ದೇವಿ ಅರ್ಚನೆಗೆ ಮಹಿಳೆಯರು ಯೋಗ್ಯರಲ್ಲ
ಮಧುರೈ, ಅ. 17 : ದೇವಾಲಯಗಳಿಗೆ ಮಹಿಳಾ ಅರ್ಚಕರನ್ನು ನೇಮಕ ಮಾಡಿರುವ ಕ್ರಮಕ್ಕೆ ತೀವ್ರ ವಿರೋಧಿ ವ್ಯಕ್ತವಾಗಿದೆ. ನಲ್ಲುದೇವನಪಟ್ಟಿ ಹಾಗೂ ಉಸಿಲಂಪಟ್ಟಿ ಗ್ರಾಮಗಳಲ್ಲಿ ಮಹಿಳಾ ಅರ್ಚಕರಿಗೆ ದೇವಾಲಯ ಪ್ರವೇಶಿಸಲು ಸಾರ್ವಜನಿಕರು ನಿರ್ಬಂಧ ವಿಧಿಸಿದ್ದಾರೆ. ಮಹಿಳಾ ಅರ್ಚಕರು ಬೇಡ ಎನ್ನುವವರಲ್ಲಿ ಬಹುಪಾಲು ಮಂದಿ ಮಹಿಳೆಯರೆ ಎನ್ನುವುದು ವಿಶೇಷವಾಗಿದೆ.
ರಾಜ್ಯ ಸರ್ಕಾರ ಸ್ವಾಧೀನದಲ್ಲಿರುವ ದೇವಾಲಯಗಳಿಗೆ ಮಹಿಳಾ ಅರ್ಚಕರನ್ನು ನೇಮಿಸಲು ಮದ್ರಾಸ್ ಹೈಕೋರ್ಟ್ ನ ನ್ಯಾಯಮೂರ್ತಿ ಕೆ.ಚಂದ್ರು ಅವರನ್ನು ಒಳಗೊಂಡ ನ್ಯಾಯಪೀಠ ಕಳೆದ ತಿಂಗಳು ಸೆ.5 ರಂದು ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಡಿಎಂಕೆ ಸರ್ಕಾರ ಪಿ.ಪಿನ್ನಿಯಕ್ಕಲ್ ಎನ್ನುವ ಮಹಿಳಾ ಅರ್ಚಕರನ್ನು ಲಿಂಗನಾಯಕನಪಟ್ಟಿ ಗ್ರಾಮದಲ್ಲಿರುವ ದುರ್ಗಾಯಿ ಅಮ್ಮ ದೇವಾಲಯಕ್ಕೆ ಅರ್ಚಕರನ್ನಾಗಿ ನೇಮಿಸಿತ್ತು. ಆದರೆ ಇದಕ್ಕೆ ರಾಜ್ಯಾದ್ಯಂತ ಭಾರಿ ವಿರೋಧಿ ವ್ಯಕ್ತವಾಗಿತ್ತು.
ಸರ್ಕಾರ ಹಾಗೂ ನ್ಯಾಯಾಲಯದ ಕ್ರಮವನ್ನು ಖಂಡಿಸಿ ಇಂದು ಸಾರ್ವಜನಿಕರು ಅಮ್ಮ ದೇವಸ್ಥಾನಕ್ಕೆ ಸುತ್ತುವರೆದು ಪ್ರತಿಭಟನೆ ನಡೆಸಿದರು. ಪ್ರತಿಭಟನಾ ನಿರತರಲ್ಲಿ ಮಹಿಳೆಯರೆ ಹೆಚ್ಚು ಎನ್ನುವುದೆ ವಿಶೇಷವಾಗಿತ್ತು. ಮಹಿಳೆಯರಿಗಿಂತ ಪುರುಷರೆ ಅರ್ಚಕರಾಗಲು ಸೂಕ್ತ ಎನ್ನುವ ಒಕ್ಕೊರಲ ಅಭಿಪ್ರಾಯವನ್ನು ಪ್ರತಿಭಟನೆ ನಡೆಸುತ್ತಿರುವ ಮಹಿಳೆಯರು ಮಂಡಿಸಿದರು. ಆದ್ದರಿಂದ ಈ ಕೂಡಲೇ ಸರ್ಕಾರ ಮಹಿಳಾ ಅರ್ಚಕರನ್ನು ವಾಪಸ್ಸು ಕರೆಸಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ದೇವಸ್ಥಾನಕ್ಕೆ ಬಿಗ ಜಡಿಯಲಾಗಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications