ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂತಾರಾಷ್ಟ್ರೀಯ ಕ್ರಿಕೆಟ್ಗೆ 'ಜಂಬೋ' ವಿದಾಯ

By Staff
|
Google Oneindia Kannada News

'Jambo' Anil Kumble announces retirementನವದೆಹಲಿ, ನ. 02 : 'ಜಂಬೋ' ಎಂದೇ ಖ್ಯಾತರಾಗಿದ್ದ ಲೆಗ್ ಸ್ಪಿನ್ ಮಾಂತ್ರಿಕ ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ಅನಿಲ್ ಕುಂಬ್ಳೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. 1999ರಲ್ಲಿ ಪಾಕಿಸ್ತಾನದ ವಿರುದ್ಧ ಇನ್ನಿಂಗ್ಸೊಂದರಲ್ಲಿ 10 ವಿಕೆಟ್ ಕಬಳಿಸಿ ಇತಿಹಾಸ ನಿರ್ಮಿಸಿದ್ದ ಫಿರೋಜ್‌ಷಾ ಕೋಟ್ಲಾ ಮೈದಾನದಲ್ಲಿಯೇ ಅಂತಿಮ ಪಂದ್ಯ ಆಡುತ್ತಿದ್ದಾರೆ. ಕ್ರಿಕೆಟ್ ಪ್ರೇಮಿಗಳಿಗೆ ಹರ್ಷದ ಉತ್ತುಂಗ ಉಣಬಡಿಸಿದ ಮೈದಾನದಲ್ಲಿಯೇ ನಿರಾಸೆಯ ಮಡುವಿನಲ್ಲಿ ಮುಳುಗಿಸಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ 'ಗಾವಸ್ಕರ್-ಬಾರ್ಡರ್' ಸರಣಿಯಲ್ಲಿ ಇನ್ನೊಂದು ಪಂದ್ಯ ಉಳಿದಿರುವಾಗಲೇ ಕುಂಬ್ಳೆ ನಿವೃತ್ತಿ ಘೋಷಿಸುತ್ತಿರುವುದು ಅನೇಕರ ಹುಬ್ಬು ಏರುವಂತೆ ಮಾಡಿದೆ ಮತ್ತು ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ನವೆಂಬರ್ 6ರಿಂದ ನಾಗಪುರದಲ್ಲಿ ನಡೆಯುತ್ತಿರುವ ನಾಲ್ಕನೇ ಮತ್ತು ಕೊನೆಯ ಟೆಸ್ಟ್ ಪಂದ್ಯದಲ್ಲಿ ಏಕದಿನ ಪಂದ್ಯದ ನಾಯಕ ಮಹೇಂದ್ರ ಸಿಂಗ್ ಧೋನಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.

ಕೋಟ್ಲಾ ಪಂದ್ಯದಲ್ಲಿಯೇ ಕಿರುಬೆರಳಿಗೆ ಗಾಯ ಮಾಡಿಕೊಂಡಿರುವ ಅನಿಲ್ ಕುಂಬ್ಳೆ ನಿವೃತ್ತರಾಗುತ್ತಿರುವುದು ವೈಯಕ್ತಿಕ ನಿರ್ಧಾರವೋ ಅಥವಾ ಕೆಲ ಮಾಜಿ ಮತ್ತು ಹಾಲಿ ಆಯ್ಕೆಗಾರರ ಒತ್ತಡಕ್ಕೆ ಮಣಿದು ಸೌರವ್ ಗಂಗೂಲಿ ತುಳಿದ ಹಾದಿಯನ್ನು ತುಳಿಯುತ್ತಿದ್ದಾರೋ ಎನ್ನುವುದು ಸದ್ಯಕ್ಕೆ ಯಕ್ಷ ಪ್ರಶ್ನೆ. ಯಾಕೆಂದರೆ, ಸೌರವ್ ನಿವೃತ್ತಿ ಘೋಷಣೆಯ ನಂತರ ಕುಂಬ್ಳೆ ಹೆಸರೂ ಪ್ರಸ್ತಾಪವಾದಾಗ ತಮ್ಮಲ್ಲಿ ಇನ್ನೂ ಕ್ರಿಕೆಟ್ ಉಳಿದಿದೆ, ನಿವೃತ್ತಿ ಘೋಷಿಸುವ ಪ್ರಶ್ನೆಯೇ ಇಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದರು.

ಕಳೆದ 18 ವರ್ಷಗಳಿಂದ ಭಾರತಕ್ಕಾಗಿ ಅತ್ಯುತ್ತಮ ಸೇವೆ ಸಲ್ಲಿಸಿದ್ದರೂ ಫಾರ್ಮ್ ಕಳೆದುಕೊಂಡಿರುವ ಕುಂಬ್ಳೆ ಕ್ರಿಕೆಟ್ ರಂಗದಿಂದ ಹಿಂದೆ ಸರಿಯಬೇಕು ಎಂದು ಮಾಜಿ ಆಯ್ಕೆಗಾರ ದಿಲೀಪ್ ವೆಂಗಸರ್ಕರ್ ಶನಿವಾರ ಹೇಳಿದ್ದರು. ತಮ್ಮ ಕ್ರಿಕೆಟ್ ಜೀವನದಲ್ಲಿ ಕ್ರಿಟಿಕ್ ಗಳ ಬಗ್ಗೆ ತಲೆಕೆಡಿಸಿಕೊಳ್ಳದಿದ್ದ ಕುಂಬ್ಳೆ ತಮ್ಮ ಸಾಧನೆಯನ್ನು ಮುಂದುವರಿಸಿದ್ದರು.

ಸ್ಪಿನ್ ಮಾಂತ್ರಿಕ ಕುಂಬ್ಳೆ
ಗೂಗ್ಲಿ, ಲೆಗ್ ಬ್ರೆಕ್ ಮತ್ತು ಫ್ಲಿಪ್ಪರ್‌ಗಳಿಂದ ಎದುರಾಳಿ ಬ್ಯಾಟ್ಸ್‌ಮನ್‌ಗಳಿಗೆ ಸಿಂಹಸ್ವಪ್ನವಾಗಿದ್ದ ಕುಂಬ್ಳೆ 132 ಟೆಸ್ಟ್ ಪಂದ್ಯಗಳಲ್ಲಿ 619 ವಿಕೆಟ್ ಕಬಳಿಸಿ ಆರುನೂರಕ್ಕೂ ಹೆಚ್ಚು ವಿಕೆಟ್ ಗಳಿಸಿದ ಮೂರನೇ ಆಟಗಾರರಾಗಿದ್ದಾರೆ. ಮುತ್ತಯ್ಯ ಮುರಳಿಧರನ್ ಮತ್ತು ಶೇನ್ ವಾರ್ನ್ ಈ ಸಾಧನೆ ಮಾಡಿದ ಇನ್ನಿಬ್ಬರು. 271 ಏಕದಿನ ಪಂದ್ಯಗಳಲ್ಲಿ 337 ವಿಕೆಟ್ ಬಗಲಿಗಿಳಿಸಿದ್ದಾರೆ. ಭಾರತದ ಪರ ಸಚಿನ್ ಬಿಟ್ಟರೆ ಅತಿ ಹೆಚ್ಚು ಟೆಸ್ಟ್ ಕ್ರಿಕೆಟ್ ಪಂದ್ಯಗಳನ್ನಾಡಿದ ಕೀರ್ತಿ ಅನಿಲ್ ಗೆ ಸಲ್ಲುತ್ತದೆ.

1994ರಲ್ಲಿ ಕೋಟ್ಲಾ ಅಂಕಣದಲ್ಲಿ ಮಾಡಿದ ಸಾಧನೆಯಂತೂ ಮರೆಯುವ ಹಾಗೇ ಇಲ್ಲ. ಪಾಕಿಸ್ತಾನದ ವಿರುದ್ಧ 74 ರನ್ ನೀಡಿ ಎಲ್ಲ 10 ವಿಕೆಟ್‌ಗಳನ್ನು ಗಳಿಸಿದ್ದರು. ಕುಂಬ್ಳೆ ಮೊದಲ ಟೆಸ್ಟ್ ಪಂದ್ಯವಾಡಿದ್ದು 1990ರಲ್ಲಿ ಇಂಗ್ಲೆಂಡ್ ವಿರುದ್ಧ. ಮೊದಲ ಏಕದಿನ ಪಂದ್ಯವಾಡಿದ್ದು ಶ್ರೀಲಂಕಾ ವಿರುದ್ಧ 1990ರಲ್ಲಿ. ಒಟ್ಟು 35 ಬಾರಿ ಇನ್ನಿಂಗ್ಸ್ ನಲ್ಲಿ 5 ವಿಕೆಟ್ ಪಡೆದಿದ್ದರು, 8 ಬಾರಿ ಪಂದ್ಯದಲ್ಲಿ 10 ವಿಕೆಟ್ ಪಡೆದಿದ್ದಾರೆ. ಬೌಲಿಂಗ್‌ನಲ್ಲೇ ಹೆಚ್ಚು ಮಿಂಚಿರುವ 'ಜಂಬೋ' 2007ರಲ್ಲಿ ಇಂಗ್ಲೆಂಡ್ ವಿರುದ್ಧ ಸೆಂಚುರಿ (110 ನಾಟೌಟ್) ಕೂಡ ಬಾರಿಸಿದ್ದಾರೆ.

ಯಾವುದೇ ವಿವಾದಗಳಿಗೆ ಆಹಾರವಾಗದ ಸಂಭಾವಿತ ಆಟಗಾರ ಕುಂಬ್ಳೆ 38ರ ಹರೆಯದಲ್ಲಿ ಯಾವುದೇ ವಿವಾದಕ್ಕೆ ಎಡೆಮಾಡಿಕೊಡದೇ ವಿದಾಯ ಹೇಳುತ್ತಿದ್ದಾರೆ. ಕಿರಿಯ ಆಟಗಾರರಿಗೆ ತೆರವು ಮಾಡಿಕೊಟ್ಟಿದ್ದಾರೆ. ಇಂದಿನ ಆಟದ ನಂತರ ಭಾರತದ ಆಟಗಾರರೆಲ್ಲ ಕುಂಬ್ಳೆಯನ್ನು ಹೆಗಲ ಮೇಲೆ ಕುಳ್ಳಿರಿಸಿ ಮೈದಾನದಲ್ಲಿ ಮೆರವಣಿಗೆ ಮಾಡಿ ಶುಭ ಹಾರೈಸಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X