ಸಣ್ಣಕಾರು ಮಾರುಕಟ್ಟೆಗೆ ಕಾಲಿಟ್ಟ ಹೋಂಡಾ
ಬೆಂಗಳೂರು, ಅ.21: ಭಾರತದ ಮಾರುಕಟ್ಟೆಗೆ ಹೋಂಡಾ ಸೀಲ್ ಕಾರ್ ಇಂಡಿಯಾ ಮುಂದಿನ ವರ್ಷದ ಮಧ್ಯ ಭಾಗದಲ್ಲಿ ತನ್ನ ಸಣ್ಣ ಕಾರು ಜಾಝ್ ನ್ನು ಬಿಡುಗಡೆ ಮಾಡುತ್ತಿರುವುದಾಗಿ ತಿಳಿಸಿದೆ.
ಮೂರನೆ ತಲೆಮಾರಿನ ಹೋಂಡಾ ಸಿಟಿ ಕಾರನ್ನು ಮಂಗಳವಾರ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಪ್ರಾದೇಶಿಕ ಮುಖ್ಯಸ್ಥ(ದಕ್ಷಿಣ) ಎ.ವಿ.ಪ್ರಭುಕುಮಾರ್, ಕಾರನ್ನು ನೋಯ್ಡಾದ ಹೊಸ ಘಟಕ ಹಾಗೂ ರಾಜಸ್ತಾನದ ವಿವಾಲ್ಡಿ ಘಟಕಗಳಲ್ಲಿ ಉತ್ಪಾದನೆ ಮಾಡಲಾಗುತ್ತದೆ ಎಂದು ವಿವರ ನೀಡಿದರು.
'ಮಧ್ಯಮ ಗಾತ್ರದ ಕಾರುಗಳಿಗೆ ಹೋಲಿಸಿದರೆ ಜಾಝ್ ಕಾರಿನ ಬೆಲೆ ಸಹ ಆಕರ್ಷಕವಾಗಿದ್ದು ತೆರಿಗೆ ಅರ್ಧದಷ್ಟು ಕಡಿಮೆಯಾಗುತ್ತದೆ. ಮಧ್ಯಮ ಗಾತ್ರದ ಕಾರುಗಳಿಗೆ ಶೇ.24ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಆದರೆ, ಜಾಝ್ ಕಾರಿಗೆ ಕೇವಲ ಶೇ.12 ರಷ್ಟು ತೆರಿಗೆ ವಿಧಿಸಲಾಗುತ್ತದೆ' ಎಂದರು. ಹೊಸ ತಯಾರಿಕಾ ಘಟಕದಲ್ಲಿ ಜಾಝ್ ಕಾರುಗಳ ಉತ್ಪಾದನೆ ಶೀಘ್ರದಲ್ಲೇ ಆರಂಭವಾಗಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಕಳೆದ ವರ್ಷ ಹೋಂಡಾ ಕಂಪನಿಯ 62,000 ಕಾರುಗಳು ಮಾರಾಟವಾಗಿದ್ದವು. ಈ ವರ್ಷ 65,000 ರಿಂದ 70,000 ಕಾರುಗಳನ್ನು ಮಾರಾಟ ಮಾಡುವ ಗುರಿಯನ್ನು ಕಂಪನಿ ಹೊಂದಿದೆ. ಇಂದು ಬಿಡುಗಡೆಯಾದ ಮೂರು ಹೋಂಡಾ ಸಿಟಿ ಹೊಸ ಮಾಡೆಲ್ ಕಾರುಗಳ ಬೆಲೆ ರು.7.88 ಲಕ್ಷ, ರು.8.38 ಲಕ್ಷ ಹಾಗೂ ರು.9.08 ಲಕ್ಷ ಎಂದು ಮಾರುಕಟ್ಟೆ ನಿರ್ದೇಶಕರು ತಿಳಿಸಿದರು.
(ದಟ್ಸ್ ಕನ್ನಡ ವಾರ್ತೆ)
ಟಾಟಾ ನ್ಯಾನೊಗೆ ಪ್ರತಿಸ್ಪರ್ಧಿಯಾಗಿ ಅಜಂತಾ ಕಾರು


Click it and Unblock the Notifications
