ಪರಿಷ್ಕೃತ ತೆರಿಗೆ ಪದ್ಧತಿಗೆ ಕಾಂಗ್ರೆಸ್ ವಿರೋಧ
ಬೆಂಗಳೂರು, ಆ. 23 : ರಾಜ್ಯ ಸರ್ಕಾರ ಬಿಬಿಎಂಪಿ ವ್ಯಾಪ್ತಿಯಲ್ಲಿ ಜಾರಿಗೆ ತರಲು ಉದ್ದೇಶಿಸಿರುವ ಪರಿಷ್ಕೃತ ಎಸ್ಎಎಸ್ ಆಸ್ತಿ ತೆರಿಗೆ ಪದ್ಧತಿಗೆ ದಿನದಿಂದ ದಿನಕ್ಕೆ ಸಾರ್ವಜನಿಕ, ವಾಣಿಜ್ಯ ಹಾಗೂ ರಾಜಕೀಯ ವಲಯಗಳಿಂದ ತೀವ್ರ ವಿರೋಧಿ ವ್ಯಕ್ತವಾಗತೊಡಗಿದೆ.
ಪಾಲಿಕೆಯ ಕೌನ್ಸಿಲ್ ಅಸ್ತಿತ್ವದಲ್ಲಿ ಇಲ್ಲದಿರುವಾಗ ಪರಿಷ್ಕೃತ ಎಸ್ಎಎಸ್ ನಂತಹ ಪದ್ಧತಿ ಜಾರಿಗೊಳಿಸುವ ಮೂಲಕ ಸರ್ಕಾರ ಸಂವಿಧಾನದ 243ನೇ (ಮುನ್ಲಿಪಾಲಿಟಿ ಅಧಿಕಾರ ವಿವರಿಸುವ ವಿಧಿ) ವಿಧಿಯನ್ನು ಸ್ಪಷ್ಟವಾಗಿ ಉಲ್ಲಂಘಿಸಿದೆ. ಎಂದು ಕಾಂಗ್ರೆಸ್ ಆರೋಪಿಸಿದೆ. ಪರಿಷ್ಕೃತ ಎಸ್ಎಎಸ್ ಪದ್ಧತಿ ಸಂಪೂರ್ಣ ಜನವಿರೋಧಿಯಾಗಿದೆ. ಯಾವ ಕಾರಣಕ್ಕೊ ಈ ಪದ್ಧತಿ ಜಾರಿಗೆ ಬಿಡುವುದಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ಆರ್ ವಿ ದೇಶಪಾಂಡೆ ಎಚ್ಚರಿಕೆ ನೀಡಿದ್ದಾರೆ.
ಎಸ್ಎಎಸ್ ಸುಗ್ರೀವಾಜ್ಞೆ ಜಾರಿ ಪರಿಣಾಮ ಕುರಿತು ನಗರವನ್ನು ಕಾರ್ಪೊರೇಟರ್ ಗಳು, ಶಾಸಕರು ಹಾಗೂ ಮಾಜಿ ಮೇಯರ್ ಗಳ ಸಭೆ ನಡೆಸಿದ ದೇಶಪಾಂಡೆ ಪರಿಷ್ಕೃತ ಪದ್ಧತಿಯನ್ನು ಕೂಡಲೇ ಹಿಂಗೆತೆದುಕೊಳ್ಳವಂತೆ ಒತ್ತಾಯಿಸಿದರು. ಆದ್ದರಿಂದ ಪಾಲಿಕೆಗೆ ನೂತನ ಕೌನ್ಸಿಲ್ ಬರುವವರೆಗೂ ಯಾವುದೇ ಆಸ್ತಿ ತೆರಿಗೆ ಜಾರಿಗೊಳಿಸಬಾರದು ಎಂದು ಸರ್ಕಾರಕ್ಕೆ ತಾಕೀತು ಮಾಡಿದರು.
ಎಸ್ಎಎಸ್ ಪದ್ಧತಿಗಳ ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸಿ, ಈ ಪದ್ದತಿಯನ್ನು ಯಾವ ರೀತಿಯಲ್ಲಿ ವಿರೋಧಿಸಬೇಕು ಎಂಬ ಬಗ್ಗೆ ವರದಿ ನೀಡಲು ಶಾಸಕ ರಾಮಲಿಂಗಾರೆಡ್ಡಿ ನೇತೃತ್ವದ ಸಮಿತಿಯೊಂದನ್ನು ರಚಿಸಲಾಗಿದೆ. ಪರಿಷ್ಕೃತ ಜಾರಿಗೊಳಿಸುವ ನೆಪದಲ್ಲಿ ಶೇ. 20 ರಿಂದ 25 ರಷ್ಟು ಆಸ್ತಿ ತೆರಿಗೆ ಹೆಚ್ಚಳ ಮಾಡಲು ಸರ್ಕಾರ ಮುಂದಾಗಿದೆ. ಅಲ್ಲದೆ, ತೆರಿಗೆಯನ್ನು ನಿರ್ಧರಿಸುವ ಮಾನದಂಡಗಳನ್ನು ರೂಪಿಸುವ ಸಂಪೂರ್ಣ ಅಧಿಕಾರವನ್ನು ಪಾಲಿಕೆಯ ಆಯುಕ್ತರಿಗೆ ವರ್ಗಾಯಿಸಲಾಗಿದೆ. ಇದರಿಂದ ವ್ಯಾಪಕ ಭ್ರಷ್ಟಾಚಾರ ಹೆಚ್ಚಾಗಲು ಕಾರಣವಾಗುತ್ತದೆ ಎಂದು ದೇಶಪಾಂಡೆ ಆರೋಪಿಸಿದರು.
(ದಟ್ಸ್ ಕನ್ನಡ ವಾರ್ತೆ)


Click it and Unblock the Notifications
