ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿಗೆ ಕವಿದ ಮಧ್ಯಾನ್ಹದ ಕತ್ತಲು

By Staff
|
Google Oneindia Kannada News

Darness @ 3 P.Mಬೆಂಗಳೂರು, ಅ. 24 : ತಮಿಳಿನಾಡಿನಲ್ಲಿ ಮುಖ್ಯವಾಗಿ ಚೆನ್ನೈನಲ್ಲಿ ಕಳೆದ ಒಂದು ವಾರದಿಂದ ಮಳೆ ಹಿಡಿದುಕೊಂಡು ಚಚ್ಚುತ್ತಿದೆ. ಮಹಾನಗರದಲ್ಲಿ ಜನಜೀವನ ಅಸ್ತವ್ಯಸ್ತವಾಗಿದ್ದು ಜನ ಪರದಾಡುತ್ತಿದ್ದಾರೆ. ಅದರ ಪ್ರಭಾವವೋ ಏನೋ, ಕರ್ನಾಟಕದಲ್ಲೂ ಮಳೆ ಮಾರುತ ಜೋರಾಗಿದೆ. ರಾಜ್ಯದ ನಾನಾ ಭಾಗಗಳಲ್ಲಿ ಮಳೆ ಸುರಿಯುತ್ತಿರುವ ಸುದ್ದಿಗಳು ಬರುತ್ತಿವೆ. ಮಣಿಪಾಲ, ಉಡುಪಿಯಲ್ಲಿ ಸಖತ್ ಮಳೆ ಎಂದು ನಮ್ಮ ಓದುಗರೊಬ್ಬರು ದೂರವಾಣಿ ಮಾಹಿತಿ ಕೊಟ್ಟಿದ್ದಾರೆ.

ನಾಳೆ ಅ. 25 ರಿಂದ ದೀರ್ಘ ವಾರಾಂತ್ಯದ ರಜೆಗಳು ಪ್ರಾರಂಭವಾಗಲಿವೆ. ಸೋಮವಾರ ಚತುರ್ದಶಿ ಮಂಗಳವಾರ ಅಮಾವಾಸ್ಯೆ ಮತ್ತು ಬುಧವಾರ ಬಲಿಪಾಡ್ಯಮಿ ನಿಮಿತ್ತ ಶಾಲೆ, ಕಾಲೇಜು, ಖಾಸಗಿ, ಸರಕಾರಿ ಕಚೇರಿಗಳಿಗೆ ರಜೆ ಘೋಷಿಸಲಾಗಿದ್ದು ಅನೇಕ ಕುಟುಂಬಗಳು ಪ್ರವಾಸ ಕಾರ್ಯಕ್ರಮ ಹಾಕಿಕೊಂಡಿವೆ. ಪ್ರತೀಕೂಲ ಹವಾಮಾನದಿಂದಾಗಿ ಅನೇಕರ ಪ್ರವಾಸ ಕಾರ್ಯಕ್ರಮ ರದ್ದಾದರೆ ಆಶ್ಚರ್ಯವಿಲ್ಲ. ಕಾಡು ಮೇಡು, ಚಾರಣ, ಸಾಹಸ ಪ್ರವಾಸ ಕೈಕೊಳ್ಳುವವರಿಗೆ ಮಳೆಗಾಲದ ಈ ವಾರ ಅಷ್ಟೇನೂ ಅನುಕೂಲಕರವಾಗಿಲ್ಲ.

ಬೆಂಗಳೂರಿನಲ್ಲಿ ಒಂದು ವಾರದಿಂದ ಜಿಟಿಜಿಟಿ ಮಳೆ ಕಚ್ಚಿಕೊಂಡಿದೆ. ಮಣ್ಣು ರಸ್ತೆಗಳಲ್ಲಿ ಓಡಾಡುವರಿಗೆ, ವಾಹನಚಾಲಕರಿಗೆ, ರಸ್ತೆಬದಿ ವ್ಯಾಪಾರ ನಂಬಿ ಬದುಕುವವರಿಗೆ ಬಲೆ ತೊಂದರೆ. ಆಟೋರಿಕ್ಷಾ ನಂಬಿಕೊಂಡು ಹೊರಗೆ ಹೊರಟರೆ ಡಬ್ಬಲ್ ತ್ರಿಬ್ಬಲ್ ಮೀಟರ್ ಹಣ ಕೀಳುತ್ತಾರೆ. ಎಲ್ಲೂ ಹೋಗುವುದು ಬೇಡ ಎಂದು ನಿರ್ಧರಿಸಿ ಮನೆಯಲ್ಲೇ ಇರಬಯಯುವವರಿಗೆ ಒಳ್ಳೆಕಾಲ. ಇವತ್ತು ಅಕ್ಟೋಬರ್ 24ರ ಮಧ್ಯಾನ್ಹವಂತೂ ಬೆಂಗಳೂರಿನಲ್ಲಿ ಮಟಮಟ ಮಧ್ಯಾನ್ಹದ ಹೊತ್ತು 3 ಗಂಟೆಗೆ ಕಗ್ಗತ್ತಲು ಆವರಿಸಿದೆ.

ಹವಾಮಾನ ಇಲಾಖೆಯ ಪ್ರಕಾರ ಇಂದು ಬೆಳಗಿನ ಜಾವದಿಂದಲೇ ಮಳೆ ಬರುವ ಸಂಭವ ಹೆಚ್ಚಾಗಿದ್ದು, ಮೋಡ ಕವಿದ ವಾತಾವರಣ ಇರುವುದು. ಮಧ್ಯಾಹ್ನದ ನಂತರ 4 ರಿಂದ 8 ಮೀಮೀ ವರೆಗೆ ಮಳೆ ಬೀಳುವ ಸಾಧ್ಯತೆಗಳಿವೆ. ಸಂಜೆ ಕೂಡಾ ವರುಣನ ಆರ್ಭಟ ಹೆಚ್ಚಾಗಲಿದ್ದು 7 ರಿಂದ 12 ಮೀಮೀ ವರೆಗೆ ಮಳೆ ಬೀಳಲಿದೆ ಎಂದು ಇಲಾಖೆ ತಿಳಿಸಿದೆ. ಅ. 25 ರಂದು ಮಳೆ ಕಡಿಮೆ ಇದ್ದರೂ ಮೋಡ ಮುಸುಕಿದ ವಾತಾವರಣ ಮುಂದುವರೆಯಲಿದೆ. ಜೊತೆಗೆ ಶನಿವಾರ ಸಂಜೆಯ ನಂತರ 2 ರಿಂದ 5 ಮೀಮಿ ಮಳೆ ಬೀಳುವ ಸಂಭವವಿದೆ ಎಂದು ಹವಾಮಾನ ಇಲಾಖೆ ಮೂಲಗಳು ತಿಳಿಸಿವೆ. ಆಕಾಶ ನೋಡುತ್ತಾ ಕುಳಿತರೆ ಇಲಾಖೆ ಹೇಳುವ ಭವಿಷ್ಯ ನಿಜವಾಗುವ ಎಲ್ಲ ಲಕ್ಷಣಗಳೂ ಕಂಡುಬರುತ್ತಿವೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X