ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯೋತ್ಸವ ಕೊಡುಗೆ, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ

By Staff
|
Google Oneindia Kannada News

Kannada language gets classical statusನವದೆಹಲಿ, ಅ. 31 : ಕೊನೆಗೂ ಕನ್ನಡಿಗರ ಸುದೀರ್ಘ ಹೋರಾಟಕ್ಕೆ ತಕ್ಕ ಪ್ರತಿಫಲ ದೊರೆತಿದೆ. ಕನ್ನಡ ಭಾಷೆಗೆ ಶಾಸ್ತ್ರೀಯ ಭಾಷಾ ಸ್ಥಾನಮಾನ ಗೌರವ ದೊರೆಯಬೇಕು ಎನ್ನುವ ದಶಕಗಳ ಕನಸು ಇಂದು ನನಸಾಗಿದೆ. ಐದು ಕೋಟಿ ಕನ್ನಡಿಗರ ಒಕ್ಕೊರಲ ಬೇಡಿಕೆಗೆ ಮಣಿದಿರುವ ಕೇಂದ್ರ ಸರ್ಕಾರ ಅಂತಿಮವಾಗಿ ಕನ್ನಡ ಮತ್ತು ತೆಲುಗು ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಗೌರವ ನೀಡಿದೆ.

ವಿಜಯೋತ್ಸವ : ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಸ್ಥಾನಮಾನ ದೊರೆತಿರುವ ಹಿನ್ನೆಲೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು 'ವಿಜಯೋತ್ಸವ'ವನ್ನಾಗಿ ಆಚರಿಸಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕರೆ ನೀಡಿದರು. ನಾಡಿನಾದ್ಯಂತ ತಳಿರು-ತೋರಣ ದೀಪಾಂಲಕಾರಗಳ ಮೂಲಕ ಈ ಸಂಭ್ರಮವನ್ನು ಆಚರಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ದಟ್ಸ್ ಕನ್ನಡ ಪ್ರತಿನಿಧಿಗೆ ಮುಖ್ಯಮಂತ್ರಿ ತಿಳಿಸಿದರು. ಇದು ಸಮಸ್ತ ಕನ್ನಡಿಗರ ಹೋರಾಟಕ್ಕೆ ಸಂದ ಜಯ ಎಂದು ಅವರು ಬಣ್ಣಿಸಿದರು.

ಕನ್ನಡಿಗರು ಕನ್ನಡ ರಾಜ್ಯೋತ್ಸವ ಆಚರಿಸುತ್ತಿರುವ ಶುಭ ಸಂದರ್ಭದಲ್ಲಿ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ನೀಡಲು ನಿರ್ಧರಿಸಿದೆ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕಿ ಅಂಬಿಕಾ ಸೋನಿ ತಿಳಿಸಿದ್ದಾರೆ. ಸಾಹಿತಿಗಳು, ಚಿಂತಕರು, ಕನ್ನಡ ಪರ ಸಂಘಟನೆಗಳು ಹಾಗೂ ವಿವಿಧ ಸರ್ಕಾರಗಳು ನಡೆಸಿದ ನಿರಂತರ ಹೋರಾಟದ ಫಲ ಇಂದು ಕನ್ನಡ ಭಾಷೆಗೆ ಐತಿಹಾಸಿಕ ಗೌರವ ದೊರೆತಂತಾಗಿದೆ.

ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಗೌರವ ವಿಷಯ ಕೇಂದ್ರ ಸರ್ಕಾರ ಪ್ರಕಟಿಸುತ್ತಿದ್ದಂತೆಯೇ ಕರ್ನಾಟಕದಾದ್ಯಂತ ಸಂಭ್ರಮದ ವಾತಾವರಣ ವ್ಯಕ್ತವಾಗತೊಡಗಿದೆ. 53ನೇ ರಾಜ್ಯೋತ್ಸವ ಆಚರಿಸುತ್ತಿರುವ ಸಂತಸ ಗಳಿಗೆಯಲ್ಲಿ ಕನ್ನಡ ಭಾಷೆಗೆ ದೊರೆತಿರುವ ಶ್ರೇಷ್ಠ ಮನ್ನಣೆಗೆ ಭವ್ಯ ಸ್ವಾಗತ ದೊರೆತಿದೆ. ಕನ್ನಡ ಭಾಷೆಗೆ ಶಾಸ್ತ್ರೀಯ ಭಾಷಾ ಸ್ಥಾನಮಾನಕ್ಕೆ ದಶಕಗಳ ಕಾಲ ಅನೇಕ ಅಡ್ಡಿ ಆತಂಕಗಳು ಎದುರಾಗಿದ್ದವು. ಜೊತೆಗೆ ಪಕ್ಕದ ತಮಿಳುನಾಡಿನ ಕೆಲ ವ್ಯಕ್ತಿಗಳಿಂದ ಕೆಲ ಕಾಲ ಕನ್ನಡಕ್ಕೆ ಈ ಗೌರವ ದೊರೆಯುವಲ್ಲಿ ಹಿನ್ನೆಡೆಯುಂಟಾಗಿತ್ತು.

ಕಾಂಗ್ರೆಸ್ ಪ್ರಯತ್ನಕ್ಕೆ ಸಂದ ಫಲ : ಖರ್ಗೆ

ಕನ್ನಡಗರ ಹೋರಾಟಕ್ಕೆ ಸ್ಪಂದಿಸಿರುವ ಕೇಂದ್ರ ಸರ್ಕಾರ ಕನ್ನಡ ಭಾಷೆಗೆ ಶಾಸ್ತ್ರೀಯ ಭಾಷಾ ಸ್ಥಾನಮಾನ ನೀಡಿರುವುದು ಸಂತಸ ಸಂಗತಿ. ಕಾಂಗ್ರೆಸ್ ನೇತೃತ್ವದ ನಿಯೋಗವು ಪ್ರಧಾನಮಂತ್ರಿ ಮನಮೋಹನ್ ಸಿಂಗ್, ಸೋನಿಯಾ ಗಾಂಧಿ, ಜೈಪಾಲ ರೆಡ್ಡಿ ಹಾಗೂ ಅಂಬಿಕಾ ಸೋನಿ ಅವರಿಗೆ ಸ್ಪಷ್ಟವಾಗಿ ಮನವರಿಕೆ ಮಾಡಿಕೊಡಲಾಗಿತ್ತು. ಆಗ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನದ ಗೌರವವನ್ನು ಶೀಘ್ರದಲ್ಲಿ ನೀಡುತ್ತೇವೆ ಎಂದು ಭರವೆಸೆ ನೀಡಿದ್ದರು ಎಂದು ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಸಂತಸ ಹಂಚಿಕೊಂಡರು.

ಕನ್ನಡಿಗರ ವಿಜಯ : ಮುಖ್ಯಮಂತ್ರಿ ಚಂದ್ರು

ಕನ್ನಡ ಭಾಷೆಗೆ ಶಾಸ್ತ್ರೀಯ ಭಾಷಾ ಸ್ಥಾನಮಾನ ದೊರೆತಿರುವುದು ಬಿಜೆಪಿ ಸರ್ಕಾರದ ಜಯ, ಕನ್ನಡಿಗರ ವಿಜಯ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ದಿಟ್ಟ ಹೋರಾಟದ ನಿಲುವಿನಿಂದಾಗಿ ರಾಜ್ಯೋತ್ಸವದ ಶುಭ ಗಳಿಗೆಯಲ್ಲಿ ಕನ್ನಡಿಗರು ಬಹುದಿನದ ಕನಸು ಐತಿಹಾಸಿಕ ಗೌರವಕ್ಕೆ ಪಾತ್ರವಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X