ಭಾರತಕ್ಕೆ 320 ರನ್ ದಾಖಲೆ ಜಯ
ಮೊಹಾಲಿ, ಅ. 21 : ನಿರೀಕ್ಷೆಯಂತೆ ಭಾರತ ಎರಡನೇ ಟೆಸ್ಟ್ ನಲ್ಲಿ ಆಸೀಸ್ ವಿರುದ್ಧ ಭರ್ಜರಿ ಜಯ ಗಳಿಸಿದೆ. ಎರಡನೇ ಟೆಸ್ಟ್ ನ ವಿಶೇಷತೆ ಎಂದರೆ ಪಂಟರ್ ಪಡೆ ಭಾರತ ತಂಡದ ಹಾಗೆ ಬ್ಯಾಟು ಮಾಡಿತು. ಭಾರತ ಬೌಲರ್ ಹಾಗೂ ಬ್ಯಾಟ್ಸ್ ಮನ್ ಗಳು ಆಸ್ಟ್ರೇಲಿಯಾ ಆಟಗಾರರ ಶೈಲಿಯಲ್ಲಿ ಆಡಿದ್ದರಿಂದ ಇಂದಿನ ಪಂದ್ಯದಲ್ಲಿ ಭಾರತದ ತಂಡಕ್ಕೆ ಅರ್ಹ ಜಯ ಗಳಿಸುವಲ್ಲಿ ಯಶಸ್ವಿಯಾಯಿತು.
ಅತಿಥೇಯ ಆಸೀಸ್ ನ ಪಂಟರ್ ಪಡೆಗೆ ಧೋನಿ ತಂಡ ನೀರು ಕುಡಿಸಿದೆ. ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ ಅವರ ಮನಮೋಹಕ ಬ್ಯಾಟಿಂಗ್ ಹಾಗೂ ಅನಿಲ್ ಕುಂಬ್ಳೆ ಉತ್ತರಾಧಿಕಾರಿ ಎಂದು ನಿರೂಪಿಸಿದ ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ, ವೇಗಿ ಇಶಾಂತ್ ಶರ್ಮಾ ಹಾಗೂ ಸ್ಪಿನ್ ಮೋಡಿಗಾರ ಭಜ್ಜಿಯ ಬೌಲಿಂಗ್ ಕೈಚಳಕದಿಂದ ಎರಡನೇ ಟೆಸ್ಟ್ ನಲ್ಲಿ ಪ್ರವಾಸಿ ಆಸ್ಟ್ರೇಲಿಯಾ ತಂಡವನ್ನು 320 ರನ್ ಬೃಹತ್ ಅಂತರ ಸೋಲಿಸುವ ಮೂಲಕ ಭಾರತ ತಂಡ ಗೆಲುವಿನ ನಗೆ ಬೀರಿತು. ಈ ಮೂಲಕ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯ ಮೂರು ಪಂದ್ಯಗಳಲ್ಲಿ ಭಾರತ 1-0 ಮುನ್ನಡೆಯನ್ನು ಸಾಧಿಸಿ ಸರಣಿಯಲ್ಲಿ ಮೇಲುಗೈ ಪಡೆಯಿತು.
ಭಾರತ ಪ್ರಥಮ ಇನ್ನಿಂಗ್ಸ್ ನಲ್ಲಿ 469 ರನ್ ಗಳ ಗೌರವ ಮೊತ್ತ ದಾಖಲಿಸಿತ್ತು. ನಂತರ ಬ್ಯಾಟಿಂಗ್ ಮಾಡಿದ ಆಸೀಸ್ ಪಡೆ 268 ರನ್ ಗಳ ಸಾಧಾರಣ ಮೊತ್ತ ಕೂಡಿಸುವ ಮೂಲಕ ಹಿನ್ನೆಡೆ ಅನುಭವಿಸಿತ್ತು. ಎರಡನೇ ಇನ್ನಿಂಗ್ಸ್ ನಲ್ಲಿ ದೆಹಲಿ ನವಾಬ್ ವಿರೇಂದ್ರ ಸೆಹ್ವಾಗ್ ಹಾಗೂ ಗೌತಮ್ ಗಂಭೀರ ಅಬ್ಬರಕ್ಕೆ ಆಸೀಸ್ ಬೌಲರ್ ಗಳು ತತ್ತರಿಸಿ ಹೋದರು. ವೀರೇಂದ್ರ ಸೆಹ್ವಾಗ್ ಶತಕ ಗಡಿಯಂಚಿನಲ್ಲಿ ವಿಕೆಟ್ ಒಪ್ಪಿಸಿದರೆ, ಗೌತಮ್ ಗಂಭೀರ ಗಂಭೀರವಾಗಿ ಶತಕ ದಾಖಲಿಸಿ ಭಾರತ ತಂಡಕ್ಕೆ ಸುರಕ್ಷಿತ ನೆಲೆಯನ್ನು ಒದಗಿಸಿ ಫೆವಿಲಿಯನ್ ಸೇರಿದ್ದರು. ಎರಡನೇ ಇನ್ನಿಂಗ್ಸ್ ನಲ್ಲಿ ಭಾರತ 3 ವಿಕೆಟ್ ನಷ್ಟಕ್ಕೆ 314 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಅಲ್ಲಿಗೆ ಆಸ್ಟ್ರೇಲಿಯಾ ತಂಡಕ್ಕೆ 515 ರನ್ ಬೃಹತ್ ರನ್ ಸವಾಲನ್ನು ಧೋನಿ ಪಡೆ ನೀಡಿತು.
ಬೃಹತ್ ಮೊತ್ತದ ಲಾಭ ಪಡೆದುಕೊಂಡು ಭಾರತೀಯ ಪ್ರತಿ ಬೌಲರ್ ಗಳು ಪಂಟರ್ ಪಡೆ ದಾಂಡಿಗರಿಗೆ ಸಿಂಹಸ್ವಪ್ನರಾದರು. ಪ್ರತಿ ರನ್ ಗೂ ಪರದಾಡಿದ ಆಸೀಸ್ ಆಟಗಾರರು ಭಾರತೀಯ ಬೌಲರ್ ಗಳ ದಾಳಿಯ ಪ್ರತಿರೋಧ ತೋರದೆ ಪೆವಿಲಿಯನ್ ಗೆ ಪರೇಡ್ ನಡೆಸಿದರು. ಕೊನೆಗೆ 195 ರನ್ ಗಳಿಗೆ ಆಲೌಟ್ ಆಗಿ 320 ರನ್ ಗಳ ಹೀನಾಯ ಸೋಲೊಪ್ಪಿಕೊಂಡಿತು.
(ದಟ್ಸ್ ಕನ್ನಡ ವಾರ್ತೆ)
ಲಾರಾ ದಾಖಲೆ ಮುರಿದ ಸಚಿನ್ ತೆಂಡೂಲ್ಕರ್


Click it and Unblock the Notifications
