ಅಸ್ನೋಟಿಕರ್ ವಿರುದ್ಧ ದೇಶಪಾಂಡೆ ಸ್ಪರ್ಧೆ
ಬೆಂಗಳೂರು, ನ. 24 : ಉಪಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದಂತೆಯೇ ರಾಜಕೀಯ ಪಕ್ಷಗಳಲ್ಲಿ ಗೆಲ್ಲುವ ಕುದುರೆಗಳಿಗೆ ಹುಡುಕಾಟ ಆರಂಭವಾಗಿದೆ. ಈ ಮಧ್ಯೆ ಆಪರೇಷನ್ ಕಮಲದಲ್ಲಿ ಮೂಲಕ ಬಿಜೆಪಿ ಸೇರ್ಪಡೆಯಾಗಿರುವ ಆನಂದ್ ಅಸ್ನೋಟಿಕರ್ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಆರ್ ವಿ ದೇಶಪಾಂಡೆ ಸ್ಪರ್ಧಿಸುವ ಸಾಧ್ಯತೆಗಳು ಹೆಚ್ಚಾಗಿವೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹಳಿಯಾಳ ಕ್ಷೇತ್ರದಿಂದ ಸೋಲನ್ನಪ್ಪಿದ್ದ ದೇಶಪಾಂಡೆ ಕಾರವಾರದಲ್ಲಿ ಸ್ಪರ್ಧಿಸಲು ಮನಸ್ಸು ಮಾಡಿದ್ದಾರೆ. ಚುನಾವಣಾ ಆಯೋಗಕ್ಕೆ ತಪ್ಪು ದಾಖಲೆ ಸಲ್ಲಿಸಿರುವುದರ ಜತೆಗೆ, ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಮಾಡಿ ಬಿಜೆಪಿ ಸೇರ್ಪಡೆಯಾಗಿರುವ ಅನಂದ ಅಸ್ನೋಟಿಕರ್ ವಿರುದ್ಧ ತೊಡೆ ತಟ್ಟುವ ಸಾಧ್ಯತೆಗಳು ಕಂಡು ಬಂದಿವೆ. ಸಚಿವ ಆನಂದ ಅಸ್ನೋಟಿಕರ್ ಒಂದು ಕಾಲದಲ್ಲಿ ದೇಶಪಾಂಡೆ ಅವರ ಶಿಷ್ಯ ಅಗಿದ್ದರು. ನಂತರ ದಿನಗಳಲ್ಲಿ ಇಬ್ಬರ ಸಂಬಂಧಗಳು ಹಳಿಸಿದ್ದವು. ಆನಂದ್ ಅಸ್ನೋಟಿಕರ್ ಆಪರೇಷನ್ ಕಮಲಕ್ಕೆ ಒಲಿದು ಕೇಸರಿ ಪಕ್ಷದಲ್ಲಿ ಸೇರಿಕೊಂಡು ಸಚಿವರಾಗಿದ್ದಾರೆ.
ವಿಧಾನ ಪರಿಷತ್ ನ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ದೇಶಪಾಂಡೆ ಅವರನ್ನು ಮೇಲ್ಮನೆಗೆ ಕಳುಹಿಸುವ ಸಾಧ್ಯತೆ ಇತ್ತಾದರೂ ಆಯೋಗ ಎರಡು ಸ್ಥಾನಗಳ ಚುನಾವಣೆಗೆ ಪ್ರತ್ಯೇಕ ಅಧಿಸೂಚನೆ ಹೊರಡಿಸುವುದರಿಂದ ಇದು ಸಾಧ್ಯವಾಗಲಿಲ್ಲ. ದೇಶಪಾಂಡೆಯವರಿಗೆ ವಿಧಾನಸಭೆಯಲ್ಲಿ ಸ್ಥಾನ ಕಲ್ಪಿಸಿಕೊಡಬೇಕು ಎನ್ನುವುದು ಕಾಂಗ್ರೆಸ್ ವಲಯದಲ್ಲಿ ಕೇಳಿಬರುತ್ತಿರುವ ಮಾತಾಗಿದೆ. ಈ ಹಿನ್ನೆಲೆಯಲ್ಲಿ ಕಾರವಾರ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆಗಳೇ ಹೆಚ್ಚಾಗಿವೆ.
(ದಟ್ಸ್ ಕನ್ನಡ ವಾರ್ತೆ)


Click it and Unblock the Notifications
