ರಾಜ್ಯದ ಅಭಿವೃದ್ಧಿ ಕುಂಠಿತ;ಬಿಎಸ್ ವೈ ಅಸಮಾಧಾನ
ಬೆಂಗಳೂರು, ನ. 19 : ರಾಜ್ಯದ ಅಭಿವೃದ್ಧಿ ಕುಂಠಿತಗೊಂಡಿರುವುದನ್ನು ಒಪ್ಪಿಕೊಂಡಿರುವ ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯದ ಪ್ರಗತಿ ಶೇ. 30 ರಷ್ಟು ಮೀರಿಲ್ಲ ಎಂದು ಅತೃಪ್ತಿ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಂಗಳವಾರ ನಾನಾ ಇಲಾಖೆ ಪ್ರಧಾನ ಕಾರ್ಯದರ್ಶಿ ಮತ್ತು ಕಾರ್ಯದರ್ಶಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಅಬಿವೃದ್ಧಿ ಕಾರ್ಯಗಳು ಮಂದಗತಿಯಲ್ಲಿ ಸಾಗಿರುವುದಕ್ಕೆ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಒಂದೆರೆಡು ಇಲಾಖೆ ಹೊರತುಪಡಿಸಿ ಉಳಿದ ಎಲ್ಲ ಇಲಾಖೆಗಳ ಯೋಜನೆಗಳು ಕುಂಠಿತಗೊಂಡಿವೆ. ನಿರೀಕ್ಷಿತ ಪ್ರಮಾಣದಲ್ಲಿ ಪ್ರಗತಿ ಆಗಿಲ್ಲವೇಕೆ, ಇರುವ ಅಡ್ಡಿಗಳಾದರೂ ಏನು, ಅರ್ಥಿಕ ಸಮಸ್ಯೆಯೇ ಅಥವಾ ತಾಂತ್ರಿಕ ತೊಂದರೆಯೇ ಎಂಬುದನ್ನು ಅಧಿಕಾರಿಗಳು ಸ್ಪಷ್ಟಪಡಿಸಿಬೇಕು ಎಂದು ಮುಖ್ಯಮಂತ್ರಿಗಳು ತಾಕೀತು ಮಾಡಿದರು.
ಬಜೆಟ್ ನಲ್ಲಿ ಮಂಡಿಸಿದ ಯೋಜನೆಗಳು ಜನರಿಗೆ ತಲುಪುತ್ತಿಲ್ಲ. ಬಜೆಟ್ ಮಂಡಿಸಿ ನಾಲ್ಕು ತಿಂಗಳು ಗತಿಸಿದ್ದರೂ ಇನ್ನೂ ಗುರಿ ತಲುಪಲು ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಇದೇ ಪರಿಸ್ಥಿತಿ ಮುಂದುವರೆದಲ್ಲಿ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಯಡಿಯೂರಪ್ಪ ಎಚ್ಚರಿಕೆ ನೀಡಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications