ಅಪರೇಶನ್ ಕಮಲಕ್ಕೆ ಸೋಲ್ವನೇ ಅಂಬರೀಷ?

ಅಂಬರೀಷ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಶ್ರೀರಂಗಪಟ್ಟಣದಿಂದ ಸ್ಪರ್ಧಿಸಿ ಜೆಡಿಎಸ್ ವಿರುದ್ಧ ಸೋಲುಂಡಿದ್ದರು. ತಮ್ಮ ಸೋಲಿಗೆ ಕೆಲ ಕಾಂಗ್ರೆಸ್ ನಾಯಕರು ಕಾರಣ ಎನ್ನುವುದು ಅಂಬರೀಷ ಅವರಿಗೆ ತಿಳಿದಿದೆ ಎನ್ನಲಾಗಿದೆ. ಜೊತೆಗೆ ಪಕ್ಷದಲ್ಲಿರುವ ಒಳಜಗಳ, ಮುಖಂಡರಲ್ಲಿನ ಸಾಮ್ಯತೆ ಕೊರತೆ ಅಂಬರೀಷ ಅವರ ಬೇಸರಕ್ಕೆ ಕಾರಣವಾಗಿದೆ. ಈ ಎಲ್ಲ ಬೆಳವಣಿಗೆಗಳನ್ನು ಅವಲೋಕಿಸಿ ಬಿಜೆಪಿ ಸೇರ್ಪಡೆಯಾದರೆ ಸೂಕ್ತ ಎನ್ನುವುದು ಅಂಬರೀಷ ಅವರ ಅಭಿಪ್ರಾಯವಾಗಿದೆ ಎನ್ನುವುದು ಅವರ ಅತ್ಮೀಯ ವಲಯದವರ ಮಾತಾಗಿದೆ.
ಬಿಜೆಪಿಯ ಹಿರಿಯ ನಾಯಕರೊಬ್ಬರು ಅಂಬರೀಷ ಅವರನ್ನು ಶತಾಯಗತಾಯ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಭಾರಿ ಪ್ರಯತ್ನ ನಡೆಸುತ್ತಿದ್ದಾರೆ. ಅಪರೇಷನ್ ಕಮಲ ಅಂತಿಮ ಹಂತಕ್ಕೆ ಬಂದಿದೆ. ಇದರ ಜೊತೆಗೆ ಜೆಡಿಎಸ್ ಮಾಜಿ ಜೆಡಿಎಸ್ ಶಾಸಕ ಸಿದ್ದರಾಜು ನಿಧನದಿಂದ ಖಾಲಿಯಾಗಿರುವ ಸ್ಥಾನಕ್ಕೆ ಕಾಂಗ್ರೆಸ್ ಮಾಜಿ ಶಾಸಕ ಡಿ.ಸಿ.ತಮ್ಮಣ್ಣ ಅವರನ್ನು ಪಕ್ಷಕ್ಕೆ ಸೆಳೆದು, ಈ ಕ್ಷೇತ್ರದಿಂದ ಸ್ಪರ್ಧಿಗಿಳಿಸಲು ಬಿಜೆಪಿ ಪೂರ್ವ ತಯಾರಿ ನಡೆಸಿರುವುದು ಬೆಳಕಿಗೆ ಬಂದಿದೆ.
ಉಳಿದಂತೆ ತುರುವೇಕೆರೆಯಿಂದ ಎಂ.ಡಿ.ಲಕ್ಷ್ಮಿನಾರಾಯಣ, ಮಧುಗಿರಿಯಿಂದ ಮಾಜಿ ಸಚಿವ ಸಿ.ಚೆನ್ನಗಪ್ಪ, ದೊಡ್ಡಬಳ್ಳಾಪುರದಿಂದ ಜಾಲಪ್ಪ ಪುತ್ರ ಜೆ.ನರಸಿಂಹಸ್ವಾಮಿ, ಅರಭಾವಿ ಕ್ಷೇತ್ರದಿಂದ ಬಾಲಚಂದ್ರ ಜಾರಕಿಹೊಳಿ, ಕಾರವಾರದಿಂದ ಸಚಿವ ಆನಂದ ಅಸ್ನೋಟಿಕರ್, ಹುಕ್ಕೇರಿಯಿಂದ ಸಚಿವ ಉಮೇಶ್ ಕತ್ತಿ ಹಾಗೂ ದೇವದುರ್ಗದಿಂದ ಸಚಿವ ಶಿವನಗೌಡ ಅವರನ್ನು ಕಣಕ್ಕಿಳಿಸಲು ಬಿಜೆಪಿ ನಿರ್ಧರಿಸಿದೆ.
(ದಟ್ಸ್ ಕನ್ನಡ ವಾರ್ತೆ)


Click it and Unblock the Notifications
