ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಗೇನಕಲ್ : ಕೇಂದ್ರ ಮಧ್ಯಪ್ರವೇಶಕ್ಕೆ ಆಗ್ರಹ

By Staff
|
Google Oneindia Kannada News

ನವದೆಹಲಿ, ನ. 5 : ತಮಿಳುನಾಡು ಸರ್ಕಾರ ಹೊಗೇನಕಲ್ ಕುಡಿಯುವ ನೀರು ಯೋಜನೆಗೆ ಸಂಬಂಧಿಸಿದಂತೆ ಟೆಂಡರ್ ಕರೆದಿರುವುದಕ್ಕೆ ರಾಜ್ಯ ಸರ್ಕಾರ ತೀವ್ರ ಅಸಮಧಾನ ವ್ಯಕ್ತಪಡಿಸಿದೆ. ಈ ವಿಷಯದಲ್ಲಿ ಕೇಂದ್ರ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಟೆಂಡರ್ ಪ್ರಕ್ರಿಯೆಯನ್ನು ರದ್ದುಪಡಿಸುವಂತೆ ತಮಿಳುನಾಡು ಸರ್ಕಾರಕ್ಕೆ ಸ್ಪಷ್ಟ ಸೂಚನೆ ನೀಡಬೇಕೆಂದು ನೀರಾವರಿ ಸಚಿವ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.

ಕೃಷ್ಣಾ ಬಿ ಸ್ಕೀಮ್ ನದಿ ನೀರಿನ ಹಂಚಿಕೆಗೆ ಸಂಬಂಧಿದಂತೆ ಇಂದು ನಗರದಲ್ಲಿ ವಿಚಾರಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿಗೆ ಆಗಮಿಸಿರುವ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದ ಹಿತಕ್ಕೆ ಮಾರಕವಾಗುವ ನಿರ್ಣಯ ಕೈಗೊಂಡಿರುವ ತಮಿಳುನಾಡು ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು ಎಂದರು. ವಿವಾದಿತ ಹೊಗೇನಕಲ್ ಜಲಾಶಯದ ವಿಚಾರಣೆ ಇನ್ನೂ ನ್ಯಾಯಾಲಯದಲ್ಲಿದೆ. ಆ ಬಗ್ಗೆ ನ್ಯಾಯಾಲಯದಿಂದ ಸ್ಪಷ್ಟವಾದ ಆದೇಶ ಹೊರಬಿದ್ದಿಲ್ಲ. ವಿವಾದಲ್ಲಿರುವ ಪ್ರದೇಶದಲ್ಲಿ ಕಾಮಗಾರಿ ಆರಂಭಿಸುವುದಕ್ಕೆ ತಮಿಳುನಾಡು ಸರ್ಕಾರ ಮಂಗಳವಾರ ಟೆಂಡರ್ ಕರೆಯುವ ಮೂಲಕ ಪ್ರಕ್ರಿಯೆಗೆ ಚಾಲನೆ ನೀಡಿರುವುದು ಖಂಡನೀಯ ಕ್ರಮವಾಗಿದೆ ಎಂದು ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದರು.

ಹೊಗೇನಕಲ್ ಕುಡಿಯುವ ನೀರು ಯೋಜನೆಯ ಕಾಮಗಾರಿಯನ್ನು ಕೈಗೆತ್ತಿಕೊಂಡರೆ ಅದರಿಂದ ಉಂಟಾಗುವ ಲಾಭ ನಷ್ಟಗಳನ್ನು ಗಮನಿಸಬೇಕಾಗಿದೆ. ತಮಿಳುನಾಡಿಗೆ ಲಾಭವಾದರೆ, ಕರ್ನಾಟಕದ ಅನೇಕ ಗ್ರಾಮಗಳು ಮುಳುಗಡೆಯಾಗಲಿವೆ. ಆದ್ದರಿಂದ ಈ ಯೋಜನೆ ರಾಜ್ಯದ ಹಿತಕ್ಕೆ ಮಾರಕವಾಗಿದೆ. ಈ ಹಿನ್ನೆಲೆಯಲ್ಲಿ ಯೋಜನೆ ಕಾಮಗಾರಿಗೆ ಕರೆದಿರುವ ಟೆಂಡರ್ ನ್ನು ಕೂಡಲೇ ರದ್ದು ಪಡಿಸಬೇಕು. ಜೊತೆಗೆ ಯೋಜನೆಯ ಬಗ್ಗೆ ಸಂಪೂರ್ಣವಾಗಿ ಪುನರ್ ಪರಿಶೀಲನೆ ನಡೆಸಬೇಕಾದ ಅಗತ್ಯವಿದೆ ಎಂದು ಬೊಮ್ಮಾಯಿ ಪ್ರತಿಪಾದಿಸಿದ್ದಾರೆ. ಉಭಯ ರಾಜ್ಯಗಳ ನಡುವೆ ಸಮಸ್ಯೆ ಮತ್ತಷ್ಟು ಉಲ್ಭಣಗೊಳ್ಳುವ ಮೊದಲು ಕೇಂದ್ರ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಬೇಕೆಂದು ಅವರು ಒತ್ತಾಯಿಸಿದರು.

ಕೃಷ್ಣಾ ಬಿ ಸ್ಕೀಮ್ ನದಿ ನೀರಿನ ಹಂಚಿಕೆ ವಿಷಯ ಕುರಿತಂತೆ ಇಂದು ಕೃಷ್ಣಾ ನದಿ ನೀರು ಹಂಚಿಕೆ ಪ್ರಾಧಿಕಾರದಿಂದ ವಿಚಾರಣೆ ನಡೆಯುತ್ತಿದ್ದು, ಕರ್ನಾಟದ ಪರವಾಗಿ ಖ್ಯಾತ ನ್ಯಾಯವಾದಿ ಪಾಲಿ ನಾರಿಮನ್ ವಕಾಲತ್ತು ನಡೆಸುತ್ತಿದ್ದಾರೆ. ಶೀಘ್ರವೇ ರಾಜ್ಯದ ಪರವಾಗಿ ನ್ಯಾಯ ದೊರೆಯುವ ಸಾಧ್ಯತೆಗಳಿವೆ ಎಂದು ಬೊಮ್ಮಾಯಿ ಸ್ಪಷ್ಟಪಡಿಸಿದರು. ತಮಿಳುನಾಡು ಕರೆದಿರುವ ಟೆಂಡರ್ ವಿಷಯಕ್ಕೆ ಸಂಬಂಧಿಸಿದಂತೆ ಇಂದು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರನ್ನು ಭೇಟಿ ಚರ್ಚೆ ನಡೆಸುವುದಾಗಿ ಹೇಳಿದರು.

ಚಾಮರಾಜನಗರದಲ್ಲಿ ಪ್ರತಿಭಟನೆ

ವಿವಾದಿತ ಹೊಗೇನಕಲ್ ಜಲಾಶಯಕ್ಕೆ ಸಂಬಂಧಿಸಿದಂತೆ ತಮಿಳುನಾಡು ಸರ್ಕಾರ ಟೆಂಡರ್ ಕರೆದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಕನ್ನಡ ಪರ ಸಂಘಟನೆಗಳು ಕಾರ್ಯಕರ್ತರು ಇಂದು ಚಾಮರಾಜನಗರದಲ್ಲಿರುವ ಕೇಂದ್ರ ಸರ್ಕಾರ ಸ್ವಾಮ್ಯದ ಬಿಎಸ್ಎನ್ಎಲ್ ಕಚೇರಿ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ತಮಿಳುನಾಡಿನ ಸರ್ಕಾರದ ಕ್ರಮವನ್ನು ಖಂಡಿಸಿದ ಕಾರ್ಯಕರ್ತರು ಘೋಷಣೆ ಕೂಗಿದರು. ಈ ಸಂದರ್ಭದಲ್ಲಿ 19 ಮಂದಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ಹೊಗೇನಕಲ್ ಯೋಜನೆಗೆ ಅಡ್ಡಿ ಬೇಡ : ರಾಮದಾಸ್
ಹೊಗೇನಕಲ್ ತಮಿಳುನಾಡಿನಅವಿಭಾಜ್ಯ ಅಂಗ :ತ್ರಿಪಾಠಿ
'ಹೊಗೆ' ಜಂಟಿ ಸಮೀಕ್ಷೆಗೆ ಯಡಿಯೂರಪ್ಪ ಆಗ್ರಹ
ಹೊಗೆ ಹಗೆ ನಿಲ್ಲಿಸಲು ದೆಹಲಿ ತನಕ ದೂರು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X