ರಾಜ್ಯ ಪರಿಸರ ಸಂರಕ್ಷಣೆಗೆ ಕೈ ಜೋಡಿಸಿದ ನಾರ್ವೆ
ಬೆಂಗಳೂರು, ನ. 22: ಪರಿಸರವಾದಿಗಳು, ಸರ್ಕಾರಿ ಇಲಾಖೆಗಳು ಒಟ್ಟಾಗಿ ಅಭಿವೃದ್ಧಿ ಯೋಜನೆಗಳನ್ನು ಪರಿಸರ ಸ್ನೇಹಿಯಾಗಿಸುವತ್ತ ಚಿಂತನೆ ನಡೆಸುವುದು ಇಂದಿನ ಅಗತ್ಯವಾಗಿದೆ ಎಂದು ಮುಖ್ಯ ಕಾರ್ಯದರ್ಶಿ ಸುಧಾಕರ ರಾವ್ ಅವರು ತಿಳಿಸಿದರು.
ಅವರು ಶುಕ್ರವಾರ ನಗರದಲ್ಲಿ ಆರಣ್ಯ ಮತ್ತು ಪರಿಸರ ಇಲಾಖೆಯ ಇಂಡೋ ನಾರ್ವೆಜಿಯನ್ ಪರಿಸರ ಯೋಜನೆಯ ಕುರಿತ ಎರಡು ದಿನಗಳ ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು ಸರ್ಕಾರವೂ ಪರಿಸರದ ಬಗ್ಗೆ ಕಾಳಜಿ ಹೊಂದಿದೆ. ಪರಿಸರದ ಸಮತೋಲನಕ್ಕೆ ಧಕ್ಕೆಯಾಗದಂತೆ ಯೋಜನೆಗಳನ್ನು ಜಾರಿಗೊಳಿಸುವ ಸಾಧ್ಯತೆಗಳನ್ನು ಕಂಡುಹಿಡಿಯಬೇಕಾಗಿದೆ. ಇದಕ್ಕಾಗಿ ಸರ್ಕಾರ ಮತ್ತು ಪರಿಸರವಾದಿಗಳು ಪರಸ್ಪರ ವಿರೋಧಿಗಳಾಗದೆ, ಒಟ್ಟಾಗಿ ಕೆಲಸ ಮಾಡಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಇಂಡೋ ನಾರ್ವೇಜಿಯನ್ ಪರಿಸರ ಯೋಜನೆ(Indo Norwegian Environment Intervention) ಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಅವರು ಪರಿಸರ ಸಂರಕ್ಷಣೆಗೆ ಕಲಿಕೆ, ಹೊಸ ತಂತ್ರಜ್ಞಾನ, ಹೊಸ ಮಾರ್ಗ ಹುಡುಕಲು ಉಭಯ ದೇಶಗಳ ನಡುವಿನ ಸಹಕಾರ ಮುಂದೆಯೂ ಬೆಳೆಯಲಿ ಎಂದು ಆಶಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಾರ್ವೇಜಿಯನ್ ರಾಯಭಾರ ಕಛೇರಿಯ ಕೌನ್ಸೆಲರ್ (ಅಭಿವೃದ್ಧಿ) ಥೆರೇಸ್ ಬಜಾರ್ಡ್ ಅವರು ಈ ವಿಚಾರ ಸಂಕಿರಣವು ಇಂಡೋ ನಾರ್ವೇಜಿಯನ್ ಪರಿಸರ ಯೋಜನೆಗಳ (ಐಎನ್‌ಇಪಿ) ಫಲಶ್ರುತಿ ಹಾಗೂ ಪರಿಣಾಮಗಳತ್ತ ಬೆಳಕು ಚೆಲ್ಲಲಿದೆ ಎಂದು ತಿಳಿಸಿದರು.
9ನೇ ಪಂಚವಾರ್ಷಿಕ ಯೋಜನೆಯಲ್ಲಿ ಪರಿಸರ ಕ್ಷೇತ್ರದಲ್ಲಿ ಭಾರತ ಸರ್ಕಾರವು ಹಮ್ಮಿಕೊಂಡಿದ್ದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಉತ್ತೇಜಿಸುವುದು ಐಎನ್‌ಇಪಿಯ ಉದ್ದೇಶವಾಗಿತ್ತು. ಇದಕ್ಕಾಗಿ ಕರ್ನಾಟಕ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆಯಲ್ಲಿ ಸುಧಾರಣೆ, ವಾಯು ಹಾಗೂ ಜಲ ಮಾಲಿನ್ಯ ನಿಯಂತ್ರಣ ಮತ್ತು ಮಣ್ಣಿನ ಸವೆತ ಹಾಗೂ ಭೂಮಿಯ ಫಲವತ್ತತೆಯ ನಷ್ಟವನ್ನು ತಡೆಗಟ್ಟುವುದು ಐಎನ್‌ಇಪಿಯ ಗುರಿಯಾತ್ತು ಎಂದು ವಿವರಿಸಿದರು.
ಈ ಕಾರ್ಯಕ್ರಮ ಈಗ ಅಂತಿಮ ಹಂತ ತಲುಪಿದೆ. ಕರ್ನಾಟಕ ಸರ್ಕಾರಕ್ಕೆ ನಾರ್ವೇ ದೇಶವು ರು. 375 ದಶಲಕ್ಷ ಮೊತ್ತವನ್ನು ಈ ಯೋಜನೆಗಾಗಿ ಒದಗಿಸಿತ್ತು. ಈ ಮೊತ್ತವು ಸದುಪಯೋಗವಾಗಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.
ಐಎನ್‌ಇಪಿ ಯೋಜನಾ ವ್ಯವಸ್ಥಾಪಕ ವಿಜಯ್ ಭಟ್ ಅವರು ಯೋಜನೆಯ ವಿವರಗಳನ್ನು ನೀಡಿದರು. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಾದ ಡಾ.ಎಲ್. ಶಾಂತಕುಮಾರಿ ಸುಂದರ್ ಅವರು ಮಾತನಾಡಿ, ಪರಿಸರ ಮಾಲಿನ್ಯದ ವಿವಿಧ ರೂಪಗಳನ್ನು ಎಳೆ ಎಳೆಯಾಗಿ ಬಿಡಿಸಿಟ್ಟರು. ನೈಸರ್ಗಿಕ ಸಂಪನ್ಮೂಲಗಳ ವಿವೇಚನಾ ರಹಿತ ನಿರ್ವಹಣೆ ಪರಿಸರವನ್ನು ಹಾಳುಗೆಡವುತ್ತಿದೆ. ಈ ನಿಟ್ಟಿನಲ್ಲಿ ಐಎನ್‌ಇಪಿಯಡಿ ಕೈಗೆತ್ತಿಕೊಳ್ಳಲಾದ ಯೋಜನೆಗಳು ಪರಿಸರ ಸಂರಕ್ಷಣೆಗೆ ಮಾದರಿಯಾಗಿ ವ್ಯಾಪಕವಾಗಿ ಜಾರಿಗೊಳ್ಳಲಿ ಎಂದು ಆಶಿಸಿದರು.
ಪಶ್ಚಿಮ ಘಟ್ಟ ಸಂರಕ್ಷಣೆ ಕಾರ್ಯಪಡೆಯ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಅವರು ರಾಜ್ಯದಲ್ಲಿ ಅಲ್ಲಲ್ಲಿ ಪರಿಸರ ಸಂರಕ್ಷಣೆಯ ಚಟುವಟಿಕೆಗಳು ನಡೆಯುತ್ತಿದ್ದು ಅದಕ್ಕೆ ಹೆಚ್ಚಿನ ಉತ್ತೇಜನ ಅಗತ್ಯ ಎಂದರು.ಎರಡು ದಿನಗಳ ಈ ವಿಚಾರ ಸಂಕಿರಣದಲ್ಲಿ ಕಳೆದ ಒಂದು ದಶಕದಲ್ಲಿ ಐಎನ್‌ಇಪಿ ಯೋಜನೆಯಡಿ ಕೈಗೆತ್ತಿಕೊಳ್ಳಲಾದ ಯೋಜನೆಗಳ ಪರಾಮರ್ಶೆ ನಡೆಯಲಿದೆ. ನಗರದ ಮಡಿವಾಳ, ಹೆಬ್ಬಾಳ ಕೆರೆ ಸಂರಕ್ಷಣೆ, ಚಾಮುಂಡಿ ಬೆಟ್ಟ ಅರಣ್ಯ ಪ್ರದೇಶ ನಿರ್ವಹಣೆ, ಜಲವಿದ್ಯುತ್ ಯೋಜನೆ ಮುಂತಾದ ವಿಷಯಗಳ ಮೇಲೆ ಪ್ರಮುಖವಾಗಿ ಚರ್ಚೆ ನಡೆಯಲಿದೆ.
(ದಟ್ಸ್ ಕನ್ನಡವಾರ್ತೆ)


Click it and Unblock the Notifications
