ಛತ್ತೀಸ್ ಗಡದಲ್ಲಿ ಪ್ರಥಮ ಹಂತದ ಮತದಾನ
ರಾಯ್ ಪುರ್, ನ. 14 : ಭಾರಿ ಬಿಗಿ ಭದ್ರತೆಯ ನಡುವೆ ಛತ್ತೀಸಗಡದ ಪ್ರಥಮ ಹಂತದ 39 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಆರಂಭವಾಗಿದೆ. ಮುಖ್ಯಮಂತ್ರಿ ರಮಣ್ ಸಿಂಗ್, ವಿಧಾನಸಭೆ ಸ್ಪೀಕರ್ ಪ್ರೇಮ್ ಪ್ರಕಾಶ್ ಪಾಂಡೆ, ಪ್ರತಿಪಕ್ಷದ ನಾಯಕ ಮಹೇಂದ್ರ ಕರ್ಮಾ ಅವರ ಭವಿಷ್ಯ ಇಂದು ನಿರ್ಧಾರವಾಗಲಿದೆ.
ಈ ಮಧ್ಯೆ ದಂತೆವಾರ್ ನಲ್ಲಿ ಮೂರು ಚುನಾವಣಾ ಕೇಂದ್ರದ ನಕ್ಸಲರು ದಾಳಿ ನಡೆಸಿದ್ದು, ಮತದಾನಕ್ಕೆ ಬಳಸಲಾಗುವ ಎಲೆಕ್ಟ್ರಾನಿಕ್ ಮಶೀನ್ ಗಳನ್ನು ಧ್ವಂಸಗೊಳಿಸಿದ್ದಾರೆ. ಕೆಲವಡೆ ಗುಂಡಿನ ಚಕಮಕಿ ನಡೆದಿರುವ ವರದಿಯಾಗಿದೆ. ಘಟನೆ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ತೆರಳಿದ್ದು, ಪರಿಸ್ಥಿತಿಯನ್ನು ಹತೋಟಿ ತಂದಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಪ್ರದೇಶದಲ್ಲಿ ತಾತ್ಕಾಲಿಕವಾಗಿ ಮತದಾನದ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿದೆ.
ನಕ್ಸಲ್ ಪೀಡಿತ ಪ್ರದೇಶವಾಗಿರುವ ಬಸ್ತಾರ್ ನಲ್ಲಿ ಭಾರಿ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ. ಪ್ರಥಮ ಹಂತದ ಮತದಾನಕ್ಕೆ ಶಾಂತಿ ಸುವ್ಯವಸ್ಥೆಯಿಂದ ಸುಗಮವಾಗಿ ನಡೆಯಲು ಒಟ್ಟು 40 ಸಾವಿರ ಪೊಲೀಸ ಸಿಬ್ಬಂದಿ ಹಾಗೂ ಜತೆಗೆ 10 ಹೆಲಿಕ್ಯಾಪ್ಟರ್ ಗಳನ್ನು ಬಳಸಿಕೊಳ್ಳಲಾಗಿದೆ. ಬಸ್ತಾರ್ ಜಿಲ್ಲೆಯ ಗ್ರಾಮೀಣ ಪ್ರದೇಶಗಳಾದ ದಂತೆವಾರ್, ಬಿಜಾಪುರ, ಬಸ್ತಾರ್, ನಾರಾಯಣಪುರ ಹಾಗೂ ಕಾಂಕರ್ ಪ್ರದೇಶಗಳಲ್ಲಿ ಮತದಾನಕ್ಕೆ ಬಹಿಷ್ಕಾರ ಮಾಡುವುದಾಗಿ ನಕ್ಸಲರು ಬೆದರಿಕೆ ಒಡ್ಡಿರುವ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿ ಭಾರಿ ಕಟ್ಟೆಚ್ಚರ ವಹಿಸಲಾಗಿದ್ದು, ಅಘೋಷಿತ ನಿಷೇದಾಜ್ಞೆಯನ್ನು ಜಾರಿಗೊಳಿಸಲಾಗಿದೆ.
ಪಂಜಾಬ, ಬಿಹಾರ, ತಮಿಳುನಾಡು, ಗುಜರಾತ್ ರಾಜ್ಯಗಳಲ್ಲಿನ ಹೆಚ್ಚುವರಿ ಪೊಲೀಸ್ ಪಡೆ ಹಾಗೂ 12 ಬಟಾಲಿಯನ್ ಕೇಂದ್ರಿಯ ಅರೆಸೇನಾ ಪಡೆಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ ಎಂದು ಛತ್ತೀಸ ಗಡ್ ಆರ್ಮಿ ಪೊಲೀಸ್ ಮುಖ್ಯಸ್ಥ ಸೀಮಾ ಸುರಕ್ಷಾ ಬಾಲ್ ತಿಳಿಸಿದ್ದಾರೆ. ಸೂಕ್ಷ್ಮ ಪ್ರದೇಶ ಎನ್ನಲಾದ ಬಸ್ತಾರ್ ಪ್ರದೇಶವೊಂದರಲ್ಲಿಯೇ 2256 ಪೊಲೀಸ್ ರನ್ನು ನಿಯೋಜಿಸಲಾಗಿದೆ.
(ದಟ್ಸ್ ಕನ್ನದ ವಾರ್ತೆ)












Click it and Unblock the Notifications