ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಎಂಐಸಿ ಯೋಜನೆಗೆ 102 ಎಕರೆ ಭೂಮಿ

By Staff
|
Google Oneindia Kannada News

ಬೆಂಗಳೂರು, ಅ.8: ಯಡಿಯೂರಪ್ಪ ನೇತೃತ್ವದಲ್ಲಿ ಅ.7ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಅನೇಕ ಪ್ರಮುಖ ವಿಷಯಗಳು ಚರ್ಚಿತವಾದವು ಹಾಗೂ ಹಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು.

ಕಂದಾಯ ತೆರಿಗೆ:
ಬೃಹತ್ ಮಹಾನಗರಪಾಲಿಕಾ ಪ್ರದೇಶದಲ್ಲಿ ನಗರಸಭಾ, ಪುರಸಭಾ ಪ್ರದೇಶಗಳು, ಗ್ರಾಮಪಂಚಾಯತ್ ಪ್ರದೇಶಗಳು ಒಳಗೊಂಡಿದ್ದು ಏಕರೀತಿಯ ಕಂದಾಯ ಪದ್ಧತಿ ಬಗ್ಗೆ ಸಂಪುಟ ಉಪ ಸಮಿತಿ ತೀರ್ಮಾನ ನೀಡಿದ್ದು ಅದರ ಶಿಫಾರಸಿನಂತೆ ಸ್ವಯಂ ಆಸ್ತಿ ಮೌಲ್ಯ ಮಾಪನಾ ಪದ್ಧತಿಜಾರಿ ಹಿಂದಿನ ದರದಲ್ಲ್ಲಿ ಶೇ.20 ರಷ್ಟು ಹೆಚ್ಚುವರಿಯಾಗಿ ತೆರಿಗೆಗಳನ್ನು ಪಾವತಿಸಿಕೊಳ್ಳುವುದು, ಸ್ವಂತ ವಾಸಕ್ಕಾಗಿ ಬಳಸುವ ಕಟ್ಟಡಗಳಿಗೆ ಶೇ. 20 ರಷ್ಟು ರಿಯಾಯಿತಿ, ಖಾಲಿ ನಿವೇಶನಗಳಿಗೆ ಹಿಂದೆ ಇದ್ದುದಕ್ಕಿಂತ ಎರಡುಪಟ್ಟು ಹೆಚ್ಚುವರಿ ತೆರಿಗೆ ಈ ತೀರ್ಮಾನಗಳನ್ನು ಏಪ್ರಿಲ್ 1, 2008 ರಿಂದಲೇ ಜಾರಿಗೆ ಬರುವಂತೆ ತೀರ್ಮಾನಿಸಲಾಗಿದೆ. ಇದರನ್ವಯ ಒಟ್ಟಾರೆ 6 ಲಕ್ಷ ಆಸ್ತಿಗಳ ಸೇರ್ಪಡೆ ಒಟ್ಟು 13 ಲಕ್ಷ ಆಸ್ತಿಗಳಿಂದ 200ಕೋಟಿ ರೂ ಹೆಚ್ಚುವರಿ ತೆರಿಗೆ ಸಂಗ್ರಹವಾಗಲಿದೆ. ಅದೇ ಸಂದರ್ಭದಲ್ಲಿ ಈ ಎಲ್ಲ ಪ್ರದೇಶಕ್ಕೆ ಏಕರೀತಿಯ ಸೌಲಭ್ಯಗಳ ವಿಸ್ತರಣೆಯೂ ಸಹ ಆಗಲಿದೆ.

ಬಿಎಂಐಸಿ ಹೆಚ್ಚಿನ ಭೂಮಿ
ಬಿ.ಎಂ.ಐ.ಸಿ. ಯ ರಿಂಗ್ ರಸ್ತೆಗೆ ಸಂಬಂಧಿಸಿದಂತೆ ಉಚ್ಚನ್ಯಾಯಾಲಯವು ನೀಡಿದ ತೀರ್ಪಿನಂತೆ ನಾಲ್ಕು ಕಡೆ ಲಿಂಕ್ ರಸ್ತೆಗಳನ್ನು ನಿರ್ಮಿಸಲು ಅಗತ್ಯವಾದ ಸುಮಾರು 102 ಎಕರೆ ಭೂಮಿಯನ್ನು ನೀಡಿ ಕೆಲಸವನ್ನು ಪೂರ್ಣಗೊಳಿಸಲು ಅನುಮತಿಸಲಾಗಿದೆ. ಈ ಯೋಜನೆಗೆ ಸಂಬಂಧಿಸಿದಂತೆ ಹಿಂದೆ ನೇಮಕವಾಗಿದ್ದ ನ್ಯಾಯಮೂರ್ತಿ ಬಿ.ಸಿ. ಪಟೇಲರ ಏಕಸದಸ್ಯ ನ್ಯಾಯಾಂಗ ತನಿಖಾ ಆಯೋಗದ ಅವಶ್ಯಕತೆ ಪ್ರಸಕ್ತ ಸಂದರ್ಭದಲ್ಲಿ ಇಲ್ಲವಾದ ಕಾರಣ ಹಾಗೂ ಅವರು ಲಭ್ಯವೂ ಇಲ್ಲದ್ದರಿಂದ ಅದನ್ನು ಸ್ಥಗಿತಗೊಳಿಸಲಾಗಿದೆ. ಸ್ವಿಸ್ ಚಾಲೆಂಜ್‌ನ್ನೂ ಸಹ ಅನಗತ್ಯವಾಗಿರುವ ಕಾರಣ ಸ್ಥಗಿತಗೊಳಿಸಲಾಗಿದೆ.

ಮೆಟ್ರೋ:ಕಬ್ಬನ್ ಪಾರ್ಕ್ ಮತ್ತು ಲಾಲ್ ಬಾಗ್ ಪಕ್ಕದಲ್ಲಿ ಮೆಟ್ರೋ ರೈಲು ನಿಲ್ದಾಣ ಮಾಡುವ ಸಂಬಂಧ ತೋಟ ಸಂರಕ್ಷಣಾ ಕಾಯಿದೆಗೆ ತಿದ್ದುಪಡಿ ತರುವ ನಿರ್ಧಾರ. ಮೆಟ್ರೋರೈಲು ಯೋಜನೆಯ ಫೇಸ್ 1 ನಲ್ಲಿ ಉತ್ತರ ಭಾಗಕ್ಕೆ ಹೆಸರಘಟ್ಟ ರಸ್ತೆವರೆವಿಗೂ ದಕ್ಷಿಣದಲ್ಲಿ ಜರಗನಹಳ್ಳಿ ವರೆವಿಗೂ ವಿಸ್ತರಣೆ ಮಾಡುವ ಬಗ್ಗೆ ಅನುಮತಿ ನೀಡಲಾಯಿತು. ಹಾಗೂ ಫೇಸ್ 2 ಅಡಿಯಲ್ಲಿ ಎಲೆಕ್ಟ್ರಾನಿಕ್ ಸಿಟಿ ಮತ್ತು ವೈಟ್‌ಫೀಲ್ಡ್ ವರೆಗೆ ಸರ್ವೆ ಮಾಡುವ ಬಗ್ಗೆ ಕೂಡ ಅನುಮತಿಸಲಾಯಿತು. ಹೀಗಾಗಿ ಉತ್ತರ ಮತ್ತು ದಕ್ಷಿಣ ಎರಡೂ ಕಡೆ ತಲಾ 5 ರಿಂದ 6 ಕಿ.ಮಿ. ವಿಸ್ತರಣೆಯಾಗಲಿದ್ದು ಇದರ ವೆಚ್ಚ ಸುಮಾರು 1592 ಕೋಟಿ ಗಳಾಗಲಿದೆ.

ಕಾರ್ಯ ಸ್ಥಗಿತಗೊಂಡಿರುವ ಸರ್ಕಾರಿ ಮಾಲೀಕತ್ವದ ವಿಜಯನಗರ ಸ್ಟೀಲ್ ಕಂಪೆನಿಯ ಭೂಮಿ ಕಟ್ಟಡಗಳೊಂದಿಗೆ ಕರ್ನಾಟಕ ಕೈಗಾರಿಕಾ ಬಂಡವಾಳ ಅಭಿವೃದ್ಧಿ ನಿಗಮದೊಂದಿಗೆ (KSIIDC) ವಿಲೀನಗೊಳಿಸುವುದು.

ಜೆಎನ್‌ಯುಆರ್‌ಎಂ ನಡಿಯ 3000 ರೂಗಳ ಟ್ರಾಫಿಕ್ ಮ್ಯಾನೇಜ್ ಮೆಂಟ್ ಸೆಂಟರ್ ಗೆ ಶೇ. 35ಕೇಂದ್ರದಿಂದ ಶೇ.15 ರಾಜ್ಯ ಸರ್ಕಾರದಿಂದ ಮತ್ತು ಉಳಿದ 50ಭಾಗ ಸಂಸ್ಥೆಯ ಪಾಲು ಆಗಿದ್ದು ಪ್ರಸಕ್ತ ಸಾಲಿನಲ್ಲಿ ರೂ. 254 ಕೋಟಿ ನೀಡುವ ಬಗ್ಗೆ ಅನುಮತಿ ನೀಡಲಾಯಿತು.

ಮೈಸೂರಿನ ದೇವರಾಜ ಅರಸ್ ಟ್ರಕ್ ಟರ್ಮಿನಲ್‌ಗಾಗಿ 48ಲಕ್ಷ ರು.ಗಳನ್ನು ಮೂಡಾದಿಂದ ನೀಡುವ ಬಗ್ಗೆ ಅನುಮತಿ ನೀಡಲಾಯಿತು. ಪದವಿಪೂರ್ವ ಕಾಲೇಜುಗಳಲ್ಲಿನ 4850 ಹುದ್ದೆಗಳ ನೇಮಕಾತಿಯ ಬಗ್ಗೆ ಕರ್ನಾಟಕ ಲೋಕಸೇವಾ ಆಯೋಗಕ್ಕೆ ತಿಳಿಸಲಾಗಿದ್ದು ಪ್ರಕ್ರಿಯೆ ಆರಂಭಗೊಂಡಿದೆ. ಆದರೆ ಅಲ್ಲಿಯವರೆಗೆ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ 5000 ಸ್ನಾತಕೋತ್ತರ ಪದವೀಧರರನ್ನು ತಾತ್ಕಾಲಿಕವಾಗಿ ಮಾಸಿಕ ರೂ. 5000 ವೇತನದ ಆಧಾರದಲ್ಲಿ ತಾತ್ಕಾಲಿಕ ನೇಮಕಾತಿ ಮಾಡುವ ಅಧಿಕಾರವನ್ನು ಆಯಾ ಕಾಲೇಜು ಪ್ರಾಂಶುಪಾಲರಿಗೆ ನೀಡಲಾಗಿದೆ. ನಿವೃತ್ತ ಶಿಕ್ಷಕರಿಗೂ ಸಹ ಇದರಲ್ಲಿ ಅವಕಾಶ ನೀಡಬಹುದಾಗಿದೆ.

ಶಿಕಾರಿಪುರ ಪಟ್ಟಣಕ್ಕೆ ಅಂಜನಾಪುರ ಕೆರೆಯಿಂದ ಕುಡಿಯುವ ನೀರು ಸರಬರಾಜು ಮಾಡುವ ವ್ಯವಸ್ಥೆ ಕುರಿತಂತೆ ಯೋಜನೆಗೆ ಸಂಪುಟ ಸಭೆ ಒಪ್ಪಿಗೆ ನೀಡಿದೆ. 18.8 ಕೋಟಿ ರೂ.ಗಳ ಈ ಯೋಜನೆ ವೆಚ್ಚವನ್ನು ಶೇ. 50 ಸ್ಥಳೀಯವಾಗಿ ಮತ್ತು ಶೇ. 50 ಭಾಗ ಸರ್ಕಾರದಿಂದ ಭರಿಸಲಾಗುತ್ತದೆ.

ಕರ್ನಾಟಕ ಬಿಕ್ಷುಕರ ಕಾಯಿದೆ (Karnataka Beggars Act) ತಿದ್ದುಪಡಿ ತಂದು ಆಹಾರ ಬಟ್ಟೆಬರೆ, ಆರೋಗ್ಯ ಇತ್ಯಾದಿಗೆ ಅವಕಾಶ ಕಲ್ಪಿಸುವುದು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X