ಸಂಸದನ ಥಳಿಸಿದ್ದ ಪೇದೆಗಳ ಕ್ರಿಮಿನಲ್ ಮೊಕದ್ದಮೆ
ಭೂಪಾಲ್, ಅ. 5 : ಅಕ್ರಮ ಕಟ್ಟಡಗಳನ್ನು ಧ್ವಂಸಗೊಳಿಸುವುದನ್ನು ತಡೆಯಲು ಮುಂದಾಗ ಮಧ್ಯಪ್ರದೇಶದ ಬಿನಾ ಕ್ಷೇತ್ರದ ಬಿಜೆಪಿ ಸಂಸದ ವಿರೇಂದ್ರ ಕುಮಾರ್ ಕಾತಿಕ್ ಅವರನ್ನು ಲಾಠಿಯಿಂದ ಥಳಿಸಿ ತೀವ್ರವಾಗಿ ಗಾಯಗೊಳಿಸಿದ್ದ ಆರು ಜನ ರೈಲ್ವೆ ರಕ್ಷಣಾ ಇಲಾಖೆ ಪೊಲೀಸ್ ಪೇದೆಯ ಮೇಲೆ ಕ್ರಿಮಿನಲ್ (ಕೊಲೆ ಹಾಗೂ ಹಲ್ಲೆ) ಮೊಕದ್ದಮೆ ದಾಖಲಿಸಲಾಗಿದೆ.
ಅಕ್ರಮ ಕಟ್ಟಡಗಳ ನೆಲೆಸಮ ಮಾಡಲು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಸಂಸದ ವಿರೇಂದ್ರಕುಮಾರ್ ಅವರ ಮೇಲೆ ಆರ್ ಪಿಎಫ್ ಪೇದೆಗಳು ಮಾರಣಾಂತಿಕ ಹಲ್ಲೆ ನಡೆಸಿದ್ದರಿಂದ ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಹಮೀದ್ ಆಸ್ಪತ್ರೆಗೆ ದಾಖಲಿಸಿ, ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿತ್ತು. ಸಂಸದ ವಿರೇಂದ್ರ ಕುಮಾರ್ ಆರೋಗ್ಯದಲ್ಲಿ ಇಂದು ಸ್ವಲ್ಪ ಚೇತರಿಕೆ ಕಂಡು ಬಂದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಮಧ್ಯಪ್ರದೇಶದ ಡಿಜಿಪಿ ಎಸ್.ಕೆ.ರಾವತ್ ಅವರು ಘಟನೆ ಕುರಿತು ಮೂರು ದಿನಗಳಲ್ಲಿ ವರದಿ ನೀಡುವಂತೆ ರೈಲ್ವೆ ಇಲಾಖೆಯ ಐಜಿ ಮೋಹನ್ ರಾವ್ ಅವರಿಗೆ ಸೂಚನೆ ನೀಡಿದ್ದಾರೆ. ಅಲ್ಲದೇ ರಾವತ್ ಘಟನೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಪ್ರತಿಕ್ರಿಯಿಸಿದ ಅವರು, ಘಟನೆಗೆ ತೀವ್ರ ವಿಷಾಧ ವ್ಯಕ್ತಪಡಿಸಿದರು. ಹಾಗೂ ಹಮೀದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂಸದ ವಿರೇಂದ್ರಕುಮಾರ್ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಘಟನೆ ಸಂಬಂಧಿಸಿದಂತೆ ಬಿಜೆಪಿ ಕಾರ್ಯಕರ್ತರು ಕೇಂದ್ರ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್ ಅವರ ರಾಜೀನಾಮೆ ಆಗ್ರಹಿಸಿ ಪ್ರತಿಭಟನೆ ಆರಂಭಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications