ದೇವೇಗೌಡರಿಂದ ಹೆಗಡೆ ಗುಣಗಾನ
ಬೆಂಗಳೂರು, ನ. 17 : ತಮ್ಮ ರಾಜಕೀಯ ಕಡುವೈರಿ ಎನಿಸಿದ್ದ ಮಾಜಿ ಮುಖ್ಯಮಂತ್ರಿ ದಿ. ರಾಮಕೃಷ್ಣ ಹೆಗಡೆ ಅವರನ್ನು ಸುದೀರ್ಘ ದಿನಗಳ ನಂತರ ಗುಣಗಾನ ಮಾಡಿದ ಮಾಜಿ ಪ್ರಧಾನಮಂತ್ರಿ ಎಚ್ ಡಿ ದೇವೇಗೌಡ, ಹೆಗಡೆ ಅವರ ಮಾತುಗಳನ್ನು ಕೇಳಿದ್ದರೆ ಇಂದು ನನಗೆ ಈ ಸ್ಥಿತಿ ಬರುತ್ತಿರಲಿಲ್ಲ ಎಂದು ವಿಜಯ ಕರ್ನಾಟಕ ದಿನಪತ್ರಿಕೆಗೆ ನೀಡಿದ ಸಂದರ್ಶನವೊಂದರಲ್ಲಿ ತಮ್ಮ ಮನದಾಳದ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.
ರಾಮಕೃಷ್ಣ ಹೆಗಡೆ ಅವರಿಗೆ ರಾಜಕೀಯ ದೂರದೃಷ್ಟಿ ಚೆನ್ನಾಗಿತ್ತು. ಹಿಂದೆಲ್ಲ ಅವರು ಹೇಳಿದ್ದ ಸಲಹೆಗಳನ್ನು ಕೇಳಿದ್ದರೇ ನನಗೆ ಇಂದು ಈ ಸ್ಥಿತಿಯೇ ಬರುತ್ತಿರಲಿಲ್ಲ. ಯಾವುದೇ ಕಾರಣಕ್ಕೊ ಪುಟ್ಟಸ್ವಾಮಿಗೌಡರನ್ನು ಎಂಎಲ್ ಸಿ ಮಾಡಬೇಡ ಎಂದಿದ್ದರು. ಸಿದ್ಧರಾಮಯ್ಯನನ್ನು ಬೆಳೆಯಲು ಬಿಡಬೇಡ. ಸಿ ಎಂ ಇಬ್ರಾಹಿಂ ಅವರನ್ನು ಹತ್ತಿರ ಸೇರಿಸಬೇಡ ಎಂದು ನನಗೆ ಹಿತವಚನ ನೀಡಿದ್ದರು. ಆದರೆ ನಾನು ಅವರ ಮಾತು ಕೇಳಲಿಲ್ಲ. ಅದಕ್ಕೆ ತಕ್ಕ ಪ್ರತಿಫಲ ಉಂಡಿದ್ದೇನೆ. ಹೆಗಡೆಯವರ ಸಲಹೆಗಳನ್ನು ಕೇಳಿದ್ದರೆ ರಾಜಕೀಯವಾಗಿ ನನಗೆ ಇನ್ನಷ್ಟು ಲಾಭವಾಗುತ್ತಿತ್ತು ಎಂದು ಗೌಡರ ಪಶ್ಚಾತಾಪ ನುಡಿಗಳನ್ನು ಆಡಿದರು.
ನಾನು ಪ್ರಧಾನಿ ಆದ ಕೂಡಲೇ ರಾಮಕೃಷ್ಣ ಹೆಗಡೆ ಅವರನ್ನು ಉಚ್ಚಾಟಿಸಲಾಯಿತು. ಅದಕ್ಕೆ ನಾನೇ ಕಾರಣ ಎಂದು ಬಿಂಬಿಸಲಾಯಿತು. ಎಲ್ಲರೂ ತಿಳಿದುಕೊಂಡಿದ್ದು ಹಾಗೆಯೇ ಎಂದ ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಸ್ ಆರ್ ಬೊಮ್ಮಾಯಿ ಹಾಗೂ ಲಾಲು ಪ್ರಸಾದ್ ಯಾದವ್ ಅವರು ಹೆಗಡೆ ಅವರ ಪಕ್ಷ ವಿರೋಧಿ ಚಟುವಟಿಕೆಗಳಿಂದ ಬೇಸತ್ತು ಉಚ್ಚಾಟಿಸಲು ನಿರ್ಧಾರ ಕೈಗೊಂಡಿದ್ದರು. ಆಗ ನಾನು ಬೇಡ ಅಂದೆ, ಹೆಗಡೆ ಉಚ್ಚಾಟಿಸಿದರೆ ನನದೆ ಕಳಂಕ ಬರುತ್ತೆ ಎಂದು ಹೇಳಿದೆ. ಆದರೆ ಈ ಇಬ್ಬರು ನಾಯಕರು ಕೇಳಲಿಲ್ಲ, ಮರುದಿನ ಉಚ್ಚಾಟಿದರು ಎಂದು ಹೆಗಡೆ ಉಚ್ಚಾಟನೆ ಗುಟ್ಟನ್ನು ರಟ್ಟು ಮಾಡಿದರು.
ಯಾರು ಏನೇ ಹೇಳಿಲಿ, ಜೆ ಎಚ್ ಪಟೇಲ್ ಉತ್ತಮ ವ್ಯಕ್ತಿ. ನೇರ ನಡೆ ನುಡಿಯ ಪಟೇಲ್ ಎಂದಿಗೂ ರಾಜಕೀಯ ಮಾಡಿದವರಲ್ಲ. ಅವರು ಸಾಯುವ ದಿನ ನನ್ನನ್ನು ಊಟಕ್ಕೆಂದು ಮನೆಗೆ ಆಹ್ವಾನಿಸಿದ್ದರು. ಯಾರ್ಯರದೋ ಚಿತಾವಣಿಯಿಂದ ಜನತಾದಳ ಇಬ್ಭಾಗ ಆಗಿದೆ. ಅದನ್ನು ಒಂದು ಮಾಡಬೇಕು. ಆಗ ಮಾತ್ರ ಮನಸ್ಸಿಗೆ ಶಾಂತಿ ಎಂದು ಹೇಳಿದ್ದರು. ಅದರೆ ಅದು ಸಾಧ್ಯವಾಗಲೇ ಇಲ್ಲ ಎಂದು ತಮ್ಮ ನೋವವನ್ನು ವ್ಯಕ್ತಪಡಿಸಿದರು.
ಮಾತಿನ ಲಹರಿ ಬಿಜೆಪಿ ಸರ್ಕಾರದತ್ತ ಹೊರಳಿತು. ಸಂದರ್ಶನದುದ್ದಕ್ಕೊ ಯಡಿಯೂರಪ್ಪ ಅವರನ್ನು ತರಾಟೆಗೆ ತೆಗೆದುಕೊಂಡ ಗೌಡರು, ಸರ್ಕಾರದ ಪ್ರತಿ ನಡೆಯಲ್ಲೂ ಲೋಪ ಕಂಡು ಹಿಡಿದು ಜಾಡಿಸಿದರು. 'ಯಡಿಯೂರಪ್ಪ ಅವರಂಥ ಅಶ್ಲೀಲ ಮುಖ್ಯಮಂತ್ರಿಯನ್ನು ನಾನು ನೋಡಿಯೇ ಇಲ್ಲ. ಅವರ ನಡೆ ನುಡಿ ಮುಖ್ಯಮಂತ್ರಿ ಘಟನೆಗೆ ತಕ್ಕುದಲ್ಲ. ತಾಕತ್ತಿದ್ದರೆ ನನ್ನ ಮೇಲೆ ಪ್ರಕರಣ ದಾಖಲಿಸಲಿ'. ಹಾಗೆಂದು ಮಾಜಿ ಪ್ರಧಾನಮಂತ್ರಿ ಎಚ್.ಡಿ.ದೇವೇಗೌಡ ಅವರ ಸರಕಾರದ ವಿರುದ್ಧ ಸವಾಲು ಹಾಕಿದ್ದಾರೆ.
ವಿಜಯ ಕರ್ನಾಟಕ ಪತ್ರಿಕೆಗೆ ನೀಡಿರುವ ವಿಶೇಷ ಸಂದರ್ಶನವೊಂದರಲ್ಲಿ ಅವರು ಈ ಸವಾಲು ಎಸೆದಿದ್ದಾರೆ. "ನನಗೆ ಯುದ್ಧ ಮಾಡಿ ಗೊತ್ತೇ ಹೊರತು ಪಲಾಯನ ಮಾಡಿ ಅಲ್ಲ. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಲ್ಲಿ ಶಾಶ್ವತವಾಗಿ ಇರುತ್ತಾರೆಯೇ ನಾನೂ ನೋಡುತ್ತೇನೆ "ಎಂದು ಗುಡುಗಿದರು. ಗೊತ್ತು ಗುರಿ ಇಲ್ಲದೆ ಸಾಗುತ್ತಿರುವುದಕ್ಕೆ ಸರ್ಕಾರ ಎನ್ನುತ್ತಾರೆಯೇ ಎಂದು ಪ್ರಶ್ನಿಸಿದ ಅವರು, ಸೇಡು ರಾಜಕೀಯದಲ್ಲಿ ನಿರತವಾಗಿರುವ ಯಡಿಯೂರಪ್ಪ ಅವರನ್ನು ಯಾರು ಮುಖ್ಯಮಂತ್ರಿ ಎಂದು ಹೇಳುತ್ತಾರೆ ಎಂದು ತೀವ್ರ ವಾಗ್ಧಾಳಿ ನಡೆಸಿದರು.
ಎಸ್ ನಿಜಲಿಂಗಪ್ಪ, ಎಸ್ ಎರ್. ಕಂಠಿ, ವೀರೇಂದ್ರ ಪಾಟೀಲ್, ಜೆ ಎಚ್ ಪಟೇಲ್ ಅವರಂಥ ಲಿಂಗಾಯತ ಮುಖಂಡರನ್ನು ಮುಖ್ಯಮಂತ್ರಿ ಗಾದಿಯಲ್ಲಿ ನೋಡಿದ್ದೇನೆ. ಆದರೆ ಯಡಿಯೂರಪ್ಪ ಜಾತಿ ರಾಜಕಾರಣಕ್ಕೆ ಮುಖ್ಯಮಂತ್ರಿ ಪದವಿಯನ್ನು ಹರಾಜು ಹಾಕಿದ್ದಾರೆ. ರಾಜಕೀಯದಲ್ಲಿ ಜಾತಿ ಇದೆ. ಜಾತಿ ಹೆಸರಿನಲ್ಲಿ ರಾಜಕೀಯ ನಡೆಯುತ್ತದೆ. ಆದರೆ ಜಾತಿ ಹೆಸರಿನಲ್ಲಿ ಅಧಿಕಾರಿಗಳ ಮತ್ತು ನೌಕರರ ವರ್ಗಾವಣೆ ಮಾಡುವುದನ್ನೂ ನಾನು ಹಿಂದೆಂದೊ ನೋಡಿಲ್ಲ. ರಾಮಕೃಷ್ಣ ಹೆಗಡೆ, ಬಂಗಾರಪ್ಪ, ವೀರಪ್ಪ ಮೊಯ್ಲಿ ಯಾವ ಮುಖ್ಯಮಂತ್ರಿಗಳ ಕಾಲದಲ್ಲೂ ಇಷ್ಟೊಂದು ಅನಿಷ್ಟ ರೀತಿಯಲ್ಲಿ ವರ್ಗಾವಣೆ ನಡೆದಿರಲಿಲ್ಲ. ಇಂತಹ ಮುಖ್ಯಮಂತ್ರಿಗಳೊಂದಿಗೆ ಯಡಿಯೂರಪ್ಪನನ್ನು ಹೋಲಿಸುವುದು ತಪ್ಪು ಎಂದು ಟೀಕಿಸಿದರು.
ಕುಮಾರಸ್ವಾಮಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಗೌಡರು, ತಾಕತ್ತಿದ್ದರೆ ನನ್ನ ಮೇಲೆ ಕೇಸು ಹಾಕಲಿ ಎಂದು ನೇರ ಸವಾಲು ಎಸೆದರು. ಈ ಸರ್ಕಾರದಲ್ಲಿ ಸುಮಾರು ಒಂಬತ್ತು ಸಾವಿರಕ್ಕೂ ಆಧಿಕ ಸಂಖ್ಯೆಯಲ್ಲಿ ವರ್ಗಾವಣೆ ನಡೆದಿದೆ. ಇಷ್ಟೊಂದು ಅಧಿಕ ಸಂಖ್ಯೆಯಲ್ಲಿ ವರ್ಗಾವಣೆ ಯಾವ ಸರ್ಕಾರದಲ್ಲಿಯೂ ನಡೆದಿರಲಿಲ್ಲ. ವರ್ಗಾವಣೆ ಮಾಡುವುದಕ್ಕೂ ಒಂದು ರೀತಿ ರಿವಾಜು, ಮಾನ ಮರ್ಯಾದೆ ಬೇಡವೇ ಎಂದು ಆಕ್ರೋಶ ವ್ಯಕ್ತಪಡಿಸಿದರು.












Click it and Unblock the Notifications