ಮಾಲೇಗಾಂವ್ ಸ್ಫೋಟದಲ್ಲಿ ಹಿಂದು ಸಾಧ್ವಿ
ಮಂಬೈ, ಅ. 24 : ದೇಶದಲ್ಲಿ ಬಾಂಬ್ ಸ್ಫೋಟಗಳು ನಡೆದರೆ ತಕ್ಷಣ ನನಪಿಗೆ ಬರುವುದು ಮುಸ್ಲಿಂ ಭಯೋತ್ಪಾದನಾ ಸಂಘಟನೆಗಳ ಹೆಸರುಗಳು. ಆದರೆ ಈಗ ಕೃತ್ಯ ಎಸಗಿರುವರನ್ನು ಜರಿಯುವ ಮುಂಚೆ ಕೆಲ ಕಾಲ ಯೋಚಿಸಬೇಕಾದ ಅಗತ್ಯವಿದೆ. ಬಾಂಬ್ ಸ್ಫೋಟದಂತಹ ದೇಶ ದ್ರೋಹಿ ಕೃತ್ಯದಲ್ಲಿ ಹಿಂದುಪರ ಸಂಘಟನೆಗಳ ಕೈವಾಡವಿರುವುದನ್ನು ಉಹಿಸಿಕೊಳ್ಳುವುದಕ್ಕೂ ಸಾಧ್ಯವಾಗುವುದಿಲ್ಲ. ಆದರೆ ಬಹುಸಂಖ್ಯಾತ ಹಿಂದುಗಳ ವಿಶ್ವಾಸಕ್ಕೆ ಕೊಡಲಿ ಏಟು ನೀಡುವಂತಹ ಗಂಭೀರ ಪ್ರಕರಣವನ್ನು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ ಬಯಲಿಗೆಳೆದಿದೆ.
ಕಳೆದ ತಿಂಗಳು ಮಾಲೇಗಾಂವ್ ನಡೆದ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶ ಪ್ರಗ್ಯಾ ಸಿಂಗ್ ಠಾಕೂರ್ ಎನ್ನುವ ಸಾಧ್ವಿ ಸೇರಿ ಮೂವರು ಹಿಂದುಗಳನ್ನು ಇಂದು ಮಹಾರಾಷ್ಟ್ರ ಭಯೋತ್ಪದನಾ ನಿಗ್ರಹ ಪಡೆ(ಎಟಿಎಸ್) ಬಂಧಿಸಿದೆ. ಆರೋಪಿಗಳ ವಿರುದ್ಧ ಸಾಕಷ್ಟು ಸಾಕ್ಷ್ಯಾಧಾರಗಳು ದೊರೆತಿದ್ದು, ಸ್ಫೋಟದಲ್ಲಿ ಕೈವಾಡವಿರುವುದು ತನಿಖೆಯಿಂದ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಸಾಧ್ವಿಯನ್ನು ಬಂಧಿಸಲಾಗಿದೆ ಎಂದು ನಿಗ್ರಹ ಪಡೆಯ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಬಂಧಿತರನ್ನು ಇಂದು ನಾಸಿಕ್ ನ್ಯಾಯಾಲಯಕ್ಕೆ ಹಾಜರುಪಡಿಸಿ ವಿಚಾರಣೆ ನಡೆಸಲಾಯಿತು.
ಪ್ರಗ್ಯಾ ಸಿಂಗ್ ಠಾಕೂರ್ ತಂದೆ ಚಂದ್ರಪಾಲ್ ಸಿಂಗ್ ಘಟನೆ ತಿಳಿದು ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ. ಪ್ರಗ್ಯಾ ಎಂದೂ ಅಂಥ ಕೃತ್ಯಕ್ಕೆ ಇಳಿಯುವವಳಲ್ಲ. ಮೃದು ಸ್ವಭಾವದ ಅವಳು ಯಾರೊಂದಿಗೂ ಹೆಚ್ಚಾಗಿ ಮಾತನಾಡುವವಲ್ಲ. ಇಂಥ ಹುಡುಗಿ ಇಂದು ದೇಶಕ್ಕೆ ದ್ರೋಹ ಎಸಗುವಂಥ ಕೃತ್ಯದಲ್ಲಿ ಪಾಲ್ಗೊಂಡಿದ್ದಾಳೆ ಎಂದರೆ ನಂಬಲು ಅಸಾಧ್ಯ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ನನಗೆ ಗೊತ್ತಿದೆ. ನನ್ನ ಮಗಳು ಎಂದಿಗೂ ಇಂಥ ಕೆಲಸ ಮಾಡುವಳಲ್ಲ. ಈ ವಿಷಯದ ಬಗ್ಗೆ ಸಮಗ್ರ ತನಿಖೆ ಮಾಡಬೇಕು ಎಂದು ಸರ್ಕಾರವನ್ನು ಅವರು ಒತ್ತಾಯಿಸಿದ್ದಾರೆ.
ಮಾಲೇಗಾಂವ್ ಸ್ಫೋಟದಲ್ಲಿ ಹಿಂದುಪರ ಸಂಘಟನೆಗಳು ಭಾಗಿಯಾಗಿರುವ ಪ್ರಕರಣ ರಾಜಕೀಯ ಪಕ್ಷಗಳಿಗೆ ರಾಜಕೀಯ ದಾಳವಾಗಿ ಪರಿಣಿಮಿಸಿದೆ. ಭಾರತೀಯ ಜನತಾ ಪಕ್ಷಕ್ಕೆ ವಿಷಯ ಭಾರಿ ಪ್ರತಿಷ್ಠೆಯ ಪ್ರಶ್ನೆಯಾಗಿದ್ದು, ಸ್ಫೋಟದಲ್ಲಿ ಹಿಂದುಪರ ಸಂಘಟನೆಗಳು ಭಾಗಿಯಾಗಿರುವುದನ್ನು ಸ್ಪಷ್ಟವಾಗಿ ತಳ್ಳಿ ಹಾಕಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್ ಪಕ್ಷ ಪ್ರಕರಣವನ್ನು ಸಮಗ್ರವಾಗಿ ತನಿಖೆ ಮಾಡಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದೆ.
ಗುರುವಾರ ಸಂಸತ್ತಿನಲ್ಲಿ ಸಿಪಿಐ(ಎಂ) ನಾಯಕಿ ಬೃಂದಾ ಕಾರಟ್ ಕೂಡಾ ಮಲೇಗಾಂವ್ ಹಾಗೂ ಗುಜರಾತ ಸ್ಫೋಟಗಳಲ್ಲಿ ಹಿಂದುಪರ ಸಂಘಟನೆಗಳ ಕೈವಾಡವಿರುವುದು ಸ್ಪಷ್ಟವಾಗಿದೆ. ಆದ್ದರಿಂದ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದ್ದರು. ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣದಲ್ಲಿ 5 ಮಂದಿ ಮೃತಪಟ್ಟಿದ್ದರು. 25ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
(ದಟ್ಸ್ ಕನ್ನಡ ವಾರ್ತೆ)
ಹಿಂದು ಜಾಗರಣ ಮಂಚ್ ನಿಷೇಧಿಸಿ: ಬೃಂದಾ


Click it and Unblock the Notifications
