ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಸಿ ಉತ್ಪನ್ನಗಳ ಖರೀದಿಗೆ ತಜ್ಞರ ಕರೆ

By Staff
|
Google Oneindia Kannada News

ಹಾರ್ಡ್‌ವೇರ್ ವಲಯದ ವೃದ್ಧಿಗೆ ಚಿಂತನ-ಮಂಥನ ಎಂಬ ವಿಷಯವಾಗಿ ಶುಕ್ರವಾರ ನಡೆದ ಉಪನ್ಯಾಸದಲ್ಲಿ ದೇಶದ ಉತ್ಪಾದನಾ ವಲಯ ಹಾಗೂ ಗ್ರಾಹಕರ ಆಯ್ಕೆ ಬಗ್ಗೆ ವಿಷಯ ಮಂಡಿಸಲಾಯಿತು. ಬಳಕೆದಾರರ ಅಗತ್ಯಕ್ಕೆ ಅನುಗುಣವಾಗಿ ಉತ್ಪನ್ನಗಳನ್ನು ಉತ್ಪಾದಿಸುವುದು, ದೇಸಿ ತಂತ್ರಜ್ಞಾನವುಳ್ಳ ಉತ್ಪನ್ನಗಳ ಖರೀದಿ, ಹಾರ್ಡ್‌ವೇರ್ ಮಾರುಕಟ್ಟೆ ವಿಸ್ತೀರ್ಣದ ಬಗ್ಗೆ ಹೆಚ್ಚು ಗಮನಹರಿಸಲಾಯಿತು.

*ನಿಸ್ಮಿತಾ

ರಫ್ತು ವಹಿವಾಟನ್ನು ಗಮನದಲ್ಲಿರಿಸಿಕೊಂಡು ದೇಶದ ಹಾರ್ಡ್‌ವೇರ್ ಉತ್ಪಾದನಾ ವಲಯ ಕಾರ್ಯನಿರ್ವಹಿಸುತ್ತಿದೆ. ರಫ್ತು ಮಾರುಕಟ್ಟೆಯ ಅಗತ್ಯಗಳಿಗೆ ಅನುಗುಣವಾಗಿ ಬಿಡಿಭಾಗ ಮತ್ತು ಅದಕ್ಕೆ ಸಂಬಂಧಿಸಿದ ಸೇವೆಗಳನ್ನು ಪೂರೈಸುತ್ತಿರುವುದು ವಿಷಾದನೀಯ ಎಂದು ಎಂಎಐಟಿಯ ಅಧ್ಯಕ್ಷ (ಎಸ್‌ಆರ್) ವೆಂಕಟ್ ಕೆದ್ಲಿಯಾ ಅವರು ತಿಳಿಸಿದ್ದಾರೆ.

ಮಾಹಿತಿ ತಂತ್ರಜ್ಞಾನ ಇಲಾಖೆ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ, ಕರ್ನಾಟಕ ಸರ್ಕಾರದ ಎಸ್‌ಟಿಪಿಐ, ಎಂಎಂ ಆಕ್ಟೀವ್ ಸೈ-ಟೆಕ್ ಕಮ್ಯೂನಿಕೇಷನ್ ಜೊತೆಗೂಡಿ ಆಯೋಜಿಸಿರುವ ಮಾಹಿತಿ ತಂತ್ರಜ್ಞಾನ ವಲಯದ ಬೃಹತ್ ಐಟಿ ಮೇಳವಾದ 'ಬೆಂಗಳೂರು ಐಟಿ.ಬಿಜ್‌ನ' ಎರಡನೇ ದಿನವಾದ ಶುಕ್ರವಾರ 'ಐಟಿ ಉತ್ಪಾದನೆ- ವಿನ್ಯಾಸ ಮತ್ತು ಭಾರತೀಯ ನಿರ್ಮಾಣ' ಎಂಬ ವಿಷಯ ಕುರಿತು ನಡೆದ ತಜ್ಞರ ಗುಂಪು ಚರ್ಚೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದೇಶದಲ್ಲಿ ಕಂಪ್ಯೂಟರ್ ಮತ್ತು ಲ್ಯಾಪ್‌ಟಾಪ್ ಬಳಸುತ್ತಿರುವವರ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಳವಾಗುತ್ತಿದೆ.

ಎಲ್ಲರ ನಿರೀಕ್ಷೆಯನ್ನು ಮೀರಿ ಈ ವಲಯವು ವೃದ್ಧಿ ಹೊಂದುತ್ತಿದೆ. ಆದರೆ, ನಾವು ಬಳಸುತ್ತಿರುವ ಕಂಪ್ಯೂಟರ್ ಮತ್ತು ಲ್ಯಾಪ್‌ಟಾಪ್‌ಗಳು ನಮ್ಮಿಂದಲೇ ರಫ್ತು ಮಾಡಿದ ಉತ್ಪನ್ನಗಳನ್ನು ಬಳಸಿಕೊಂಡು ವಿದೇಶಿ ಹೆಸರಿನೊಂದಿಗೆ ಮತ್ತೆ ಮರಳಿ ನಮ್ಮ ಕೈಸೇರುತ್ತಿವೆ. ಭಾರತೀಯ ಕಂಪನಿಯ ಹೆಸರಿನ ಕಂಪ್ಯೂಟರ್ ಇಲ್ಲವೆ ಲ್ಯಾಪ್‌ಟಾಪ್‌ಗಳು ಸಂಖ್ಯೆ ವಿರಳವಾಗಿದೆ. ಹಾರ್ಡ್‌ವೇರ್ ವಲಯವು ಈ ನಿಟ್ಟಿಯಲ್ಲಿ ಚಿಂತಿಸುವ ಅಗತ್ಯವಿದೆ' ಎಂದರು.

ದೇಶದ ಐಟಿ ಹಾರ್ಡ್‌ವೇರ್ ಮಾರುಕಟ್ಟೆಯು ಸ್ಪರ್ಧಾತ್ಮಕವಾಗಿಲ್ಲದಿರುವುದು ಮತ್ತು ಕಂಪ್ಯೂಟರ್‌ನ ಬಿಡಿಭಾಗಗಳನ್ನು ಉತ್ಪಾದಿಸುವುದಕ್ಕಿಂತ ಆಮದು ಮಾಡಿಕೊಂಡಲ್ಲಿ ಅವುಗಳು ಕಡಿಮೆ ಬೆಲೆಗೆ ಲಭ್ಯವಾಗುತ್ತದೆ. ಈ ಕಾರಣದಿಂದಲೇ ಬಹುತೇಕ ಕಂಪನಿಗಳು ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತಿವೆ. ಜೊತೆಗೆ, ಮೂಲಸೌಲಭ್ಯದ ಕೊರತೆ, ಮಾರುಕಟ್ಟೆಯಲ್ಲಿನ ವಿಳಂಬ ಮತ್ತು ಇನ್ನಿತರ ಕಾರಣಗಳಿಂದಾಗಿ ದೇಶೀಯವಾಗಿ ಕಂಪ್ಯೂಟರ್‌ಗಳನ್ನು ನಿರ್ಮಿಸುವ ಸಾಹಸಕ್ಕೆ ದೇಶೀಯ ಕಂಪನಿಗಳು ಮುಂದಾಗುತ್ತಿಲ್ಲ' ಎಂದೂ ವೆಂಕಟ್ ಅವರು ವಿಶ್ಲೇಷಿಸಿದರು.

ಮೊಟೊರೋಲಾ ಮುಖ್ಯಸ್ಥ ರಿಂದ ದೇಸಿ ಮೊಬೈಲ್ ಬಗ್ಗೆ :
ಭಾರತದಲ್ಲಿರುವ ಮೊಟೊರೊಲಾದ ಉತ್ಪಾದನಾ ಕಾರ್ಯಚರಣೆಯ ಹಿರಿಯ ನಿರ್ದೇಶಕ ಹೆನ್ರಿ ಮೋಹನ್ ಅವರು ತಮ್ಮ ವಿಚಾರವನ್ನು ಮಂಡಿಸುತ್ತಾ, 'ಪ್ರತಿ ತಿಂಗಳೂ ಭಾರತದಲ್ಲಿ ಕನಿಷ್ಟವೆಂದರೂ ಎಂಟ ರಿಂದ ಹತ್ತು ದಶಲಕ್ಷದಷ್ಟು ಜನರು ಮೊಬೈಲ್‌ಗಳನ್ನು ಹೊಂದುತ್ತಿದ್ದಾರೆ. ಇವರೆಲ್ಲರೂ, ಭಾರತದಲ್ಲೇ ಉತ್ಪಾದಿಸಲಾಗುವ ಮೊಬೈಲ್‌ಗಳ ಬದಲಿಗೆ ಆಮದು ಮೊಬೈಲ್ ಫೋನ್‌ಗಳನ್ನು ಹೊಂದಲು ಬಯಸುವವರ ಸಂಖ್ಯೆಯೇ ಅಧಿಕವಾಗಿರುತ್ತದೆ. ಅಂತಹವರ ಚಿಂತನೆಯನ್ನು ಬದಲಾಯಿಸುವ ಅಗತ್ಯವಿದೆ.

ಇದು ಗ್ರಾಹಕರ ಸಮಸ್ಯೆ ಎನಿಸಿದರೂ, ಉತ್ಪಾದನಾ ವಲಯಕ್ಕೆ ಸಂಬಂಧಿಸಿದಂತೆ ಇನ್ನೂ ಹಲವು ಸಮಸ್ಯೆಗಳಿವೆ. ಅವುಗಳ ಪೈಕಿ ದೇಶದಲ್ಲಿ ಲಭ್ಯವಾಗುವ ಉತ್ಪನ್ನಗಳ ಬೆಲೆ ಸ್ಪರ್ಧಾತ್ಮಕವಾಗಿಲ್ಲದಿರುವುದು. ಒಂದು ಮೊಬೈಲ್ ಸಿದ್ಧ ಪಡಿಸಲು ಅಗತ್ಯವಿರುವ ಉತ್ಪನ್ನಗಳ ಪೈಕಿ ಶೇಕಡಾ 90 ರಿಂದ 80 ರಷ್ಟು ಉತ್ಪನ್ನಗಳನ್ನು ಆಮದು ಮಾಡಿಕೊಂಡು ದೇಶದಲ್ಲಿ ಉತ್ಪಾದಿಸಲಾಗುತ್ತಿದೆ. ಇವುಗಳನ್ನು ಭಾರತದಲ್ಲೇ ಉತ್ಪಾದಿಸಿದರೆ ಅವುಗಳ ಬೆಲೆ ತುಟ್ಟಿಯಾಗಿರುತ್ತದೆ ಎನ್ನುವ ಕಾರಣದಿಂದ ಬಹುತೇಕರು ಅವುಗಳನ್ನು ಆಮದು ಮಾಡಿಕೊಳ್ಳುತ್ತಾರೆ' ಎಂದು ವಿಶ್ಲೇಷಿಸಿದರು.

'ಟೆಲಿಕಾಂ ವಲಯಕ್ಕೆ ಸಂಬಂಧಿಸಿದಂತೆ ದೇಶದಿಂದ ಮಾಡಲಾಗುವ ರಫ್ತು ಪ್ರಮಾಣ 1990 ರಿಂದ 2006ರ ವರೆಗೂ ಒಂದೇ ರೀತಿಯಲ್ಲಿದೆ. ಈ ಅವಧಿಯಲ್ಲಿ ಏರಿಕೆ ಎಂಬುದೇ ಕಂಡು ಬಂದಿಲ್ಲ. ಈ ಅವಧಿಯಲ್ಲಿ 1,373 ದಶಲಕ್ಷದಷ್ಟು ಅಮೆರಿಕನ್ ಡಾಲರ್‌ನಷ್ಟು ರಫ್ತು ಮಾಡಲಾಗಿದೆ. ದೇಶದ ಇಂಜಿನಿಯರ್‌ಗಳು ಇಡೀ ವಿಶ್ವದಲ್ಲೇ ಸರ್ವಶ್ರೇಷ್ಠರು. ಆದರೆ, ಇಲ್ಲಿನ ವ್ಯವಸ್ಥೆಯಲ್ಲೇ ಲೋಪವಿದೆ. 1980ರಿಂದಲೇ ದೇಶದ ಟೆಲಿಕಾಂ ಉತ್ಪನ್ನಗಳನ್ನು ಎರಡನೇ ಸಾಲಿನ ಉತ್ಪನ್ನಗಳನ್ನಾಗಿಯೇ ಪರಿಗಣಿಸಲಾಗುತ್ತಿದೆ. 2008ರ ಅಂತ್ಯದ ಈ ವೇಳೆಯಲ್ಲೂ ಈ ವಲಯದ ಉತ್ಪನ್ನಗಳು ಮೊದಲ ಹತ್ತು ಉತ್ಪನ್ನಗಳ ಸಾಲಿನಲ್ಲಿಯೂ ಕಾಣಸಿಗದಿರುವುದು ಅತ್ಯಂತ ದುರದೃಷ್ಟಕರ. ಇದೇ ಅವಧಿಯಲ್ಲಿ ಚೀನಾ ಈ ವಲಯದಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ' ಎಂದರು.

ಅರ್ನಾಸ್ಟ್ ಅಂಡ್ ಯಂಗ್ ನ ನಿರ್ದೇಶಕರ ಮಾತುಗಳು

ದೇಶದ ಐಟಿ ಹಾರ್ಡ್‌ವೇರ್ ವಲಯವು ವೃದ್ಧಿ ಕಾಣಬೇಕಾದಲ್ಲಿ ಈ ವಲಯವು ಮಾರುಕಟ್ಟೆಯ ವೇಗಕ್ಕೆ ಅನುಗುಣವಾಗಿ ಮತ್ತು ವಿನೂತನ ಉತ್ಪನ್ನಗಳನ್ನು ಪರಿಚಯಿಸುವುದೇ ಅದಕ್ಕಿರುವ ಪರಿಹಾರ ಮಾರ್ಗವೆಂದು ಬಣ್ಣಿಸಿದ ಅರ್ನಾಸ್ಟ್ ಅಂಡ್ ಯಂಗ್ ಪ್ರೈ ಲಿಮಿಟೆಡ್‌ನ ಸಲಹಾ ಸೇವೆಗಳ ನಿರ್ದೇಶಕ ಸುನೀಲ್ ಶಣೈ ಅವರು, 'ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ದೇಶದ ಸಾಫ್ಟ್‌ವೇರ್ ವಲಯ ದೇಶದ ಒಟ್ಟು ದೇಶೀಯ ಉತ್ಪನ್ನಕ್ಕೆ (ಜಿಡಿಪಿ) ನೀಡಿರುವ ಕೊಡುಗೆ ಪ್ರಮಾಣ 150ಕ್ಕೆ ಏರಿಕೆಗೊಂಡಿದೆ. ವಹಿವಾಟಿನಲ್ಲಿ ಶೇಕಡಾ 860ರಷ್ಟು ವೃದ್ಧಿಹೊಂದಿದೆ. ನೇರ ಉದ್ಯೋಗವನ್ನು ನೀಡುವಲ್ಲಿ ಶೇಕಡಾ 750ರಷ್ಟು ಪ್ರಗತಿ ಸಾಧಿಸಿದೆ.

ಆದರೆ, ಹಾರ್ಡ್‌ವೇರ್ ವಲಯ ಇದೇ ಅವಧಿಯಲ್ಲಿ ಇದೇ ಪ್ರಮಾಣದಲ್ಲಿ ವೃದ್ಧಿ ಸಾಧಿಸಲು ವಿಫಲವಾಗಿದೆ. ಸಾಫ್ಟ್‌ವೇರ್ ವಲಯವನ್ನು ಉತ್ತೇಜಿಸುವಂತಹ ಸರ್ಕಾರಿ ನೀತಿಗಳು ಮತ್ತು ಹೂಡಿಕೆಗಳು ಅದೇ ಪ್ರಮಾಣದಲ್ಲಿ ಹಾರ್ಡ್‌ವೇರ್ ವಲಯಕ್ಕೆ ಲಭ್ಯವಾಗಿಲ್ಲ. ಇವೆಲ್ಲಕ್ಕೂ ಮಿಗಿಲಾಗಿ ದೇಶದ ಒಟ್ಟು ವಹಿವಾಟಿನ ಕೊರತೆ ಪ್ರಮಾಣ 35 ಶತಕೋಟಿ ಅಮೆರಿಕನ್ ಡಾಲರ್. ಈ ಪೈಕಿ ಹಾರ್ಡ್‌ವೇರ್ ಮತ್ತು ಎಲೆಕ್ಟ್ರಾನಿಕ್ ವಲಯದ ಕೊರತೆಯ 'ಕೊಡುಗೆ' ಶೇಕಡಾ 30ರಷ್ಟು' ಎಂದು ಹೇಳಿದರು.

ಎನ್‌ಕೋರ್ ಸಾಫ್ಟ್‌ವೇರ್‌ನ ಅಧ್ಯಕ್ಷ ವಿನಯ್ ದೇಶಪಾಂಡೆ ಅವರು ಮಾತನಾಡಿ, 'ನಮ್ಮ ದೇಶದ ಹಾರ್ಡ್‌ವೇರ್ ಉದ್ದಿಮೆಯು ನಮ್ಮ ಅಗತ್ಯಕ್ಕೆ ಅನುಗುಣವಾಗಿ ಉತ್ಪನ್ನಗಳನ್ನು ವಿನ್ಯಾಸಗೊಳಿಸುವಲ್ಲಿ ನಿರಾಸಕ್ತಿ ತೋರುತ್ತಿದೆ. ನಮ್ಮ ದೇಶದ ಬಳಕೆದಾರರ ಅಗತ್ಯಕ್ಕೆ ಅನುಗುಣವಾಗಿ ಉತ್ಪನ್ನಗಳನ್ನು ಉತ್ಪಾದಿಸುವುದು ಅಗತ್ಯವಾಗಿದೆ. ಆದರೆ, ಯಾವುದೇ ಭಾರತೀಯ ಕಂಪನಿ ಈ ದಿಶೆಯಲ್ಲಿ ಸಾಗುತ್ತಿಲ್ಲ. ಇದಕ್ಕೆ ಒಂದು ಸಣ್ಣ ಉದಾಹರಣೆಯನ್ನು ನೀಡಿದ ಅವರು, ಬಹುತೇಕ ಎಲ್ಲಾ ಮೊಬೈಲ್ ಕಂಪನಿಗಳು ಅವರು ಉತ್ಪಾದಿಸುವ ಮೊಬೈಲ್‌ನಲ್ಲಿ ಟಾರ್ಚ್ ಸೌಲಭ್ಯವನ್ನು ನೀಡುತ್ತಿದ್ದಾರೆ. ಆದರೆ, ಏಕೋ, ಭಾರತೀಯ ಕಂಪನಿಗಳಿಗೆ ಇದು ಕಾಣಿಸುತ್ತಿಲ್ಲ ಎಂದರು.

ಕರ್ನಾಟಕದಲ್ಲಿ ನಾಲ್ಕು ಹಾರ್ಡ್‌ವೇರ್ ಉತ್ಪಾದನಾ ಹಬ್‌ಗಳನ್ನು ಸ್ಥಾಪಿಸುವ ಅಗತ್ಯವಿದೆ. ಪ್ರತಿಯೊಂದು ಹಬ್ ಅನ್ನು ಒಂದು ಸಾವಿರ ಎಕರೆ ಪ್ರದೇಶದಲ್ಲಿ ನಿರ್ಮಿಸುವುದು ಅಗತ್ಯವಾಗಿದೆ ಎಂದು ವಿನಯ್ ಅವರು ನುಡಿದರು.

2015ರ ಗುರಿ: ದೇಶದ ಹಾರ್ಡ್‌ವೇರ್ ಮಾರುಕಟ್ಟೆಯಲ್ಲಿ ಗಮನಾರ್ಹ ಬದಲಾವಣೆ ತರುವ ನಿಟ್ಟಿನಲ್ಲಿ ಕಾರ್ಯೊನ್ಮುಖವಾಗುವುದರ ಜೊತೆಗೆ, 2015ರ ವೇಳೆಗೆ ಈ ವಲಯದಿಂದ 200 ಶತಕೋಟಿ ಅಮೆರಿಕ್ ಡಾಲರ್‌ನಷ್ಟು ವಹಿವಾಟು ನಡೆಸುವ ಮಹೋನ್ನತ ಗುರಿಯೊಂದಿಗೆ ಕಾರ್ಯನಿರ್ವಹಿಸುವುದು ಅತ್ಯಗತ್ಯವಾಗಿದೆ ಎಂದು ಸಮೂಹ ಚರ್ಚೆಯಲ್ಲಿ ಭಾಗಹಿವಹಿಸಿದ್ದ ಎಲ್ಲರ ಒಕ್ಕೊರಲಿನ ಅಭಿಮತವಾಗಿತ್ತು.

ಹಾಗೆಯೇ, ದೇಶದ ಐಟಿ ಹಾರ್ಡ್‌ವೇರ್ ಉತ್ಪಾದನಾ ವಲಯವು 'ಭಾರತದ ಉತ್ಪನ್ನಗಳನ್ನು ಜೋಡಿಸಲಾಗಿದೆ' ಎನ್ನುವ ಸೂಕ್ತಿಗಿಂತ 'ಭಾರತದಲ್ಲೇ ವಿನ್ಯಾಸಗೊಳಿಸಿ, ಉತ್ಪಾದಿಸಲಾಗಿದೆ' ಎನ್ನುವ ಹಣೆಪಟ್ಟಿ ಪಡೆದುಕೊಳ್ಳುವುದು ಅತ್ಯಂತ ಸಮಂಜಸ ಎನ್ನುವ ಅಭಿಪ್ರಾಯವೂ ಚರ್ಚೆಯಲ್ಲಿ ಒಮ್ಮತವಾಗಿ ಮೂಡಿಬಂದಿದ್ದು ವಿಶೇಷವಾಗಿತ್ತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X