'ಯಡಿಯೂರಪ್ಪ ಅಧಿಕಾರದಲ್ಲಿರಲು ಯೋಗ್ಯರಲ್ಲ'
ಬೆಂಗಳೂರು, ಅ.4: ಪೊಳ್ಳುಭರವಸೆಗಳನ್ನು ನೀಡುತ್ತಾ ಆಡಳಿತಾರೂಢ ಬಿಜೆಪಿ ಸರ್ಕಾರ ಕಾಲತಳ್ಳುತ್ತಿದೆ. 120 ದಿನಗಳ ಆಡಳಿತದಲ್ಲಿ ಸಾಧಿಸಿದ್ದು ಮಾತ್ರ ಶೂನ್ಯ ಎಂದು ಆರೋಪಿಸಿ ಕಾಂಗ್ರೆಸ್ ಪಕ್ಷದ ನಾಯಕರು ಶನಿವಾರ ಬೆಂಗಳೂರಿನಲ್ಲಿ ಜಾಗೃತಿ ಜಾಥಾ ನಡೆಸಿದರು. ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಹಾಗೂ ರಾಜ್ಯದ ಅಭಿವೃದ್ಧಿಯತ್ತ ಗಮನಹರಿಸುವಂತೆ ಬಿಜೆಪಿ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕೆಂದು ರಾಜ್ಯಪಾಲರನ್ನು ಆಗ್ರಹಿಸಿದರು.
ತನ್ನ್ನ 120 ದಿನಗಳ ಆಡಳಿತದಲ್ಲಿ ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ದಿದ್ದೇವೆ ಎಂದು ಬಿಜೆಪಿ ಬಡಾಯಿ ಕೊಚ್ಚಿಕೊಳ್ಳುತ್ತಿದೆ. ಆದರೆ ಬಡವರು, ರೈತರು, ಅಲ್ಪಸಂಖ್ಯಾತ ವರ್ಗವನ್ನು ತೀರಾ ಕಡೆಗಣಿಸಲಾಗಿದೆ.ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದೆ.ಪ್ರವಾಹ ಪೀಡಿತ ಪ್ರದೇಶಗಳ ಸಂತ್ರಸ್ತರಿಗೆ ಪರಿಹಾರ ನೀಡುವಲ್ಲೂ ಸೋತಿದೆ ಎಂದು ರಾಜ್ಯಪಾಲರಿಗೆ ಸಲ್ಲಿಸಲಾದ ಮನವಿ ಪತ್ರದಲ್ಲಿ ದೂರಲಾಗಿದೆ.
ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ಪರಿಶಿಷ್ಟ ಜಾತಿ ಮತ್ತು ವರ್ಗ, ಅಲ್ಪಸಂಖ್ಯಾತರ ಕಾರ್ಯಕ್ರಮಗಳನ್ನು ಜಾರಿಗೆ ತರುವಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಎಲ್ಲ ವರ್ಗಕ್ಕೆ ನ್ಯಾಯದೊರಕುವಂತೆ ಮಾಡಿ ರಾಜ್ಯದ ಅಭಿವೃದ್ಧಿಗೆ ಶ್ರಮಿಸುವಂತೆ ಸರ್ಕಾರಕ್ಕೆ ಅಗತ್ಯ ಮಾರ್ಗದರ್ಶನ ನೀಡಬೇಕೆಂದು ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದ ನಿಯೋಗ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿತು.
ಕೆಪಿಸಿಸಿ ಕಚೇರಿಯಿಂದ ಆರಂಭವಾದ ಜಾಗೃತಿ ಜಾಥಾ ಚಿನ್ನಸ್ವಾಮಿ ಕ್ರೀಡಾಂಗಣದ ಮೂಲಕ ಹಾದು ಎಂಜಿ ರಸ್ತೆಯ ಮಹಾತ್ಮಗಾಂಧಿ ಪ್ರತಿಮೆ ಬಳಿ ಸಮಾವೇಶಗೊಂಡಿತು. ಜಾಥಾದಲ್ಲಿ ಸಾವಿರಾರು ಸಂಖ್ಯೆಯ ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಂಡಿದ್ದರು. ಮೆರವಣಿಗೆಯಲ್ಲಿ ಉದ್ದಕ್ಕೂ ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿದರು. ವಿಎಚ್ ಪಿ, ಭಜರಂಗದಳ ಮತ್ತಿತರ ಸಂಘಟನೆಗಳು ಚರ್ಚ್ ಗಳ ಮೇಲೆ ದಾಳಿ ಮಾಡಿದ್ದನ್ನು ಸಮರ್ಥಿಸಿಕೊಂಡಿರುವ ಮುಖ್ಯಮಂತ್ರಿ ಯಡಿಯೂರಪ್ಪ, ಗೃಹ ಸಚಿವ ವಿ.ಎಸ್.ಆಚಾರ್ಯ ಅವರು ಒಂದು ಕ್ಷಣವೂ ಅಧಿಕಾರದಲ್ಲಿರಲು ಯೋಗ್ಯರಲ್ಲ ಎಂದು ಖರ್ಗೆ ಕಿಡಿಕಾರಿದರು.
ಜಾಥಾದಲ್ಲಿ ಆರ್.ವಿ.ದೇಶಪಾಂಡೆ, ಡಿ.ಕೆ.ಶಿವಕುಮಾರ್, ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ವಿ.ಎಸ್.ಉಗ್ರಪ್ಪ, ಮಾಜಿ ಸಚಿವ ಅಲ್ಲಮ್ ವೀರಭದ್ರಪ್ಪ, ಮಾಜಿ ಮೇಯರ್ ಎಂ.ರಾಮಚಂದ್ರಪ್ಪ, ಕೆಪಿಸಿಸಿ ಸದಸ್ಯ ಡಾ.ಬಿ.ಗುರಪ್ಪ ಹಾಗೂ ಇನ್ನಿತರ ಕಾಂಗ್ರೆಸ್ ಪ್ರಮುಖರು ಸೇರಿದಂತೆ ಹಲವಾರು ಕಾರ್ಯಕರ್ತರು ಭಾಗವಹಿಸಿದ್ದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications