ನಗರದ ಹೊರವಲಯದಲ್ಲಿ ಕೈಪಾಳೆಯದ ಸಭೆ
ಬೆಂಗಳೂರು, ನ. 5 : ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಯ ಸೋಲಿನಿಂದ ಭಾರಿ ಮುಖಭಂಗಕ್ಕೆ ಒಳಗಾಗಿರುವ ಕಾಂಗ್ರೆಸ್ ಮುಖಂಡರು ಇಂದು ನಗರದ ಹೊರವಲಯದ ರೆಸಾರ್ಟ್ ವೊಂದರಲ್ಲಿ ಸೋಲಿನ ಆತ್ಮಾವಲೋಕನ ಸಭೆ ನಡೆಸಿದ್ದಾರೆ.
ಪಕ್ಷ ಸಂಘಟನೆ ಮತ್ತು ಮುಂಬರುವ ಲೋಕಸಭೆ ಹಾಗೂ ವಿಧಾನಸಭೆ ಉಪಚುನಾವಣೆಯ ಎದುರಿಸುವುದು ಹಾಗೂ ಚುನಾವಣೆಯ ಪೂರ್ವ ಸಿದ್ಧತಗಳು ಸಭೆ ಪ್ರಮುಖ ವಸ್ತುವಾಗಿವೆ. ಹಾಗೆಯೇ ಇತ್ತೀಚೆಗೆ ನಡೆದ ಧಾರವಾಡ, ಬೆಳಗಾವಿ ಹಾಗೂ ಕೊಡಗು ಕ್ಷೇತ್ರಗಳ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸೋಲನುಭವಿಸಿರುವುದನ್ನು ವಿಮರ್ಶೆ ಮಾಡಿಕೊಳ್ಳಲಿದೆ.
ಸ್ಥಳೀಯ ಸಂಸ್ಥೆಗಳ ಸೋಲಿನಿಂದ ಕೆಂಗಟ್ಟಿರುವ ಕಾಂಗ್ರೆಸ್ ಪಕ್ಷ ಕಂಗಾಲಾಗಿರುವ ಜೆಡಿಎಸ್ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕು ಎನ್ನುವುದು ಪಕ್ಷದ ಅನೇಕ ಹಿರಿಯರ ಒಕ್ಕೊರಲ ಅಭಿಪ್ರಾಯ ಹೊರಹೊಮ್ಮಿದೆ. ಎಂಎಲ್ಸಿ ಫಲಿತಾಂಶ ಬಂದ ನಂತರ ಕುಮಾರಸ್ವಾಮಿ ಕೂಡಾ ಜಾತ್ಯಾತೀತ ಪಕ್ಷಗಳು ಒಂದಾಗಿ ಬರಲಿರುವ ಚುನಾವಣೆಗಳನ್ನು ಎದುರಿಸುವುದು ಸೂಕ್ತ ಎಂದು ಹೇಳಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಭೆಯಲ್ಲಿ ಎಲ್ಲರಿಂದಲೂ ಈ ಬಗ್ಗೆ ಸಹಮತ ವ್ಯಕ್ತವಾಗಿದೆ.
ಕಾಂಗ್ರೆಸ್ ಜೆಡಿಎಸ್ ಪಕ್ಷಗಳಿಗೆ ಮೈತ್ರಿಗೆ ದೊಡ್ಡ ಸಮಸ್ಯೆಯಾಗಿರುವ ಸಿದ್ಧರಾಮಯ್ಯ ಮೈತ್ರಿಯನ್ನು ಬಲವಾಗಿ ವಿರೋಧಿಸಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಸ್ವಸಾಮರ್ಥ್ಯದಿಂದ ಚುನಾವಣೆ ಎದುರಿಸುವುದರ ಜೊತೆಗೆ ಗೆಲ್ಲುವ ತಾಕತ್ತು ಕೂಡಾ ಇದೆ. ಹೀಗಿರುವಾಗ ಮೈತ್ರಿ ಮಾಡಿಕೊಳ್ಳುವುದು ಸರಿಯಲ್ಲ ಎಂದು ಬಹಿರಂಗವಾಗಿ ಹೇಳಿದ್ದಾರೆ. ಇನ್ನೊಂದು ಕುತೂಹಲಕಾರಿ ಸಂಗತಿಯೆಂದರೆ ಕೆಪಿಸಿಸಿ ಅಧ್ಯಕ್ಷ ಆಯ್ಕೆ ಪ್ರಕ್ರಿಯೆ ನಂತರ ಸಿದ್ಧರಾಮಯ್ಯ ಕಾಂಗ್ರೆಸ್ ಪಕ್ಷದಲ್ಲಿ ತಟಸ್ಥರಾಗಿರುವುದು ಅನೇಕ ಉಹಾಪೋಹಗಳಿಗೆ ಎಡೆಮಾಡಿದೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ಸಿದ್ದು, ಸ್ಥಾನ ಕೈತಪ್ಪಿದಾಗ ಭಾರಿ ನಿರಾಸೆ ಅನುಭವಿಸಿದ್ದರು. ಇದರ ಬೆನ್ನಲ್ಲೇ ಅನೇಕ ಸಲ ಕಾಂಗ್ರೆಸ್ ತೊರೆಯುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಆದರೆ ಅಂತರಂಗದಲ್ಲಿ ಅಸಮಾಧಾನದ ಹೊಗೆಯಾಡುತ್ತಿರುವುದನ್ನು ತಳ್ಳಿಹಾಕುವಂತಿಲ್ಲ. ಸಿದ್ದು ಪಕ್ಷದ ಹಿರಿಯ ನಾಯಕರು ಅವರು ನಮ್ಮ ಪಕ್ಷದ್ದಲಿಯೇ ಇದ್ದಾರೆ ಎನ್ನುವುದು ಖರ್ಗೆ ಸೇರಿ ಅನೇಕ ನಾಯಕರ ಅಭಿಮತ. ಒಟ್ಟಿನಲ್ಲಿ ಮುಂಬರುವ ಚುನಾವಣೆಗೆ ತಾಲೀಮು ನಡೆಸಿರುವ ಕಾಂಗ್ರೆಸ್ ನಾಯಕರ ತಂತ್ರಗಾರಿಕೆ ಕೆಲಸ ಮಾಡಲಿದೆಯೇ ಎನ್ನುವುದನ್ನು ಕಾದು ನೋಡಬೇಕಿದೆ. ಸಭೆಯಲ್ಲಿ ಪ್ರತಿ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ, ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಸೇರಿ ಅನೇಕ ಮುಖಂಡರು ಪಾಲ್ಗೊಂಡಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ವಿಧಾನ ಪರಿಷತ್ ಚುನಾವಣೆ ಫಲಿತಾಂಶಕ್ಕೆ ಹರ್ಷ
ದೇಶಪಾಂಡೆ ದಿಢೀರಾಗಿ ದೆಹಲಿಗೆ ಭೇಟಿ
ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವು


Click it and Unblock the Notifications
