ಸೂರ್ಯನೆಡೆಗೆ ಹಾರಲಿರುವ ಇಸ್ರೊ ನೌಕೆ
ಬೆಂಗಳೂರು, ನ. 10 : ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-1 ಉಪಗ್ರಹವನ್ನು ಯಶಸ್ವಿಯಾಗಿ ಚಂದ್ರನ ಕಕ್ಷೆಗೆ ಉಡಾವಣೆಗೊಳಿಸಿದ ಬೆನ್ನಲ್ಲೇ 'ಆದಿತ್ಯ' ಎಂಬ ಹೆಸರಿನ ಉಪಗ್ರಹವನ್ನು ಸೂರ್ಯ ಕಕ್ಷೆಗೆ ಉಡಾವಣೆಗೊಳಿಸುವ ಕಾರ್ಯಕ್ರಮವನ್ನು ಈಗಾಗಲೇ ಆರಂಭಿಸಲಾಗಿದೆ. ಈ ಮೂಲಕ ಭಾರತ ಕೆಲವೆ ವರ್ಷಗಳಲ್ಲಿ ಇನ್ನೊಂದು ವಿಕ್ರಮ ಸಾಧಿಸುವ ತವಕದಲ್ಲಿದೆ.
ಚಂದ್ರಯಾನ-1 ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆಗೊಂಡಿರುವುದು ವಿಜ್ಞಾನಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಿದೆ. ಇದು ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ಪ್ರಮುಖ ಮೈಲುಗಲ್ಲಾಗಿದೆ. ಇದರೊಂದಿಗೆ ಈ ಸಾಧನೆ ಮಾಡಿದ ವಿಶ್ವದ ಆರನೇ ರಾಷ್ಟ್ರ ಎಂಬ ಕಿರೀಟವನ್ನು ಭಾರತ ಧರಿಸಿದೆ. ಇದರಿಂದ ಇಸ್ರೋ ವಿಜ್ಞಾನಿಗಳು ಮತ್ತಷ್ಟು ವಿಶ್ವಾಸ ಮೂಡಿದ್ದು, 'ಆದಿತ್ಯ' ಹೆಸರಿನ ಉಪಗ್ರಹವನ್ನು ಸೂರ್ಯನ ಕಕ್ಷೆಗೆ ಉಡಾವಣೆ ಮಾಡಲು ನಿರ್ಧರಿಸಲಾಗಿದೆ ಎಂದು ಇಸ್ರೋ ಮುಖ್ಯಸ್ಥ ಜಿ.ಮಾಧವನ್ ನಾಯರ್ ಹೇಳಿದರು.
'ಆದಿತ್ಯ' ಉಪಗ್ರಹ ಉಡಾವಣೆಗೊಳಿಸಲು ಸುಮಾರು ಒಂದೂವರೆ ವರ್ಷಗಳ ಕಾಲ ಸಿದ್ಧತೆ ಬೇಕಾಗುತ್ತದೆ. ಸೂರ್ಯನ ಕಕ್ಷೆಗೆ ಉಪಗ್ರಹ ಉಡಾವಣೆ ಮಾಡುವುದು ಅಂದುಕೊಂಡಷ್ಟು ಸರಳವಾಗಿಲ್ಲ. ಇದಕ್ಕೆ ಸಾಕಷ್ಟು ಪೂರ್ವತಯಾರಿ ಬೇಕಾಗುತ್ತದೆ. ಇಸ್ರೋ ವಿಜ್ಞಾನಿಗಳು ಈ ಬಗ್ಗೆ ಸಮಗ್ರ ಸಂಶೋಧನೆಯಲ್ಲಿ ತೊಡಗಿದ್ದಾರೆ ಎಂದು ನಾಯರ್ ಸ್ಪಷ್ಟಪಡಿಸಿದರು. ಚಂದ್ರನ ಕಕ್ಷೆಗೆ ಕಳೆದ ತಿಂಗಳ ಅ. 22 ರಂದು ಚಂದ್ರಯಾನ-1 ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. ಚಂದ್ರನ ಕಕ್ಷಗೆ ಈಗಾಗಲೇ ರಷ್ಯಾ, ಜಪಾನ್, ಅಮೆರಿಕ ಹಾಗೂ ಚೀನಾ ದೇಶಗಳು ತಮ್ಮ ಉಪಗ್ರಹವನ್ನು ಉಡಾವಣೆ ಮಾಡಿವೆ.
(ದಟ್ಸ್ ಕನ್ನಡ ವಾರ್ತೆ)


Click it and Unblock the Notifications
