ಟಿಕೆಟ್ ಹಂಚಿಕೆ ಪಾರದರ್ಶಕವಾಗಿದೆ : ರಾಹುಲ್
ನವದೆಹಲಿ, ನ. 11 : ಕಳೆದ ವಿಧಾನಸಭೆ ಚುನಾವಣೆ ವೇಳೆಯಲ್ಲಿ ಪಕ್ಷಪಾತ ನೀತಿ ಅನುಸರಿಸಿಲ್ಲ. ಟಿಕೆಟ್ ಹಂಚಿಕೆ ಪ್ರಕ್ರಿಯೆ ಸಂಪೂರ್ಣ ಪಾರದರ್ಶಕವಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಸ್ಪಷ್ಟಪಡಿಸಿದ್ದಾರೆ. ಕಾಂಗ್ರೆಸ್ ಹಿರಿಯ ನಾಯಕಿ ಮಾರ್ಗರೆಟ್ ಆಳ್ವ ಮಾಡಿರುವ ಆರೋಪಕ್ಕೆ ಶುದ್ಧ ಸುಳ್ಳಾಗಿದ್ದು, ಸತ್ಯಕ್ಕೆ ದೂರವಾಗಿವೆ ಎಂದು ಅವರು ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಮಾಡಲಾಗಿರುವ ಟಿಕೆಟ್ ಹಂಚಿಕೆ ನಮಗೆ ತೃಪ್ತಿ ತಂದಿದೆ ಎಂದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಗಳು ಮಾರಾಟವಾಗಿವೆ ಎಂದು ಸಾರ್ವಜನಿಕವಾಗಿ ಆರೋಪ ಮಾಡುವ ಮೂಲಕ ಪಕ್ಷದ ಸಂವಿಧಾನವನ್ನು ಮಾರ್ಗರೆಟ್ ಆಳ್ವ ಉಲ್ಲಂಘಿಸಿದ್ದಾರೆ. ಪಕ್ಷದ ಹಿರಿಯ ಸದಸ್ಯರಾಗಿರುವ ಅವರಿಂದ ಇಂತಹ ಆರೋಪಗಳನ್ನು ನಿರೀಕ್ಷಿಸಿರಲಿಲ್ಲ. ಆದರೆ, ಪಕ್ಷದ ವರ್ಚಸ್ಸಿಗೆ ದಕ್ಕೆ ತರುವ ರೀತಿಯ ಮಾತುಗಳನ್ನು ಆಡಿರುವ ಅವರು ಕ್ಷಮೆ ಅರ್ಹರಲ್ಲ ಎಂದು ನೋವಿನಿಂದ ತಮ್ಮ ಮನದಾಳದ ಮಾತುಗಳನ್ನು ರಾಹುಲ್ ಗಾಂಧಿ ಹೊರಗೆಡವಿದ್ದಾರೆ.
ಟಿಕೆಟ್ ಹಂಚಿಕೆಯಲ್ಲಿ ರಾಜ್ಯದ ಮುಖಂಡರೊಂದಿಗೆ ಸಾಮರಸ್ಯದ ಕೊರತೆಯಿದ್ದರೆ ಹೈಕಮಾಂಡ್ ಜೊತೆಗೆ ಚರ್ಚಿಸಬಹುದಿತ್ತು. ಚುನಾವಣೆಗಳು ಮುಗಿದು ಐದು ತಿಂಗಳ ನಂತರ ಹೀಗೆ ಮಾಡಲಿಕ್ಕೆ ಯಾವ ಕಾರಣವಿರಬಹುದು ಎನ್ನುವುದು ಸ್ಪಷ್ಟವಾಗಿಲ್ಲ ರಾಹುಲ್ ಗಾಂಧಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಮುಂಬರುವ ಐದು ರಾಜ್ಯಗಳ ವಿಧಾನಸಭೆ ಚುನಾವಣೆಗಳ ಮೇಲೆ ಆಳ್ವ ಮಾಡಿರುವ ಆರೋಪಗಳು ಪರಿಣಾಮ ಬೀರುವುದನ್ನು ಅವರು ಸ್ಪಷ್ಟವಾಗಿ ತಳ್ಳಿಹಾಕಿದರು.
(ದಟ್ಸ್ ಕನ್ನಡ ವಾರ್ತೆ)


Click it and Unblock the Notifications
