ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿರಿಯೂರಿನಲ್ಲಿ ತೋಟಗಾರಿಕಾ ಕಾಲೇಜು

By Staff
|
Google Oneindia Kannada News

ಚಿತ್ರದುರ್ಗ,ಅ.21: ರಾಜ್ಯ ಸರ್ಕಾರವು ಬಾಗಲಕೋಟೆಯಲ್ಲಿ ತೊಟಗಾರಿಕಾ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸುತ್ತಿದ್ದು ಈ ವಿಶ್ವವಿದ್ಯಾನಿಲಯದಡಿ 2009-10ನೇ ಸಾಲಿನ ಶೈಕ್ಷಣಿಕ ವರ್ಷದಿಂದ ಹಿರಿಯೂರಿನಲ್ಲಿ ತೋಟಗಾರಿಕಾ ಕಾಲೇಜನ್ನು ಸ್ಥಾಪಿಸಲಾಗುತ್ತದೆಂದು ರಾಜ್ಯ ಸಮಾಜ ಕಲ್ಯಾಣ ಸಚಿವ ಡಿ.ಸುಧಾಕರ್‌ರವರು ತಿಳಿಸಿದರು.

ಅವರು ಸೋಮವಾರ ಹಿರಿಯೂರು ತಾಲ್ಲೂಕಿನ ಬಬ್ಬೂರು ಕೃಷಿ ಸಂಶೋಧನಾ ಕೇಂದ್ರದಲ್ಲಿ ಕೃಷಿವಿಜ್ಞಾನ ಕೇಂದ್ರ ಆಡಳಿತ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿ ರೈತರಿಗಾಗಿ ಏರ್ಪಡಿಸಿದ ಕೃಷಿ ಕ್ಷೇತ್ರೋತ್ಸವ ಮತ್ತು ರೈತರಿಂದ ರೈತರಿಗಾಗಿನ ಚರ್ಚಾಗೋಷ್ಠಿ, ಕೃಷಿಮೇಳವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಚಿತ್ರದುರ್ಗ ಜಿಲ್ಲೆಯು ಕಡಿಮೆ ಮಳೆಬೀಳುವ ಪ್ರದೇಶವಾಗಿರುವುದರಿಂದ ಸಹಜವಾಗಿ ಅಂತರ್ಜಲ ಕಡಿಮೆಯಾಗಿದೆ. ಇದಕ್ಕಾಗಿ ಇಲ್ಲಿನ ರೈತರು ಹನಿ ನೀರಾವರಿಯನ್ನು ಅಳವಡಿಸಿಕೊಳ್ಳುವುದು ಅನಿವಾರ್ಯ ಎಂದರು.

ರೈತರು ಹುಲುಸಾದ ಬೆಳೆಗಾಗಿ ರಾಸಾಯಿನಿಕ ಗೊಬ್ಬರವನ್ನು ಉಪಯೋಗ ಮಾಡುವುದರಿಂದ ವೆಚ್ಚ ಹೆಚ್ಚುವುದರೊಂದಿಗೆ ಜಮೀನಿನ ಫಲವತ್ತತೆ ಕಡಿಮೆಯಾಗಿ ರೈತರು ಸಂಕಷ್ಟಕ್ಕಿಡಾಗುತ್ತಾರೆ. ಇದನ್ನು ತಡೆಯಲು ರೈತರು ಕಡಿಮೆ ಖರ್ಚಿನ ಸಾವಯವಗೊಬ್ಬರವನ್ನು ಉಪಯೋಗಿಸಬೇಕು ಇದರಿಂದ ಜಮೀನಿನ ಫಲವತ್ತತೆಯು ಹೆಚ್ಚಾಗಲಿದೆ ಎಂದರು.

ರೈತರು ಬೆಳೆದ ಬೆಳೆಗಳಿಗೆ ಅಗತ್ಯವಿರುವ ಹತ್ತಿರದ ಮಾರುಕಟ್ಟೆ ಸೌಲಭ್ಯವನ್ನು ಕಲ್ಪಿಸಿಕೊಡುವುದು ಸರ್ಕಾರದ ಜವಾಬ್ದಾರಿಯಾಗಿದೆ. ಹಿರಿಯೂರಿನಲ್ಲಿ ಮಾರುಕಟ್ಟೆಯ ಕೊರತೆಯಿದೆ ಇದನ್ನು ಮುಂದಿನ ದಿನಗಳಲ್ಲಿ ನಿವಾರಿಸಲಾಗುವುದು ಎಂದ ಅವರು ಸಣ್ಣ ರೈತರಿಗೆ ಹಾಗೂ ಬಡವರಿಗೆ ನೆರವಾಗಲು ಸಮಾಜ ಕಲ್ಯಾಣ ಇಲಾಖೆಯಿಂದ ಹೈನುಗಾರಿಕೆಯಡಿ ತಾಲ್ಲೂಕಿನ 2500 ಫಲಾನುಭವಿಗಳಿಗೆ ಹಸುಗಳನ್ನು ನೀಡಲು ಈಗಾಗಲೇ ಯೋಜನೆ ತಯಾರಿಸಲಾಗಿದೆ ಎಂದರು.

ಕೃಷಿ ಕ್ಷೇತ್ರೋತ್ಸವದಲ್ಲಿ ಹಸಿರುಮನೆ, ಕಾಂಪೋಸ್ಟ್ ಮತ್ತು ಎರೆಹುಳು ತಯಾರಿಕೆ ಘಟಕ, ಮೇವಿನ ಬೆಳೆ ಘಟಕ, ಮಾದರಿ ಜಲಾನಯನ, ವಿವಿಧ ಬೆಳೆಯ ತಳಿಗಳ ಪ್ರಾತ್ಯಕ್ಷಿಕೆ, ಔಷಧಿ ಮತ್ತು ಸುಗಂಧದ್ರವ್ಯ ಸಸ್ಯಗಳ ವನ, ಸಮಗ್ರ ಕೃಷಿ ಪದ್ದತಿ, ಸಮಗ್ರ ಕೀಟ ನಿರ್ವಹಣೆ, ಕಸಿಕೊಂಬೆವನ, ಮೇಲ್ಛಾವಣಿ ನೀರುಕೊಯ್ಲು, ಕೃಷಿ ತಾಂತ್ರಿಕತೆಗೆ ಸಂಬಂಧಿತ ಮಳಿಗೆಗಳು ಮತ್ತು ವಸ್ತುಪ್ರದರ್ಶನವನ್ನು ಆಯೋಜಿಸಲಾಗಿತ್ತು.

ಸಮಾರಂಭದಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ.ಪಿ.ಜಿ.ಚೆಂಗಪ್ಪ, ಆಡಳಿತ ಮಂಡಳಿ ಸದಸ್ಯರಾದ ಎಸ್.ಡಿ.ಸಂಪತ್ ಸಾಮ್ರಾಜ್ಯ, ಅತ್ತಿಹಳ್ಳಿ ದೇವರಾಜ್, ಜಂಟಿ ಕೃಷಿ ನಿದೇಶಕರಾದ ಡಾ.ಬಿ.ಆರ್.ಶಂಕರ್, ಜಲಾನಯನ ಅಭಿವೃದ್ದಿ ಅಧಿಕಾರಿ ಡಾ. ಕೃಷ್ಣಮೂರ್ತಿ ಉಪಸ್ಥಿತರಿದ್ದರು. ವಲಯ ಸಂಶೋಧನಾ ನಿರ್ದೇಶಕ ಡಾ.ಕೆ.ಪಿ.ವಿಶ್ವನಾಥ್ ಸ್ವಾಗತಿಸಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X