ಇಂದೋರ್ 'ಮಹಾರಾಜ'ನಾಗಿ ಮೆರೆದ ಯುವರಾಜ್

ಭಾರತ ನೀಡಿದ 293 ರನ್ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ಯಾವ ಹಂತದಲ್ಲಿಯೂ ಭಾರತಕ್ಕೆ ಸರಿಸಾಟಿಯಾಗಿ ಆಡಲೇ ಇಲ್ಲ. 47 ಓವರ್‌ಗಳಲ್ಲಿ ಕೇವಲ 238 ರನ್ ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು ಭಾರತಕ್ಕೆ 54 ರನ್‌ಗಳ ವಿಜಯದ ಉಡುಗೊರೆ ನೀಡಿತು. ಭಾರತ ತೋರಿದ ಸಂಘಟಿತ ಆಟ ಇಂಗ್ಲೆಂಡ್ ಆಟಗಾರರಿಗೆ ಮುಳುವಾಯಿತು. ಇಂಗ್ಲೆಂಡ್ ಪ್ರಿಯರ್(38) ಮತ್ತು ಷಾ(58) ಜೊತೆಯಾಟದಲ್ಲಿ ಎರಡನೇ ವಿಕೆಟ್‌ಗೆ 96 ರನ್ ಗಳಿಸಿತಾದರೂ ಉಳಿದವರು ಭಾರತದ ಸ್ಪಿನ್ನರುಗಳ ಮೋಡಿಗೆ ಬಲಿಯಾದರು. ನಾಯಕ ಪೀಟರ್ಸನ್(33) ಮತ್ತು ಫ್ಲಿಂಟಾಫ್(43) ಮಧ್ಯದಲ್ಲಿ ಸ್ವಲ್ಪ ಪ್ರತಿರೋಧ ತೋರಿದರು.
ಭಾರತದ ಪರ ಆಲ್‌ರೌಂಡ್ ಆಟವಾಡಿದ ಯುವರಾಜ್ ಸಿಂಗ್ ಹತ್ತು ಓವರ್ ಗಳಲ್ಲಿ 28 ರನ್ ನೀಡಿ ನಾಲ್ಕು ವಿಕೆಟ್ ಮಡಿಲಿಗೆ ಹಾಕಿಕೊಂಡರೆ, ಬ್ಯಾಟಿಂಗ್‌ನಲ್ಲಿ ವಿಫಲರಾದ ವೀರೇಂದ್ರ ಸೆಹ್ವಾಗ್ ಮೂರು ವಿಕೆಟ್ ಕಬಳಿಸಿ ಜಯ ಸಾಧಿಸುವಲ್ಲಿ ತಮ್ಮ ಕಾಣಿಕೆ ನೀಡಿದರು. ಹರಭಜನ್ ಸಿಂಗ್ 1,ಯೂಸುಫ್ ಪಠಾನ್ 1 ವಿಕೆಟ್ ಪಡೆದರು.
ಯುವಿ ಬಿರುಗಾಳಿ : ಮಹಾರಾಣಿ ಉಷಾರಾಜೆ ಟ್ರಸ್ಟ್ ಕ್ರಿಕೆಟ್ ಗ್ರೌಂಡ್‌ನಲ್ಲಿ ಯುವಿ ಅಕ್ಷರಶಃ ಯುವರಾಜರಂತೆ ಮೆರೆದಾಡಿದರು. ಉತ್ತಮ ಫಾರ್ಮ್ ಕಂಡುಕೊಂಡಿರುವ ಯುವರಾಜ್ ಬೀಸಿದ ಬಿರುಗಾಳಿಗೆ ಇಂಗ್ಲೆಂಡ್ ಬೌಲರ್‌ಗಳು ಮತ್ತೆ ತತ್ತರಿಸಿದರು. ಬ್ರಾಡ್ ದಾಳಿಗೆ ಉತ್ತರ ನೀಡದೆ ಭಾರತದ ಬ್ಯಾಟ್ಸ್‌ಮನ್‌ಗಳು ಪರದಾಡುತ್ತಿದ್ದಾಗ ತಕ್ಕ ಉತ್ತರ ನೀಡಿ ಸರಣಿಯ ಎರಡನೇ ಶತಕ (118) ಬಾರಿಸಿದ ಯುವಿ ಬೌಲಿಂಗ್‌ನಲ್ಲಿಯೂ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳು ಪರದಾಡುವಂತೆ ಮಾಡಿದರು. ಸಹಜವಾಗಿ ಯುವಿಗೆ ಪಂದ್ಯದ ಪುರುಷೋತ್ತಮ ಪ್ರಶಸ್ತಿ ಒಲಿಯಿತು.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ನಿಗದಿತ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 292 ರನ್ ಗಳಿಸಿತ್ತು. ಯುವರಾಜ್ ಅವರ ಭರ್ಜರಿ ಶತಕ ದಿನದ ಆಟದ ವಿಶೇಷವಾಗಿತ್ತು. ಯುವರಾಜ್ 118, ಗಂಭೀರ್ 70 ಮತ್ತು ಯೂಸುಫ್ ಪಠಾಣ್ 50 ಬಿಟ್ಟರೆ ಭಾರತದ ಪರ ಯಾರೂ ಕೂಡಾ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಇಂಗ್ಲೆಂಡ್ ಪರ ಬ್ರಾಡ್ 4, ಹರ್ಮಿಸನ್ , ಕಾಲಿ೦ಗವುಡ್, ಪೀಟರಸನ್ ತಲಾ ಒಂದೊಂದು ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್
ಭಾರತ : 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 292
ಇಂಗ್ಲೆಂಡ್ : 238 ರನ್‌ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು.
ಫಲಿತಾಂಶ : ಭಾರತಕ್ಕೆ 54 ರನ್‌ಗಳ ಜಯ
ಪಂದ್ಯ ಶ್ರೇಷ್ಠ : ಯುವರಾಜ್ ಸಿಂಗ್
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications