ಉದ್ಯೋಗ ಮತ್ತು ಕೌಶಲ್ಯ ಮೇಳ ಜಾರಿ :ಬಚ್ಚೇಗೌಡ
ಹುಬ್ಬಳ್ಳಿ, ನ.17: ವಿದ್ಯಾವಂತ ನಿರುದ್ಯೋಗ ಯುವ ಜನತೆಗೆ ಇರುವ ಉದ್ಯೋಗ ಅವಕಾಶಗಳ ಮಾಹಿತಿ, ಅರ್ಹತೆ ಇದ್ದಲ್ಲಿ ಸ್ಥಳದಲ್ಲೇ ನಿಯುಕ್ತಿ, ನೋಂದಾವಣೆ ಆಗಿ ಉದ್ಯೋಗ ಸಿಗದವರ ಕೌಶಲ್ಯ ಅಭಿವೃದ್ಧಿಗೆ ಅವಕಾಶ ನೀಡುವ ಉದ್ಯೋಗ ಮತ್ತು ಕೌಶಲ್ಯ ಮೇಳ ಕಾರ್ಯಕ್ರಮ ರಾಜ್ಯ ಸರ್ಕಾರದ ಮಹತ್ವಾಂಕ್ಷೆ ಯೋಜನೆಯಾಗಿದ್ದು ಇಡೀ ರಾಷ್ಟ್ರದಲ್ಲಿ ಇಂತಹ ಯೋಜನೆ ಜಾರಿಗೊಳಿಸಿದ ಪ್ರಪ್ರಥಮ ರಾಜ್ಯ ಕರ್ನಾಟಕ ಎಂದು ರಾಜ್ಯದ ಕಾರ್ಮಿಕ ಸಚಿವ ಬಿ. ಎನ್. ಬಚ್ಚೇಗೌಡ ಅವರು ನುಡಿದರು.
ಅವರು ಹುಬ್ಬಳ್ಳಿಯಲ್ಲಿಂದು ಆರಂಭಗೊಂಡ ಒಂದು ದಿನದ ಉದ್ಯೋಗ ಮತ್ತು ಕೌಶಲ್ಯ ಮೇಳವನ್ನು ಉದ್ಫಾಟಿಸಿ ಮಾತನಾಡುತ್ತಿದ್ದರು. ರಾಜ್ಯದ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಾಡಿನ ಯುವಜನರ ಉದ್ಯೋಗ ಕೌಶಲ್ಯ ಹೆಚ್ಚಿಸಲು ಕೌಶಲ್ಯ ಆಯೋಗ ರಚಿಸಲಾಗಿದೆ. ಮೇಳಗಳನ್ನು ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಜರುಗಿಸಲು ರಾಜ್ಯ ಸರ್ಕಾರ ಒಟ್ಟಾರೆ 25 ಕೋಟಿ ರೂ ಬಿಡುಗಡೆ ಮಾಡಿದೆ. ಬೆಂಗಳೂರಿನಲ್ಲಿ ನಡೆದ ಉದ್ಯೋಗ ಮೇಳದ ನಂತರ ಉತ್ತರ ಕರ್ನಾಟಕದಲ್ಲಿ ಪ್ರಥಮವಾಗಿ ಹಾಗೂ ರಾಜ್ಯದಲ್ಲಿ ನಡೆಯುತ್ತಿರುವ ಉದ್ಯೋಗ ಮೇಳ ಹುಬ್ಬಳ್ಳಿಯಲ್ಲಿ ಎರಡನೆಯದಾಗಿದ್ದು ನಿರೀಕ್ಷೆಗೂ ಮೀರಿ ಯುವಜನರು ಈ ಉದ್ಯೋಗ ಮತ್ತು ಕೌಶಲ್ಯ ಮೇಳದಲ್ಲಿ ಭಾಗವಹಿಸುತ್ತಿರುವುದು ತಮಗೆ ಸಂತಸ ತಂದಿದೆ.
ಕೆಲವು ತಿಂಗಳ ನಂತರ ಪುನ: ಇಲ್ಲಿ ಎರಡು ದಿನಗಳ ಉದ್ಯೋಗ ಮೇಳ ಆಯೋಜಿಸಲು ಕ್ರಮ ಕೈಗೊಳ್ಳಲಾಗುವುದು. ಇಲ್ಲಿ 87 ಉದ್ಯೋಗ ನೀಡುವ ಸಂಸ್ಥೆಗಳು ಸುಮಾರು 4500 ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದ್ದು, ಆದರೆ ನೊಂದಣೆಯಾಗಿರುವ ಅಭ್ಯರ್ಥಿಗಳಿಗೆ ಉದ್ಯೋಗ ಕೌಶಲ್ಯ ನೀಡುವ ಕಾರ್ಯ ನಡೆಯಲಿದೆ. ನೋಂದಣೆಗೊಂಡ ಕೊನೆಯ ಅಭ್ಯರ್ಥಿಗೂ ಉದ್ಯೋಗ ಸಿಗಬೇಕು ಎನ್ನುವುದು ಸರ್ಕಾರದ ಆಶಯ ಎಂದು ಕಾರ್ಮಿಕ ಸಚಿವರು ನುಡಿದರು.
ಮುಂಬರುವ ದಿನಗಳಲ್ಲಿ ಗುಲ್ಬರ್ಗಾ, ಬಳ್ಳಾರಿ, ಮಂಗಳೂರು ಮುಂತಾದ ಸ್ಥಳಗಳಲ್ಲಿ, ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಉದ್ಯೋಗ ಮೇಳವನ್ನು ಆಯೋಜಿಸಲಾಗುವುದು. ನಗರ ಹಾಗೂ ಗ್ರಾಮೀಣ ಯುವಜನರ ಶಿಕ್ಷಣ ಹಾಗೂ ಕೌಶಲ್ಯಗಳ ಗುಣಮಟ್ಟದಲ್ಲಿರುವ ಕಂದಕವನ್ನು ಮುಚ್ಚಲು ಸರ್ವಕ್ರಮ ಕೈಗೊಳ್ಳಲಾಗುತ್ತಿದ್ದು ರಾಜ್ಯದ ಎಲ್ಲಾ 175 ತಾಲ್ಲೂಕುಗಳಲ್ಲಿ ಸರ್ಕಾರಿ ಐ.ಟಿ.ಐ ಸಂಸ್ಥೆಗಳನ್ನು ಪ್ರಾರಂಭಿಸಲಾಗಿದೆ ಎಂದ ಸಚಿವರು ಇ.ಎಸ್. ಐ. ಗಳಲ್ಲಿ ಚಿಕಿತ್ಸೆಗಾಗಿ ವೈದ್ಯಕೀಯ ವೆಚ್ಚದ ಮಿತಿಯನ್ನು ಒಂದು ಲಕ್ಷದಿಂದ ಐದು ಲಕ್ಷ ರೂ ಗಳಿಗೆ ಹೆಚ್ಚಿಸಲಾಗಿದೆ ಎಂದರು .
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications