ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೌಕರರಿಗೆ ಸಾಮಾಜಿಕ ಬದ್ಧತೆ ಮುಖ್ಯ : ಸಿದ್ಧಗಂಗಾಶ್ರೀ

By Staff
|
Google Oneindia Kannada News

Govt employees should have social responsibility
ಶಿವಮೊಗ್ಗ ನ. 22 : ರಾಷ್ಟ್ರದ ಪ್ರತಿಯೊಂದು ಕುಟುಂಬವು ಗೌರವದಿಂದ ಬದುಕುವ ವಾತಾವರಣ ಸೃಷ್ಟಿಯಾಗಬೇಕು; ವಿವಿಧ ಧರ್ಮಗಳಲ್ಲಿರುವ ಮಾನವೀಯ ಮೌಲ್ಯಗಳನ್ನು ಗೌರವಿಸಬೇಕು ಎಂದು ಸಿದ್ಧಗಂಗಾಶ್ರೀ ಶಿವಕುಮಾರ ಸ್ವಾಮಿಗಳು ಸಂದೇಶ ನೀಡಿದ್ದಾರೆ.

ಅವರು ಶುಕ್ರವಾರ ಶಿವಮೊಗ್ಗ ನಗರದಲ್ಲಿ ಆಯೋಜಿಸಿದ್ದ ಸರ್ಕಾರಿ ನೌಕರರ ರಾಜ್ಯ ಮಟ್ಟದ ಮಹಾಸಮ್ಮೇಳನದಲ್ಲಿ ಮಾತನಾಡುತ್ತಿದ್ದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾರ್ಯಾಂಗದ ಪಾತ್ರ ಬಹುದೊಡ್ಡದು. ಕಾರ್ಯಾಂಗ ವಿಫಲವಾದರೆ ಅಭಿವೃದ್ಧಿ ಹಾಗೂ ಪರಿವರ್ತನೆ ಅಸಾಧ್ಯ ಎಂದರಲ್ಲದೆ, ದೇಶದ ಅಭಿವೃದ್ಧಿ, ಸಾಮಾಜಿಕ ಬದಲಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ನೌಕರರು ಕೆಲಸ ಮಾಡಬೇಕೆಂದು ಕಿವಿಮಾತು ಹೇಳಿದರು.

ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು, ಸರ್ಕಾರ ಜಾರಿಗೆ ತರುವ ಜನಪ್ರಿಯ ಕಾರ್ಯಕ್ರಮಗಳನ್ನು ಪ್ರಾಮಾಣಿಕವಾಗಿ ಜನತೆಗೆ ಮುಟ್ಟಿಸುವ ಜವಾಬ್ದಾರಿ ಸರ್ಕಾರಿ ನೌಕರರದು, ನೌಕರರು ಜನಸಾಮಾನ್ಯರ ಸಂಕಷ್ಟಗಳನ್ನು ಅರಿತು ಸೇವೆ ಮಾಡಿದಾಗ ಮಾತ್ರ ಸಮಾಜದಲ್ಲಿ ಬದಲಾವಣೆ ಕಾಣಲು ಸಾಧ್ಯ ಎಂದರು. ಜನಸೇವೆ ಮಾಡುವ ಅವಕಾಶವನ್ನು ಪುಣ್ಯದ ಕೆಲಸವೆಂದು ಭಾವಿಸಿ ಕೆಲಸ ಮಾಡಿ ಉಳಿದಂತೆ ತಮ್ಮ ಬೇಡಿಕೆಗಳಾದ ಮನೆ ಬಾಡಿಗೆ ಭತ್ಯೆ, ಶಿಕ್ಷಕರ ವೇತನ ವ್ಯತ್ಯಾಸ ಇತ್ಯಾದಿಗಳನ್ನು ಪರಿಶೀಲಿಸಿ ಇತ್ಯರ್ಥ ಪಡಿಸುತ್ತೇನೆಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು.

ವಿದ್ಯುತ್ ಸಮಸ್ಯೆ, ರಸ್ತೆ ಸಮಸ್ಯೆ, ವಲಸೆ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರದ ಜೊತೆ ನೌಕರರು ಸ್ಪಂದಿಸಿ ಕೆಲಸ ನಿರ್ವಹಿಸಬೇಕಾಗಿದೆ. ಎಲ್ಲಾ ಕಡೆ ಹಕ್ಕಿನ ಬಗ್ಗೆ ಚರ್ಚೆಯಾಗುತ್ತದೆಯೇ ಹೊರತು ಕರ್ತವ್ಯದ ಬಗ್ಗೆ ಚರ್ಚೆಯಾಗುತ್ತಿಲ್ಲ; ಈ ಮನೋಭಾವನೆ ಬದಲಾಗಬೇಕು. ದುರಾಸೆ ಬಿಟ್ಟು ಸೇವೆ ಮಾಡುವುದನ್ನು ಹಾಗೂ ಬದುಕುವುದನ್ನು ಕಲಿಯಿರಿ ಎಂದು ಹೇಳಿದ ಮುಖ್ಯಮಂತ್ರಿಗಳು, ಸ್ವಾರ್ಥವನ್ನು ಬಿಟ್ಟು ಸಮಾಜಕ್ಕಾಗಿ ದುಡಿಯಬೇಕು ಎಂದರು.

ಇಂಧನ ಸಚಿವ ಕೆ.ಎಸ್. ಈಶ್ವರಪ್ಪ ಅವರು ಮಾತನಾಡಿ, ಸರ್ಕಾರ ತಮಗೆ ಕೊಡಬೇಕಾದ ಸವಲತ್ತುಗಳನ್ನು ಎಲ್ಲಾ ಕೊಟ್ಟು ಮಕ್ಕಳಂತೆ ಕಂಡಿದೆ. ಇದೇ ರೀತಿ ತಾವುಗಳು ಪ್ರಾಮಾಣಿಕವಾಗಿ ಸೇವೆ ಮಾಡುವ ಮೂಲಕ ಸರ್ಕಾರವನ್ನು ತಂದೆಯಂತೆ ಕಾಣಬೇಕೆಂದು ನೌಕರರ ಜವಾಬ್ದಾರಿಯನ್ನು ನೆನಪಿಸಿದರು. ಬಡವರು, ವಿಧವೆಯರು, ಅಂಗವಿಕಲರ ಬದುಕನ್ನು ಸುಧಾರಿಸಲು ಸರ್ಕಾರ ಕಾರ್ಯಕ್ರಮಗಳನ್ನು ರೂಪಿಸಿದೆ. ಈ ಸವಲತ್ತುಗಳನ್ನು ಜನತೆಗೆ ಮುಟ್ಟಿಸುವುದು ತಮ್ಮ ಮೇಲಿದೆ ಎಂದರು.

ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಮಹಾಸ್ವಾಮಿಗಳು ಮಾತನಾಡಿ, ಸರ್ಕಾರ ನೌಕರರನ್ನು ಮಕ್ಕಳಂತೆ ನೋಡಿಕೊಳ್ಳಬೇಕು; ನೌಕರರು ಸಮಾಜದ ಶ್ರೇಯಸ್ಸಿಗಾಗಿ ದುಡಿಯಬೇಕೆಂದು ಹೇಳಿದರಲ್ಲದೆ, ಸರ್ಕಾರ ಮೆದುಳಿದ್ದಂತೆ ನೌಕರರು ಅಂಗಾಂಗಗಳಿದ್ದಂತೆ ಈ ಎರಡೂ ಕ್ರಿಯಾಶೀಲವಾಗಿ ಮಾಡಿದಾಗ ಮಾತ್ರ ಸುಸ್ಥಿತಿ ಸಾಧ್ಯ ಎಂಬುದನ್ನು ಮಾರ್ಮಿಕವಾಗಿ ಹೇಳಿದರು.

ಕೇಂದ್ರ ಸರ್ಕಾರದ ಮಾದರಿಯಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ಮನೆ ಬಾಡಿಗೆ, ನಗರ ಭತ್ಯೆ, ನೀಡಬೇಕೆಂದರಲ್ಲದೆ, ಕೇಂದ್ರದ ಮಾದರಿಯಲ್ಲೇ ತುಟ್ಟಿ ಭತ್ಯೆ ನೀಡುವುದು, ಸರ್ಕಾರಿ ಆಸ್ಪತ್ರೆಗಳನ್ನು ಸ್ವಾಯತ್ತ ಸಂಸ್ಥೆಗಳೆಂದು ಘೋಷಿಸಿರುವುದನ್ನು ರದ್ದುಪಡಿಸಬೇಕು, ಶಿಕ್ಷಕರ ವೇತನ ಶ್ರೇಣಿಯಲ್ಲಿ ವಿಶೇಷ ಭತ್ಯೆಗಳನ್ನು ವಿಲೀನಗೊಳಿಸುವುದು, ವರ್ಗಾವಣೆ ಬಗ್ಗೆ ಕಾಯಿದೆ ರೂಪಿಸುವುದು ಸೇರಿದಂತೆ ಹಲವಾರು ಬೇಡಿಕೆಗಳನ್ನು ನೌಕರರ ಸಂಘ ಸರ್ಕಾರದ ಮುಂದಿಟ್ಟಿದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X