ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್ ನಾಯಕತ್ವಕ್ಕೆ ಡಬ್ಬಲ್ ಡಿಲೈಟ್

By ಡಾ.ಕೆ.ಎಸ್. ಶರ್ಮಾ, ಹುಬ್ಬಳ್ಳಿ
|
Google Oneindia Kannada News

ಕರ್ನಾಟಕ ರಾಜಕೀಯದಲ್ಲಿ ಜೋಡಿ-ನಾಯಕತ್ವ ಪ್ರಯೋಗಗಳು ಕಡಿಮೆ. ಆದರೆ, ಆಗಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಹಿಂದೊಮ್ಮೆ ಯಡಿಯೂರಪ್ಪ ಹಾಗೂ ಅನಂತಕುಮಾರ್ ಪೈಪೋಟಿಯನ್ನು ನಂದಿಸಲು ಯಡಿಯೂರಪ್ಪನವರನ್ನು ರಾಜ್ಯಾಧ್ಯಕ್ಷರಾಗಿ ಹಾಗೂ ಅನಂತಕುಮಾರ್ ಇವರನ್ನು ರಾಜ್ಯ ಪ್ರಚಾರ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಿ, ಇಬ್ಬರೂ ಜಂಟೀ ಪ್ರಚಾರವನ್ನು ಕೈಗೊ್ಳುವಂತೆ ಬಿಜೆಪಿ ಹೈಕಮಾಂಡ್ ಆದೇಶಿಸಿತ್ತು. ಆಗ ಬಿಜೆಪಿಗೆ ಅದು ಪೂರ್ಣ ಲಾಭವನ್ನು ತರದಿದ್ದರೂ ರಾಜ್ಯದಲ್ಲಿ ಏಕಮೇವ ದೊಡ್ಡ ಪಕ್ಷವಾಗಿ ಜಯಗಳಿಸಲು ಅಧಿಕಾರದ ಪ್ರಥಮ ಸೋಪಾನವನ್ನು ಒದಗಿಸಿಕೊಟ್ಟಿದ್ದನ್ನ ಅಲ್ಲಗಳೆಯುವಂತಿಲ್ಲ.

ಇದೇ ತಂತ್ರಗಾರಿಕೆಯನ್ನು ಕಾಂಗ್ರೆಸ್ ಕೂಡ ಕರ್ನಾಟಕದಲ್ಲಿ ಬಳಸಿತ್ತು. ಖರ್ಗೆ-ಕೃಷ್ಣ-ಸಿದ್ಧರಾಮಯ್ಯ ನೇತೃತ್ವದ ಪ್ರಯೋಗವನ್ನು ಹೋದ ಚುನಾವಣೆಗಳಲ್ಲಿ ಮಾಡಿದರೂ ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿ ದೊರೆಯಲಿಲ್ಲ. ಕಳೆದ ವಿಧಾನಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಹೀನಾಯವಾಗಿ ಮುಗ್ಗರಿಸಿತು. ಖರ್ಗೆ ಪ್ರತಿ ಪಕ್ಷದ ನಾಯಕನಾದ ನಂತರ ನಾಲ್ಕು ತಿಂಗಳಿಂದಲೂ ಪೂರ್ಣಾವಧಿ ಅಧ್ಯಕ್ಷನಿಲ್ಲದ ಗೊಂದಲದ ಸ್ಥಿತಿಗೆ ಅದು ಬಂದಿತ್ತು. ಬರಲಿರುವ ಉಪ-ಚುನಾವಣೆಗಳು ಹಾಗೂ ಲೋಕಸಭಾ ಚುನಾವಣೆಗಳ ಕಾಲಕ್ಕಾದರೂ ಎದ್ದೇಳೋ ಪ್ರಯತ್ನ ಮಾಡೋಣ ಎಂದು, ಈಗ ಮತ್ತೊಂದು ಜೋಡಿ ನಾಯಕತ್ವದ ಪ್ರಯೋಗಕ್ಕೆ ಅದು ಕೈಹಾಕಿದೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಗೆ ಆರ್.ವಿ. ದೇಶಪಾಂಡೆಯವರನ್ನು ನೂತನ ಅಧ್ಯಕ್ಷರನ್ನಾಗಿ, ಡಿ.ಕೆ. ಶಿವಕುಮಾರ್ ಇವರನ್ನು ನೂತನ ಕಾರ್ಯಾಧ್ಯಕ್ಷರನ್ನಾಗಿಯೂ ಹೈಕಮಾಂಡ್ ನೇಮಕಮಾಡಿದೆ. "ಟು ಹೆಡ್ಸ್ ಆರ್ ಬೆಟರ್ ದ್ಯಾನ್ ಒನ್" (ಒಬ್ಬರ ತಲೆಗಿಂತ ಇಬ್ಬರ ತಲೆ ಲೇಸು) ಎಂಬ ಗಾದೆಗೆ ಕಾಂಗ್ರೆಸ್ ಶರಣಾದಂತೆ ತೋರುತ್ತದೆ.

ಮುಳುಗುತ್ತಿದೆಯೋ ಎಂಬಂತಿರುವ ಕರ್ನಾಟಕ ಕಾಂಗ್ರೆಸ್ ಹಡಗಿಗೆ ತಡವಾಗಿಯಾದರೂ ನಾಯಕನನ್ನು ಆಯ್ಕೆಮಾಡಲಾಗಿದೆ. ಅಷ್ಟೇ ಅಲ್ಲ, ಈ ಹಡಗಿಗೆ ಒಬ್ಬ ಸಹನಾಯಕನನ್ನೂ ಆಯ್ಕೆಮಾಡಿದೆ. ಇವರಿಬ್ಬರನ್ನೇ ಈ ಹುದ್ದೆಗಳಿಗೆ ಆಯ್ಕೆಮಾಡಲು ಕಾರಣವೇನು? ಎನ್ನುವುದಕ್ಕೆ ಅನೇಕ ವಿವರಣೆಗಳನ್ನು ನೀಡಲಾಗುತ್ತಿವೆ. ಇದರಲ್ಲಿ ಒಂದನೆಯ ವಿವರಣೆಯು - ಜಾತ್ಯಾಧಾರಿತವಾದುದಾಗಿದೆ. ಬಿಜೆಪಿ ರಾಜ್ಯದ ಪ್ರಮುಖ ಜಾತಿಗಳಲ್ಲಿ ಒಂದಾದ -ಲಿಂಗಾಯತ ಬಣದ ಮೇಲೆ ನಿಯಂತ್ರಣ ಸ್ಥಾಪಿಸಿದ್ದರೆ, ಜೆಡಿ(ಎಸ್) ಇನ್ನೊಂದು ಪ್ರಮುಖ ಬಣವಾದ ಒಕ್ಕಲಿಗರನ್ನು ತನ್ನ ತೆಕ್ಕೆಗೆ ಇರಿಸಿಕೊಳ್ಳುವ ಹರಸಾಹಸದಲ್ಲಿದೆ. ಹೀಗಿದ್ದಾಗ, ಇನ್ನುಳಿದ ಬಣಗಳನ್ನು ಕ್ರೋಢೀಕರಿಸುವ ತಂತ್ರಗಾರಿಕೆ ಕಾಂಗ್ರೆಸ್ ಹೂಡಿದೆ. ಈ ಉದ್ದೇಶದಿಂದ ಬ್ರಾಹ್ಮಣ, ದಲಿತ, ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಹುನ್ನಾರ ದೇಶಪಾಂಡೆ ನೇಮಕದಲ್ಲಿ ಅಡಗಿದೆ. ಅಂತೆಯೇ ಶಿವಕುಮಾರ್ ಅವರನ್ನು ಕಾರ್ಯಾಧ್ಯಕ್ಷರನ್ನಾಗಿ ಆಯ್ಕೆಮಾಡಿರುವದರಿಂದ ದೇವೇಗೌಡರ ಬಲವನ್ನು ಒಕ್ಕಲಿಗ ಜನಾಂಗದಲ್ಲಿ ತಗ್ಗಿಸುವ ಉದ್ದೇಶವಿದೆ. ಇಲ್ಲಿ ದಲಿತ ಬಣವನ್ನು ಓಲೈಸಲು ಖರ್ಗೆಯವರಿಗೆ ವಿರೋಧಪಕ್ಷದ ಮುಖಂಡತ್ವ ನೀಡಲಾಗಿದೆ.

ಸಿದ್ಧರಾಮಯ್ಯನವರಿಗೆ ಈವರೆಗೆ ಯಾವ ಸ್ಥಾನವನ್ನೂ ನೀಡಲಾಗಿಲ್ಲ. ಇವರ ಹಿಂದೆ ಪ್ರಭಾವಿ ಕುರುಬ ಜನಾಂಗವಿದೆ ಎಂಬ ವಿಷಯ ಗಮನಾರ್ಹ. ಇವರ ಹೆಸರೇ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಕೇಳಿಬಂದಿತ್ತು. ಆದರೆ ಸಿದ್ದು ಸ್ಥಾನ ದೊರೆಯದಿರುವುದು ಪಕ್ಷಕ್ಕೆ ಮಾರಕವಾಗುವ ಲಕ್ಷಣಗಳು ಇವೆ. ಸಿದ್ದು ತಟಸ್ಥರಾದರೆ ಕಾಂಗ್ರೆಸ್ ಗೆ ಕುರುಬರ ಮತಗಳು ಕೈತಪ್ಪುವುದು ಗ್ಯಾರಂಟಿ. ಸಿದ್ದುಗೆ ಸ್ಥಾನ ನೀಡದಿರಲು ಹೈಕಮಾಂಡ್ ಕಾರಣ ನೀಡಿಲ್ಲ. ಏಕಾಏಕಿ ದೇಶಪಾಂಡೆ - ಶಿವಕುಮಾರ್ ಅವರಿಗೆ ಸ್ಥಾನ ನೀಡಲಾಗಿದೆ. ಅತೃಪ್ತ ಸಿದ್ಧರಾಮಯ್ಯನವರಿಗೆ ಶಮನಕ್ಕೆ ಸೂಕ್ತ ದಾರಿ ಕಂಡುಕೊಳ್ಳದಿದ್ದಲ್ಲಿ ಕೈಗೆ ಭಾರಿ ನಷ್ಟ ಎನ್ನುವ ಅಭಿಪ್ರಾಯ ಕಾಂಗ್ರೆಸ್ ವಲಯದಿಂದ ಕೇಳ ಬರತೊಡಗಿದೆ.

ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆದಾಗ, ಪ್ರಕಟವಾದ ವರದಿಗಳು ಬಹಳ ಮೋಜನ್ನುಂಟು ಮಾಡುತ್ತಿದ್ದುವು. ಕಾಂಗ್ರೆಸ್ ಮೂಲದವರು ಹಾಗೂ ಕಾಂಗ್ರೆಸ್‌ಗೆ ವಲಸೆ ಬಂದವರು ಎಂಬ ವರ್ಗೀಕರಣ. ಹಾಗೂ ಅಧ್ಯಕ್ಷ ಸ್ಥಾನವನ್ನು ಮೂಲ ಕಾಂಗ್ರೆಸ್ಸಿಗರಿಗೇ ಕೊಡಬೇಕೆಂಬ "ಲಾಬಿ". ಈ ದೃಷ್ಟಿಯಿಂದ ನೋಡಿದಾಗ, ಹಿಂದೆ ದೇಶಪಾಂಡೆ ಕಾಂಗ್ರೆಸ್ ಮೂಲದವರಾದರೂ, ಇವರು ಜನತಾ ಪರಿವಾರಕ್ಕೆ ವಲಸೆಹೋಗಿದ್ದು ಮತ್ತೆ ಕಾಂಗ್ರೆಸ್‌ಗೆ ಮರಳಿದವರಲ್ಲವೇ? ಎಂಬ ವಾದವೂ ಇದೆ. ಆದರೆ, ಸಿದ್ಧರಾಮಯ್ಯನವರಿಗಿಂತಲೂ ಮೊದಲು ಕಾಂಗ್ರೆಸ್‌ಗೆ ಮರಳಿ ಬಂದವರು ದೇಶಪಾಂಡೆ, ಎಂಬ ಇನ್ನೊಂದು ಅಂಶ ಇದೆ.

ಕಾಂಗ್ರೆಸ್ ಮುಂದಿರುವ ಮೊಟ್ಟಮೊದಲನೆಯ ಸವಾಲೆಂದರೆ, ತನ್ನಲ್ಲಿರುವ ಬಹಳ ಜನ ಹಿರಿಯ ಮುಖಂಡರ ನಡುವೆ ಸಾಮರಸ್ಯವನ್ನು ಸಾಧನೆ ಮಾಡುವುದು. "ಟೂ ಮೆನಿ ಕುಕ್ಸ್ ಸ್ಪಾಯಿಲ್ ದ ಬ್ರಾತ್" (ಬಹಳ ಅಡಿಗೆಯವರು ಕೂಡಿ "ಸೂಪ್"ದ ಹದ ಕೆಡಿಸಿದರು) ಎಂಬ ಮಾತಿದೆ. ಈ ಅನೇಕರಲ್ಲಿ ಏಕತೆ ಸಾಧಿಸುವ ಕಷ್ಟಸಾಧ್ಯ ಕಾರ್ಯವನ್ನು ಈ ನೂತನ ನಾಯಕತ್ವದ್ವಯರು ಮಾಡಬೇಕಾಗುತ್ತದೆ. ಇದರ ಜೊತೆಗೆ ಪ್ರತಿಯೊಬ್ಬ ಹಿರಿಯ ನಾಯಕನಲ್ಲಿ ತನ್ನದೇ " ಸ್ವಪ್ರತಿಷ್ಠೆ" ಹಾಸುಹೊಕ್ಕಿದೆ. ಜೊತೆಗೆ ಕಾಂಗ್ರೆಸ್ ಪಕ್ಷದ ನಾಯಕರಲ್ಲಿರುವ ಆಂತರಿಕ ವೈಷಮ್ಯೆ, ಕಚ್ಚಾಟದಿಂದ ಪಕ್ಷ ಇಂದು ನೆಲಕ್ಕುರುಳಿದೆ ಎನ್ನುವುದು ಜಗಜ್ಜಾಹೀರವಾಗಿದೆ. ಈಗಲಾದರೂ ಇದನ್ನು ಅರಿತು ತಮ್ಮ ಮನೋವೃತ್ತಿಯನ್ನು ಬದಲಿಸಿಕೊಂಡರೆ ತಕ್ಕ ಮಟ್ಟಿಗೆ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳುವ ಸಾಧ್ಯತೆಗಲಿವೆ.

ಸಾಮಾನ್ಯವಾಗಿ ಚುನಾವಣೆಗಳಲ್ಲಿ ಸೋತವರನ್ನು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಮಾಡುವುದು ವಿರಳ. ಆರ್.ವಿ. ದೇಶಪಾಂಡೆ ಹಳ್ಯಾಳದಿಂದ ವಿಧಾನಸಭೆಗೆ ನಡೆದ ಚುನಾವಣೆಗಳಲ್ಲಿ ಸೋತಿದ್ದರೂ ಅವರನ್ನು ಕಾಂಗ್ರೆಸ್ ಹೈಕಮಾಂಡ್, ಕರ್ನಾಟಕ ಕಾಂಗ್ರೆಸ್ ಮುಖ್ಯಸ್ಥರಾಗಿ ನೇಮಕಮಾಡಿರುವುದು ಅಚ್ಚರಿಯನ್ನು ತರುತ್ತದೆ. ಅಂತೆಯೇ ಇವರನ್ನು "ಸೋತು ಗೆದ್ದವರು" ಎಂದು ಬಣ್ಣಿಸಬಹುದೇನೋ?

ದೇಶಪಾಂಡೆಯವರು ಅಧ್ಯಕ್ಷ ಸ್ಥಾನಕ್ಕೆ ನಾಮಕರಣವಾದ ನಂತರ, ಮಾಜಿ ಉಪಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನು ಭೇಟಿಮಾಡಿ, ಪಕ್ಷದ ಬಲವರ್ಧನೆಗೆ ಅವರ ಸಹಕಾರವನ್ನು ಕೋರಿದ್ದಾರೆ. ಅಂತೆಯೇ ಹಿರಿಯ ಕಾಂಗ್ರೆಸ್ ಮುಖಂಡರಾದ ಕೆ.ಹೆಚ್. ರಂಗನಾಥ, ಸಿ.ಕೆ. ಜಾಫರ್‌ಷರೀಫ್ ಮುಂತಾದವರನ್ನು ಕೂಡ ಭೇಟಿಯಾಗಿ, ಅವರ ಶುಭಾಶಯಗಳನ್ನು ಹಾಗೂ ಮಾರ್ಗದರ್ಶನವನ್ನೂ ಕೋರಿದ್ದಾರೆ. ಇದು ಸ್ವಾಗತಾರ್ಹ ಕ್ರಮ. ಅಂತೆಯೇ ಸಿದ್ಧರಾಮಯ್ಯ ಹೇಳಿದ್ದಾರೆ, ತಾವು ಕಾಂಗ್ರೆಸ್ ಬಿಡುವುದಿಲ್ಲ ಎಂದು.

ಒಟ್ಟಿನಲ್ಲಿ ರಾಜ್ಯದ "ಜಾತ್ಯಾತೀತ ಮತ"ಗಳು ಹರಿದುಹಂಚಿಹೋಗಿವೆ. ಅವುಗಳನ್ನು ಕಾಂಗ್ರೆಸ್ ಪರವಾಗಿ ಕ್ರೋಢೀಕರಿಸುವ ಬಗ್ಗೆ ಒತ್ತು ನೀಡುತ್ತೇವೆ. ಹಾಗೂ ಪಕ್ಷದ ಹಿರಿಯ ಮುಖಂಡರನ್ನೆಲ್ಲ ವಿಶ್ವಾಸ ತೆಗೆದುಕೊಳ್ಳುವ ಮೂಲಕ ಅವರ ಅನುಭವವನ್ನು ಪಡೆದುಕೊಂಡು ಪಕ್ಷದ ಪುನಶ್ಚೇತನಕ್ಕೆ ಬಳಸುವುದಾಗಿಯೂ ಹೇಳಿದ್ದಾರೆ. ದೇಶಪಾಂಡೆ ಹೇಳಿಕೆ ನೀಡಿದ ದಾರಿಯಲ್ಲಿ ಸಾಗಿದರೆ ಬಿಜೆಪಿಗೆ ಸೆಡ್ಡು ಹೊಡೆಯುವುದರಲ್ಲಿ ಸಂಶಯವಿಲ್ಲ. ಕಾರ್ಯಾಧ್ಯಕ್ಷರಾಗಿರುವ ಡಿ.ಕೆ.ಶಿವಕುಮಾರ್ ಅವರನ್ನು ಸಮರ್ಥವಾಗಿ ಬಳಸಿಕೊಳ್ಳುವುದರ ಜೊತೆಗೆ ಯುವಕರಿಗೆ ಅಧ್ಯತೆ ನೀಡಿದರೆ ಪಕ್ಷಕ್ಕೆ ಖಂಡಿತವಾಗಿಯೂ ಲಾಭವಾಗಲಿದೆ.
'ಕೈ' ಬಲಪಡಿಸಿ ಸರ್ವಜನರ ಸರ್ಕಾರ ತರೋಣ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X