ಗರುಡ ಮಾಲ್ ತನಿಖೆ ಲೋಕಾಯುಕ್ತಕ್ಕೆ
ಬೆಂಗಳೂರು, ನ.14: ನಗರದ ಮಾರ್ಗರತ್ ರಸ್ತೆಯಲ್ಲಿನ ಕೇಂದ್ರ ಕಾರ್ಯಾಗಾರ ಮತ್ತು ಉಗ್ರಾಣದ ಪ್ರದೇಶದಲ್ಲಿ ಬಹುಮಹಡಿ ವಾಹನ ನಿಲ್ದಾಣ ಮತ್ತು ವಾಣಿಜ್ಯ ಸಂಕೀರ್ಣವನ್ನು ಜಂಟಿ ಸಹಭಾಗಿತ್ವ ಯೋಜನೆಯಡಿಯಲ್ಲಿ ಮೆವರಿಕ್ ಹೋಲ್ಡಿಂಗ್ಸ್ ಮತ್ತು ಇನ್‌ವೆಸ್ಟ್‌ಮೆಂಟ್ ಪ್ರೈ.ಲಿ. ಅವರಿಗೆ ನೀಡಿರುವ ಪ್ರಕರಣವನ್ನು ಲೋಕಾಯುಕ್ತಕ್ಕೆ ವಹಿಸಿ ಸರ್ಕಾರಿ ಆದೇಶ ಹೊರಡಿಸಲಾಗಿದೆ.
ಮಹಾನಗರ ಪಾಲಿಕೆಯು ಈ ಪ್ರದೇಶದಲ್ಲಿ ಬಹುಮಹಡಿ ವಾಹನ ನಿಲ್ದಾಣ ಹಾಗೂ ವಾಣಿಜ್ಯ ಸಂಕೀರ್ಣವನ್ನು ಜಂಟಿ ಸಹಭಾಗಿತ್ವ ಯೋಜನೆಯಡಿಯಲ್ಲಿ ಮೆ. ಮೆವರಿಕ್ ಹೋಲ್ಡಿಂಗ್ಸ್ ಮತ್ತು ಇನ್‌ವೆಸ್ಟ್‌ಮೆಂಟ್ ಪ್ರೈ. ಲಿ. ಅವರ ಸಹಯೋಗದೊಂದಿಗೆ ನಿರ್ಮಿಸಲು ಸರ್ಕಾರವು ಅನುಮೋದನೆ ನೀಡಿರುತ್ತದೆ.
ಈ ಯೋಜನೆಗೆ ಸಂಬಂಧಿಸಿದಂತೆ ಪಾಲಿಕೆಯ ಶಿಫಾರಸಿನ ಮೇರೆಗೆ 1.56 ಲಕ್ಷ ಚದರ ಅಡಿ ಜಾಗದ ಪೈಕಿ ಕೊರತೆ ಇರುವ 8,059 ಚ. ಅಡಿ ಜಾಗವನ್ನು ನೀಡುವ ಸಲುವಾಗಿ ಈ ಪ್ರದೇಶದಲ್ಲಿದ್ದ ಸಿಬ್ಬಂದಿ ವಸತಿ ಗೃಹವನ್ನು ಯೋಜನೆಗೆ ನೀಡಲು ಸಹ ಸರ್ಕಾರ ಮಂಜೂರಾತಿ ನೀಡಿತ್ತು. ನಂತರದ ದಿನಗಳಲ್ಲಿ ಅಂದರೆ 2005, 2006ರಲ್ಲಿ ಮಹಾನಗರ ಪಾಲಿಕೆಯು ಐಡೆಕ್ ಸಂಸ್ಥೆಯೊಂದಿಗೆ ಸ್ಥಳ ತಪಾಸಣೆ ಮಾಡಿದಾಗ ಹೆಚ್ಚುವರಿಯಾಗಿ 3,456 ಚದರ ಅಡಿ ಜಾಗ ಹೆಚ್ಚುವರಿಯಾಗಿ ಕಂಡು ಬಂದ ಹಿನ್ನೆಲೆಯಲ್ಲಿ ಈ ಪ್ರದೇಶವನ್ನು ಯೋಜನೆಗೆ ಪಾಲಿಕೆ ಹಂತದಲ್ಲಿ ಈಗಾಗಲೆ ಸೇರ್ಪಡೆಗೊಳಿಸಿದ್ದು ಸರ್ಕಾರದ ಅನುಮೋದನೆಗಾಗಿ ಪಾಲಿಕೆಯು ಪ್ರಸ್ತಾವನೆ ಸಲ್ಲಿಸಿತ್ತು.
ಈ ಯೋಜನೆಗೆ ಸಂಬಂಧಿಸಿದಂತೆ ಕೆಲವು ಮೂಲಗಳಿಂದ ಟೀಕೆ ಟಿಪ್ಪಣಿಗಳು ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಲೋಕಾಯುಕ್ತ ತನಿಖೆ ವಹಿಸಿ ಸರ್ಕಾರಿ ಆದೇಶ ಹೊರಡಿಸಲಾಗಿದೆ.
*********
ನಂದಗುಡಿ ಎಸ್‌ಈಝಡ್ ಯೋಜನೆ ತನಿಖೆ
ಹೊಸಕೋಟೆ ತಾಲ್ಲೂಕಿನ ನಂದಗುಡಿಯಲ್ಲಿ 22,066 ಎಕರೆ ಪ್ರದೇಶದಲ್ಲಿ ಬಹು ಉತ್ಪನ್ನ ವಿಶೇಷ ವಿತ್ತ ವಲಯ ನಿರ್ಮಾಣ ಕಾರ್ಯವನ್ನು ಮುಂಬೈ ಮೂಲದ ಎಸ್‌ಕೆಐಎಲ್ ಇನ್‌ಫ್ರಾಸ್ಟ್ರಕ್ಚರ್ ಲಿ. ಕಂಪೆನಿಗೆ ನೀಡಿರುವ ಪ್ರಕರಣ ಕುರಿತಂತೆ ತನಿಖೆ ನಡೆಸಲು ಸರ್ಕಾರವು ಲೋಕಾಯುಕ್ತಕ್ಕೆ ವಹಿಸಿದೆ.
ಈ ಬಗ್ಗೆ ರೈತರಿಂದ ಹಲವಾರು ಟೀಕೆ-ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಹಾಗೂ ಸಂಬಂಧಿಸಿದ ಇಲಾಖೆಗಳು ಈ ಪ್ರಸ್ತಾವನೆಯನ್ನು ವಿರೋಧಿಸಿದ್ದರೂ ಈ ಯೋಜನೆಗೆ ದಿ: 10/4/2007 ರಂದು ನಡೆದ 9ನೇ ರಾಜ್ಯಮಟ್ಟದ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ನೀಡಲಾದ ಅನುಮೋದನೆ ಹಾಗೂ ದಿ: 15/6/2007 ಹಾಗೂ ದಿನಾಂಕ 5/10/2007ರಂದು ಸಚಿವ ಸಂಪುಟ ಸಭೆಯಲ್ಲಿ ನೀಡಲಾದ ಅನುಮೋದನೆಯು ಅನಪೇಕ್ಷಿತವಾಗಿದ್ದು ಪೂರ್ಣ ಪ್ರಕ್ರಿಯೆಯು ಪಾರದರ್ಶಕವಾಗಿಲ್ಲ ಎಂದು ಭಾವಿಸಿದ ಸರ್ಕಾರವು ಈ ಪ್ರಕರಣವನ್ನು ಲೋಕಾಯುಕ್ತ ತನಿಖೆಗೆ ವಹಿಸಿ ಆದೇಶ ಹೊರಡಿಸಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications