ನಾಲ್ಕು ತಿಂಗಳೊಳಗೆ ಬಿಬಿಎಂಪಿ ಚುನಾವಣೆ
ಬೆಂಗಳೂರು, ನ. 10 : ಮುಂದಿನ ನಾಲ್ಕು ತಿಂಗಳ ಒಳಗಾಗಿ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯನ್ನು ಮುಗಿಸಬೇಕು ಎಂದು ರಾಜ್ಯ ಹೈಕೋರ್ಟ್ ಸರ್ಕಾರ ತಾಕೀತು ಮಾಡಿದೆ. ಪುನಃ ಕಾಲಾವಕಾಶ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಬಿಬಿಎಂಪಿ ಚುನಾವಣೆಗಳನ್ನು ನಡೆಸಲು ವಿವಿಧ ಕಾರಣಗಳನ್ನು ನೀಡಿ ಕಾಲಾವಕಾಶ ಕೋರಿ ಹೈಕೋರ್ಟ್ ಗೆ ರಾಜ್ಯ ಸರ್ಕಾರ ಅರ್ಜಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ಪಿ.ಡಿ.ದಿನಕರನ್ ನೇತೃತ್ವದ ಪೀಠ ಮತ್ತೆ ನಾಲ್ಕು ತಿಂಗಳ ಕಾಲಾವಕಾಶ ನೀಡಿ ಆದೇಶ ಹೊರಡಿಸಿದೆ. ಪುನಃ ಕಾಲಾವಕಾಶ ಕೇಳದಂತೆ ತಾಕೀತು ಮಾಡಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಾಗಿ ಪರಿವರ್ತನೆಯಾಗಿದ್ದರಿಂದ ವಾರ್ಡ್ ಗಳ ರಚನೆ ಮಾಡಬೇಕಿದೆ. ಮೀಸಲಾತಿ, ಮತದಾರರ ಪಟ್ಟಿಯನ್ನು ರೂಪಿಸಿಬೇಕಿದೆ. ಹೊಸ ಮತದಾರ ಹೆಸರುಗಳನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಬೇಕಿದೆ. ಕ್ಷೇತ್ರ ಪುನರ್ವಿಂಗಣೆಯಿಂದ ಈ ಎಲ್ಲ ಸಮಸ್ಯೆಗಳು ಉದ್ಭವಿಸಿದ್ದು, ಅ ಕಾರಣಕ್ಕಾಗಿ ಬಿಬಿಎಂಪಿ ಚುನಾವಣೆ ನಡೆಸಲು ಕಾಲಾವಕಾಶದ ಅಗತ್ಯತೆಯನ್ನು ಸರ್ಕಾರ ನ್ಯಾಯಾಲಯದ ಮುಂದೆ ಇರಿಸಿತ್ತು.
ಮಾಜಿ ಮೇಯರ್ ಪಿ.ರಮೇಶ್ ಬಿಬಿಎಂಪಿ ಚುನಾವಣೆ ನಡೆಸಲು ಸರ್ಕಾರ ಮೀನಮೇಷ ಎಣಿಸುತ್ತಿದೆ ಎಂದು ಸರ್ಕಾರದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ ಮೂರು ತಿಂಗಳೊಳಗೆ ಬಿಬಿಎಂಪಿ ಚುನಾವಣೆ ನಡೆಸಬೇಕು ಎಂದು ಸರ್ಕಾರಕ್ಕೆ ಸೂಚನೆ ನೀಡಿತ್ತು. ಮೂರು ತಿಂಗಳೊಳಗೆ ಚುನಾವಣೆ ನಡೆಸದಿದ್ದಾಗ ರಮೇಶ್ ಮತ್ತೆ ನ್ಯಾಯಾಲಯದ ಮೊರೆ ಹೋಗಿದ್ದರು. ಆಗ ಸರ್ಕಾರ ಬಿಬಿಎಂಪಿ ಚುನಾವಣೆ ನಡೆಸಲು ವಿಳಂಬವಾಗಿರುವ ಪಟ್ಟಿಯುಳ್ಳ ಅರ್ಜಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿತ್ತು.
(ದಟ್ಸ್ ಕನ್ನಡ ವಾರ್ತೆ)


Click it and Unblock the Notifications
