಡೆ, ಬಿಜೆಪಿ ಸರ್ಕಾರಕ್ಕೆ ನೈತಿಕತೆ ಎನ್ನುವುದಿದ್ದರೆ, ಪಕ್ಷಾಂತರಿಗಳಿಗೆ ಟಿಕೆಟ್ ನೀಡಬಾರದು ಎಂದು ಆಗ್ರಹಿಸಿದರು. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಇನ್ನೆರಡು ದಿನದಲ್ಲಿ ಬಿಡುಗಡೆ ಮಾಡಲಾಗುವುದು. ಪಕ್ಷದ ವೀಕ್ಷಕರು ಚುನಾವಣೆ ನಡೆಯುವ ಕ್ಷೇತ್ರಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ವೀಕ್ಷಕರು ನೀಡಿದ ವರದಿ ನಂತರ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎಂದು ದೇಶಪಾಂಡೆ ಹೇಳಿದರು.
ಬಿಜೆಪಿ ಸರ್ಕಾರ ಚುನಾವಣೆಯಲ್ಲಿ ಅಕ್ರಮವಾಗಿ ಸರ್ಕಾರಿ ಅಧಿಕಾರಿಗಳನ್ನು ಬಳಸಿಕೊಳ್ಳುವ ಸಾಧ್ಯತೆ ಇದೆ. ಹಾಗೂ ಕೆಲ ಅಧಿಕಾರಿ ಸ್ವಯಂಕೃತವಾಗಿ ಚುನಾವಣೆಯಲ್ಲಿ ಪಾಲ್ಗೊಳ್ಳುವ ಉತ್ಸಾಹದಲ್ಲಿದ್ದಾರೆ. ಈ ವಿಷಯಗಳನ್ನು ಗಮನಿಸಲಾಗಿದ್ದು, ಇಂತಹ ಅಕ್ರಮಗಳನ್ನು ತಡೆಯಲು ಕಾಂಗ್ರೆಸ್ ಕಾವಲು ಪಡೆಯನ್ನು ರಚಿಸಲಿದೆ ಎಂದು ಕಾಂಗ್ರೆಸ್ ಕಾರ್ಯಾಧ್ಯಕ್ಷ ಡಿ ಕೆ ಶಿವಕುಮಾರ್ ತಿಳಿಸಿದರು.
(ದಟ್ಸ್ ಕನ್ನಡ ವಾರ್ತೆ)


Click it and Unblock the Notifications
