ಮ್ಯಾನ್ ಹೋಲ್ ನಲ್ಲಿ ದುರಂತ ಸಾವು
ಬೆಂಗಳೂರು, ನ. 15 : ಮ್ಯಾನ್ ಹೋಲ್ ದುರಂತಕ್ಕೀಡಾದವರ ಕುಟುಂಬದವರಿಗೆ ತಲಾ ಒಂದು ಲಕ್ಷ ರುಪಾಯಿ ಘೋಷಿಸಿದ ಸಚಿವ ಕಟ್ಟ್ಟಾ ಸುಬ್ರಮಣ್ಯ ನಾಯ್ಡು ಅವರು, ಘಟನೆಯ ಬಗ್ಗೆ ಸೂಕ್ತ ತನಿಖೆ ನಡೆಸಲಾಗುವುದು. ಸ್ಥಳದಲ್ಲಿ ಹಾಜರಿರದ ಅಧಿಕಾರಿಗಳನ್ನು ಅಮಾನತುಗೊಳಿಸಲಾಗುವುದು ಎಂದು ಹೇಳಿದರು
ಘಟನೆಗೆ ಸಂಬಂಧಿಸಿದಂತೆ ಬಿಡಬ್ಲ್ಯುಎಸ್ಎಸ್ ಬಿ ಅಧಿಕಾರಿಗಳಾದ ಗಂಗಾಧರ, ಸೋಮಶೇಖರ ಹಾಗೂ ನಾಗೇಂದ್ರ ಅವರ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಈಶಾನ್ಯ ವಲಯದ ಡಿಸಿಪಿ ಬಸವರಾಜ ಮಾಲಗತ್ತಿ ತಿಳಿಸಿದರು.
ಘಟನೆ ವಿವರ
ಶುಚಿಗೊಳಿಸಲು ಚರಂಡಿಯಲ್ಲಿ ಇಳಿದಿದ್ದ ಇಬ್ಬರು ನೌಕರರಲ್ಲಿ ಉಸಿರುಗಟ್ಟಿ ಮೃತಪಟ್ಟಿದ್ದರೆ, ಅವರನ್ನು ಉಳಿಸಲು ಹೋದ ಅಟೋ ಚಾಲಕ ಕೂಡಾ ಸಾವನ್ನಪ್ಪಿರುವುದು ನಗರದ ಯಲಹಂಕದ ಮದರ್ ಡೈರಿ ಬಳಿ ಶುಕ್ರವಾರ ಮಧ್ಯಾಹ್ನ ನಡೆದಿದೆ.
ಬೆಂಗಳೂರು ನಗರ ನೀರು ಸರಬರಾಜು ಮತ್ತು ಒಳಚರಂಡಿ ಇಲಾಖೆಯಲ್ಲಿ ಗುತ್ತಿಗೆ ನೌಕರನಾಗಿ ಕೆಲಸ ಮಾಡುತ್ತಿದ್ದ ಅಂಬರೀಷ ಹಾಗೂ ಅಟೋ ಚಾಲಕ ಶ್ರೀನಿವಾಸ(ಸೀನ) ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಗಂಭೀರ ಸ್ಥಿತಿಯಲ್ಲಿರುವ ಇನ್ನೊಬ್ಬ ನೌಕರ ನರಸಿಂಹ ಎಂಬಾತನನ್ನು ಯಲಹಂಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೇ ಆತನೂ ಕೂಡಾ ಮೃತಪಟ್ಟಿದ್ದಾನೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಆಗಮಿಸಿದ್ದು, ಪರಿಶೀಲನೆ ನಡೆಸಿದ್ದಾರೆ. 25 ಅಡಿ ಆಳದಲ್ಲಿ ನೌಕರರು ಚರಂಡಿ ಸ್ವಚ್ಛಗೊಳಿಸಲು ಇಳಿದಿದ್ದಾಗ ಈ ದುರ್ಘಟನೆ ಸಂಭವಿಸಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications