ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ ಹಂಪಿ

By Staff
|
Google Oneindia Kannada News

ಹಂಪಿ, ನ.3:ಭಾರತದ ಮಧ್ಯಕಾಲೀನ ಇತಿಹಾಸದಲ್ಲಿ ಸುಮಾರು ಮೂರು ಶತಮಾನಗಳ ಕಾಲ ತೊಳಗಿ ಬೆಳಗಿದ ವಿಜಯನಗರ ಸಾಮ್ರಾಜ್ಯದ ನೆನಪು ಮತ್ತು ಜನಮಾನಸದ ಸ್ಮೃತಿಪಟಲದ ಮೇಲೆ ನಲಿದಾಡಲಿದೆ. ಕಾರಣ ನವೆಂಬರ್ 3 ರಿಂದ 5 ರವರೆಗೆ ಮೂರು ದಿನಗಳ ಕಾಲ ಹಂಪಿ ವಿರೂಪಾಕ್ಷನ ಸನ್ನಿಧಿಯಲ್ಲಿ ಹಂಪಿ ಉತ್ಸವ -08 ಅಭೂತಪೂರ್ವವೆಂಬಂತೆ ಸಜ್ಜುಗೊಂಡಿದೆ. ಇಂದು ಸಂಜೆ 5.30ಕ್ಕೆ ಬಿಜೆಪಿ ಮುಖಂಡ ಎಲ್.ಕೆ.ಅಡ್ವಾಣಿ ಹಂಪಿ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ.

ಮೈಸೂರು ದಸರಾ ನಾಡಿನ ಉತ್ಸವದ ಅಂಗವಾಗಿ ರೂಪುಗೊಂಡಿರುವುದರ ಬೇರುಗಳು ವಿಜಯನಗರ ಸಾಮ್ರಾಜ್ಯದ ಇತಿಹಾಸದಲ್ಲಿ ಚಾಚಿಕೊಂಡಿವೆ. ವಿಜಯನಗರದ ಸ್ಮರಣಾರ್ಹ ರಾಜ ಶ್ರೀ ಕೃಷ್ಣದೇವರಾಯನ (1509-1529) ಕಾಲದಲ್ಲಿ ನವರಾತ್ರಿ ಉತ್ಸವ ಧಾರ್ಮಿಕ ಆಚರಣೆಯಾಗಿ ರೂಪುಗೊಂಡರೂ, ಆ ಹಬ್ಬ ವಿಜಯನಗರದ ನಾಡಹಬ್ಬವಾಗೇ ಗುರುತಿಸಲ್ಪಟ್ಟಿತ್ತು. 1965 ರಲ್ಲಿ ವಿಜಯನಗರ ಸಾಮ್ರಾಜ್ಯದ ಪತನಾನಂತರ ಮೈಸೂರು ಅರಸು ವಿಜಯನಗರ ಅರಸರ ಪರಂಪರೆಯನ್ನು ದಸರಾ ಮಹೋತ್ಸವವನ್ನಾಗಿ ಆಚರಿಸಲು ಆರಂಭಿಸಿದರು. ಮೈಸೂರು ಅರಸರ ಆಳ್ವಿಕೆ ನಂತರ ಕರ್ನಾಟಕ ಸರ್ಕಾರ ಈ ಉತ್ಸವನ್ನು ನಾಡಹಬ್ಬವಾಗಿ ಮುಂದುವರೆಸಿದೆ. ಅಂದು ಮೈಸೂರು ಅರಸರ ರಾಜ್ಯಕ್ಕೆ ಸೀಮಿತವಾಗಿದ್ದ ದಸರಾ ಇಂದು ನಾಡ ಹಬ್ಬವಾಗಿ ನಾಡಿನ ಉದ್ದಗಲಕ್ಕೂ ಜನಮಾನಸದ ಹಬ್ಬವಾಗಿ ನೆಲೆಗೊಂಡಿದೆ.

ಬೇಂದ್ರೆ ಗೆಳೆಯರ ಗುಂಪಿನಿಂದ ಹಂಪಿ ತನಕ...
1926 ಸುಮಾರಿಗೆ ದೇಶದಲ್ಲಿ ಸ್ವಾತಂತ್ರ್ಯ ಹೋರಾಟ ತೀವ್ರಗೊಳ್ಳುತ್ತಿದ್ದ ಸಂಕ್ರಮಣ ಕಾಲ. ಆಗ ಕರ್ನಾಟಕದಲ್ಲಿ ಕರ್ನಾಟಕ ಏಕೀಕರಣ ಚಿಂತನೆಯೂ ಈ ಹೋರಾಟದ ಜೊತೆ ಜೊತೆಗೇ ಮೈದಳೆದಿತ್ತು. ಆಗ ಧಾರವಾಡದಲ್ಲಿ ಕವಿ ದ.ರಾ. ಬೇಂದ್ರೆ ಅವರು ಗೆಳೆಯರ ಗುಂಪೊಂದನ್ನು ಕಟ್ಟಿಕೊಂಡು, ನಾಡಹಬ್ಬ ಆಚರಿಸಲು ಮುಂದಾದರು. ಕನ್ನಡದ ಇತರ ಪ್ರದೇಶಗಳಲ್ಲೂ ಈ ಗೆಳೆಯರ ಗುಂಪು ಸಂಚರಿಸಿ, ಕನ್ನಡಿಗರ ಏಕತೆಯ ಹಿನ್ನೆಲೆಯಲ್ಲಿ ನಾಡಹಬ್ಬ ಪ್ರೇರೇಪಣೆ ನೀಡಿದ್ದು, ಒಂದು ಮರೆಯಲಾದ ಘಟನೆ.

ಯುನೆಸ್ಕೋದ ವಿಶ್ವಪರಂಪರೆಯಲ್ಲಿ ಗುರುತಿಸಲಾಗಿರುವ ಹಂಪಿಯಲ್ಲಿ ಅಳಿದ ಸಾಮ್ರಾಜ್ಯದ ನೆನಪಿನಲ್ಲಿ ಹಂಪಿ ಉತ್ಸವ ನಡೆಸಲು 1988 ರಿಂದ ಹಂಪಿ ಉತ್ಸವ ಆಚರಿಸಲಾಗುತ್ತಿದೆ. ಇದಕ್ಕೆ ಪೂರ್ವ ಪೀಠಿಕೆಯಾಗಿ ಹಂಪಿಯನ್ನು ಪ್ರವಾಸಿ ತಾಣವಾಗಿ ಗುರುತಿಸುವ ಯತ್ನ ಸರ್ಕಾರದಿಂದ 70ರ ದಶಕದಲ್ಲಿಯೇ ನಡೆದಿತ್ತು. ಈ ಹಿನ್ನೆಲೆಯಲ್ಲಿ ಪ್ರವಾಸಿ ಉತ್ಸವ ಹೆಸರಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಮೊದಲಾದವು. ನಂತರ 1987 ರಲ್ಲಿ ಈ ಉತ್ಸವ ಕನಕ ಪುರಂದರ ಉತ್ಸವವಾಗಿ ಆಚರಿಸಲ್ಪಟ್ಟಿತು.

1988ರ ಮೊದಲ ಉತ್ಸವದ ನಂತರ 89 ರಿಂದ 94 ರವರೆಗೆ 6 ವರ್ಷಗಳ ಕಾಲ ವಿವಿಧ ಕಾರಣಗಳಿಂದ ಉತ್ಸವ ಜರುಗಲಿಲ್ಲವಾದರೂ 1995ರಿಂದ 2001ರ ವರೆಗೆ ಉತ್ಸವ ನಿರಂತರವಾಗಿ ನಡೆಯಿತು. 2002 ಹಾಗೂ 2003 ರಲ್ಲೂಉತ್ಸವ ಜರುಗಲಿಲ್ಲವಾದರೂ ನಂತರದ ವರ್ಷಗಳಲ್ಲಿ ಸರ್ಕಾರದ ಧೃಡ ಸಂಕಲ್ಪದ ಫಲವಾಗಿ ಉತ್ಸವ ನಿರಂತರವಾಗಿ ಪ್ರತಿ ವರ್ಷ ನವೆಂಬರ್ 3 ರಿಂದ 5 ರವರೆಗೆ ವರ್ಷದಿಂದ ವರ್ಷಕ್ಕೆ ಹೆಚ್ಚು ಹೆಚ್ಚು ಸಂಭ್ರಮದಿಂದ ಆಚರಿಸಲ್ಪಡುತ್ತಿದೆ. ಕಳೆದ ವರ್ಷದ ಹಂಪಿ ಉತ್ಸವದ ನೆನಪು ಜನರ ನೆನಪಿನಲ್ಲಿ ಅಳಿಯುವ ಮೊದಲೆ ಈ ವರ್ಷದ ಹಂಪಿ ಉತ್ಸವ ಮತ್ತೆ ಬಂದಿದೆ.

ಝಗ ಮಗಿಸುತ್ತಿದೆ ಹಂಪಿ
ಶ್ರೀಮಂತ ಕಲಾಪರಂಪರೆಯ ಬಯಲು ಪ್ರದರ್ಶನಾಲಯವೆಂದು ಪರಿಗಣಿಸಲಾಗಿರುವ ವಿಜಯ ನಗರ ಸಾಮ್ರಾಜ್ಯದ ವೈಭವಕ್ಕೆ ಸಾಕ್ಷಿಯಾಗಿರುವ ಹಂಪಿಯಲ್ಲಿ ಈ ಬಾರಿ ಕಲೆ ಹಾಗೂ ಸಾಂಸ್ಕೃತಿಕ ಸಾಮ್ರಾಜ್ಯವೇ ಮೇಳೈಸಲಿದೆ. ಈ ವರ್ಷದ ಉತ್ಸವವನ್ನು ನ ಭೂತೋ ನ ಭವಿಷ್ಯತಿ ಎಂಬಂತೆ ಆಚರಿಸಲು ಜಿಲ್ಲಾ ಉಸ್ತುವಾರಿ ಸಚಿವರ ಸಾರಥ್ಯದಲ್ಲಿ ಜಿಲ್ಲಾ ಆಡಳಿತ ಸಜ್ಜಾಗಿದೆ. ಜಿಲ್ಲಾ ಆಡಳಿತ, ಕನ್ನಡ ಮತ್ತು ಸಂಸ್ಕೃತಿ, ವಾರ್ತಾ, ಪ್ರವಾಸೋದ್ಯಮ, ಭಾರತೀಯ ಪುರಾತತ್ವ, ರಾಜ್ಯ ಪುರಾತತ್ವ ಇಲಾಖೆ, ಹಂಪಿ ಕನ್ನಡ ವಿಶ್ವವಿದ್ಯಾಲಯ ಹಾಗೂ ಸ್ಥಳೀಯ ಸಂಸ್ಥೆಗಳು ಕೈ ಜೋಡಿಸಿದ್ದು, ಉತ್ಸವ ಸ್ಮರಣಾರ್ಹವಾಗಲು ಶ್ರಮಿಸುತ್ತಿದೆ. ಹಂಪಿ ಉತ್ಸವದ ಕೆಲಸ ಕಾರ್ಯಗಳನ್ನು ನೋಡಿಕೊಳ್ಳುತ್ತಿರುವ ವಿವಿಧ ಇಲಾಖೆ ಹಾಗೂ ಸಂಸ್ಥೆಗಳು ಸ್ಥಳೀಯ ಗ್ರಾಮ ಪಂಚಾಯತಿ ತಮ್ಮ ತಮ್ಮ ಕಾರ್ಯಗಳಲ್ಲಿ ಮಗ್ನವಾಗಿವೆ. ಹಂಪಿಯಲ್ಲಿ ಉತ್ಸವಕ್ಕೆ ಬರುವವರಿಗೆ ನಾಗರೀಕ ಸೌಲಭ್ಯ ಕಲ್ಪಿಸಲು ಅಗತ್ಯ ರಸ್ತೆ ಅಗಲೀಕರಣ, ನೀರು ಪೂರೈಕೆ, ರಾತ್ರೀಯಿಡಿ ವಿದ್ಯುತ್ ಪೂರೈಕೆ ವ್ಯವಸ್ಥೆ ಮತ್ತು ಸ್ವಚ್ಚತಾ ಕಾರ್ಯಗಳು ಭರದಿಂದ ನಡೆದಿದ್ದು ಹಂಪಿ ಮದುವಣಗಿತ್ತಿಯಂತೆ ಸಿಂಗಾರಗೊಳ್ಳುತ್ತಿದೆ.

ಆನೆ, ಕುದುರೆಗಳ ಮೆರುಗು
ಹಂಪಿ ಉತ್ಸವಕ್ಕೆ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಆಗಮಿಸುವ ಮಾಧ್ಯಮ ಪ್ರತಿನಿಧಿಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ರಾಜ್ಯ ವಾರ್ತಾ ಇಲಾಖೆ ಹೊಸಪೇಟೆಯಲ್ಲಿ ಈಗಾಗಲೇ ತಾತ್ಕಾಲಿಕ ಕಛೇರಿಯನ್ನು ತೆರೆದು ವಿಶೇಷಾಧಿಕಾರಿ ಮತ್ತು ಸಿಬ್ಬಂದಿಯನ್ನು ನೇಮಿಸಿದೆ. ಈ ಸಲದ ಉತ್ಸವದ ಮಳಿಗೆಯಲ್ಲಿ ಕನ್ನಡ ಸಿನಿಮಾ -75 ವಸ್ತುಪ್ರದರ್ಶನ ಜನರ ಗಮನ ಸೆಳೆಯಲಿದೆ. ಉತ್ಸವದ ಮೆರವಣಗೆಯಲ್ಲಿ ಪಾಲ್ಗೊಳ್ಳಲು ಶಿವಮೊಗ್ಗ ಮತ್ತು ನಾಗರಹೊಳೆಯಿಂದ ಆಗಮಿಸುತ್ತಿರುವ 9 ಆನೆಗಳು ಹಾಗೂ 130 ಕುದುರೆಗಳು ಉತ್ಸವದ ಮೆರುಗನ್ನು ಇನ್ನಷ್ಟು ಹೆಚ್ಚಿಸಲಿವೆ. ಶ್ರೀಕೃಷ್ಣ ದೇವರಾಯನ ಕಾಲದ ನವರಾತ್ರಿಯ ಸಡಗರವನ್ನು ನೆನಪಿಸುವ ಪ್ರಯತ್ನವಾಗಿ ಈ ಬಾರಿ ವಿಜಯನಗರದ ಸೈನಿಕರ ವೇಶದಲ್ಲಿ 100 ಸೈನಿಕ ವೇಷಧಾರಿಗಳು ಗಮನ ಸೆಳೆಯಲಿದ್ದಾರೆ ಎನ್ನುತ್ತಾರೆ ಜಿಲ್ಲಾಧಿಕಾರಿ ಬಿ. ಶಿವಪ್ಪ.

(ದಟ್ಸ್ ಕನ್ನಡ ವಾರ್ತೆ)

ಹಂಪಿ ಉತ್ಸವ ನಿಮಿತ್ತ ವಿಶೇಷ ಪ್ರವಾಸ
ಹಂಪಿ ಸ್ಮಾರಕಗಳನ್ನು ಉಳಿಸಲು ಚಿ.ಮೂ ಕರೆ
ಹಂಪಿಯ ಪುರಂದರದಾಸರ ಮಂಟಪ ಅಪವಿತ್ರ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X