ನಾಗಪುರ ಟೆಸ್ಟ್ : ಪಂಟರ್ ಪಡೆ 189/2
ನಾಗಪುರ, ನ. 7 : ಇಲ್ಲಿಯ ವಿದರ್ಭ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಗವಾಸ್ಕರ್-ಬಾರ್ಡರ್ ಸರಣಿಯ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಎರಡನೇ ದಿನ ಆಟ ಅಂತ್ಯಗೊಂಡಾಗ ಪ್ರವಾಸಿ ಪಂಟರ್ ಪಡೆ 2 ವಿಕೆಟ್ ಕಳೆದು 189 ರನ್ ಗಳಿಸಿ ಸುಸ್ಥಿತಿಗೆ ಬಂದು ತಲುಪಿದೆ. ಭಾರತದ ಟರ್ಬನೇಟರ್ ಗೆ 300 ವಿಕೆಟ್ ಗಳ ಗರಿ, ಈ ಮೂಲಕ ಭಾರತದ ಪರ ಟೆಸ್ಟಿನಲ್ಲಿ ಹೆಚ್ಚು ವಿಕೆಟ್ ಗಳಿಸಿದ ಮೂರನೇ ಆಟಗಾರನೆಂಬ ಕೀರ್ತಿಗೆ ಹರ್ಭಜನ್ ಸಿಂಗ್ ಪಾತ್ರರಾದರು.
ಸೈಮನ್ ಕ್ಯಾಟಿಚ್ (ಅಜೇಯ 92) ಹಾಗೂ ಮೈಕ್ ಹಸ್ಸಿ (45) ಸಮಯೋಚಿತ ಆಟದಿಂದ ಆಸೀಸ್ ತಂಡ ಯಾವುದೇ ಅಪಾಯವಿಲ್ಲದೆ ಎರಡನೇ ದಿನದ ಆಟವನ್ನು ಕೊನೆಗೊಳಿಸಿದೆ. ಆದರೆ ಗುರುವಾರ 5 ಹುದ್ದರಿ ನಷ್ಟಕ್ಕೆ 311 ರನ್ ಗಳಿಸಿದ್ದ ಧೋನಿ ಪಡೆ, ಇಂದು ಹೆಚ್ಚು ಹೊತ್ತು ಕ್ರೀಸ್ ಬಳಿ ನಿಲ್ಲಲು ಸಾಧ್ಯವಾಗಲಿಲ್ಲ.
ತಮ್ಮ ಜೀವಮಾನದ ಕೊನೆಯ ಟೆಸ್ಟ್ ಆಡುತ್ತಿರುವ ಸೌರವ್ ಗಂಗೂಲಿ ಅರ್ಧ ಶತಕ ಗಳಿಸಿರುವುದನ್ನು ಬಿಟ್ಟರೆ ಉಳಿದ ಆಟಗಾರರ ಪೆವಿಲಿಯನ್ ಗೆ ಪೆರೇಡ್ ನಡೆಸಿದರು. ಕಾಂಗರೂ ಬೌಲರ್ ಗಳಲ್ಲಿ ಹೊಸ ಮುಖ ಜಾಸನ್ ಕ್ರೇಜಾ ಭಾರತದ ಪಾಲಿಗೆ ಸಿಂಹ ಸ್ವಪ್ನರಾದರು.
ಪ್ರಥಮ ಇನ್ನಿಂಗ್ಸ್ ನಲ್ಲಿ ಭಾರತದ 8 ವಿಕೆಟ್ ಪಡೆಯುವ ಮೂಲಕ ಯಶಸ್ವಿ ಬೌಲರ್ ಆಗಿ ಹೊರಹೊಮ್ಮಿದರು. ಅಂತಿಮವಾಗಿ ಮಧ್ಯಾಹ್ನದ ಹೊತ್ತಿಗೆ ಭಾರತ 441 ಕ್ಕೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ಜಾಸನ್ ಕ್ರೇಜಾ ದಾಳಿಗೆ ಭಾರತದ ಬ್ಯಾಟಿಂಗ್ ಪಾಳೆಯ ಅಕ್ಷರಶಃ ತತ್ತರಿಸಿತು.ಇನ್ನಿಂಗ್ಸ್ ಆರಂಭಿಸಿದ ಪಂಟರ್ ಪಡೆಗೆ ಆರಂಭಿಕ ಆಘಾತ ಕಾದಿತ್ತು. ಆರಂಭಿಕ ಆಟಗಾರ ಮೈಕೆಲ್ ಹೇಡನ್ 16 ರನ್ ಗಳಿಸಿದ್ದಾಗ ವಿಕೆಟ್ ಒಪ್ಪಿಸಿ ಹೊರ ನಡೆದರು.
ನಾಯಕ ರಿಕಿ ಪಾಂಟಿಂಗ್ ಹೆಚ್ಚು ಹೊತ್ತಿ ಮೈದಾನದಲ್ಲಿ ಉಳಿಯಲಿಲ್ಲ. ಕೇವಲ 24 ರನ್ ಪೇರಿಸಿ ಪೆವಿಲಿಯನ್ ಹಾದಿ ಹಿಡಿದರು. ಸೈಮನ್ ಕ್ಯಾಟಿಚ್ ಅಜೇಯ 92 ರನ್ ಹಾಗೂ ಮೈಕ್ ಹಸ್ಸಿ ಅವರ ತಾಳ್ಮೆಯ ಆಟದಿಂದ ಎರಡು ವಿಕೆಟ್ ನಷ್ಟಕ್ಕೆ 189 ರನ್ ಕೂಡಿ ಹಾಕಿದೆ. ಇಂದಿನ ಪಂದ್ಯದ ವಿಶೇಷವೆಂದರೆ ಭಾರತದ ಸ್ಪಿನ್ ಮಾಂತ್ರಿಕ ಹರ್ಭಜನ್ ಸಿಂಗ್ 300 ವಿಕೆಟ್ ಗಳಿಸಿರುವುದು. ಭಾರತದ ಪರ ಟೆಸ್ಟಿನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಮೂರನೇ ಆಟಗಾರ ಎಂಬ ಹೆಗ್ಗಳಿಕೆಗೆ ಭಾಜನರಾದರು.
(ದಟ್ಸ್ ಕ್ರಿಕೆಟ್ ವಾರ್ತೆ)


Click it and Unblock the Notifications
