ಗುಪ್ತಚರ ಇಲಾಖೆ ಬಲವರ್ಧನೆ :ಯಡಿಯೂರಪ್ಪ
ಶಿಕಾರಿಪುರ, ಅ. 3 : ದೇಶದ ವಿವಿಧೆಡೆ ನಡೆದ ಸರಣಿ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ ಉಗ್ರರ ಜಾಲ ಸಕ್ರಿಯವಾಗಿರುವುದಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ರಾಜ್ಯ ಉಗ್ರರ ನೆಚ್ಚಿನ ತಾಣವಾಗಿರುವ ಹಿನ್ನೆಲೆಯಲ್ಲಿ ರಾಜ್ಯದ ಗುಪ್ತಚರ ಇಲಾಖೆಯನ್ನು ಇನ್ನಷ್ಟು ಬಲಗೊಳಿಸಲು ಕ್ರಮಕೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ವಿವಿಧ ಕಾರ್ಯಕ್ರಮಗಳ ಅಂಗವಾಗಿ ಶುಕ್ರವಾರ ಶಿಕಾರಿಪುರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂಜಾಗ್ರತಾ ಕ್ರಮವಾಗಿ ಐತಿಹಾಸಿಕ ಮೈಸೂರು ದಸರಾ ಉತ್ಸವಕ್ಕೆ ಭಾರಿ ಬಿಗಿ ಭದ್ರತೆಯನ್ನು ನಿಯೋಜಿಸಲಾಗಿದೆ ಎಂದರು. ದೇಶದಲ್ಲಿ ಉಗ್ರರ ಹಾವಳಿ ಹೆಚ್ಚಾಗುತ್ತಿದೆ. ಉಗ್ರರು ಕರ್ನಾಟಕವನ್ನು ನೆಚ್ಚಿನ ತಾಣ ಮಾಡಿಕೊಂಡು ಇಲ್ಲಿಂದಲೇ ಸ್ಫೋಟದ ಸಂಚು ರೂಪಿಸುತ್ತಿರುವುದು ಆಘಾತಕಾರಿ ಅಂಶವಾಗಿದೆ. ಇದರ ಜೊತೆಗೆ ಸ್ಥಳೀಯ ವ್ಯಕ್ತಿಗಳು ಅವರಿಗೆ ಸಹಕರಿಸುತ್ತಿರುವುದು ಬಯಲಿಗೆ ಬಂದಿದೆ. ಆದ್ದರಿಂದ ಇದೆಲ್ಲವನ್ನು ನಿಗ್ರಹಿಸಲು ರಾಜ್ಯ ಗುಪ್ತಚರ ಇಲಾಖೆಯನ್ನು ಇನ್ನಷ್ಟು ಸುಭದ್ರಗೊಳಿಸಲು ಸರ್ಕಾರ ಎಲ್ಲ ರೀತಿಯ ಕ್ರಮಕೈಗೊಳ್ಳಲಿದೆ ಎಂದು ಯಡಿಯೂರಪ್ಪ ಹೇಳಿದರು.
ರಾಜ್ಯದಲ್ಲಿ ನೆರೆ ಪರಿಹಾರ ವಿಷಯದಲ್ಲಿ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಅಗತ್ಯ ಪ್ರಮಾಣದ ಪರಿಹಾರವನ್ನು ಈ ವರೆಗೂ ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಿಲ್ಲ ಎಂದು ಅವರು ದೂರಿದರು.
ಲೋಕಾಯುಕ್ತ ತನಿಖೆಗೆ ಜೆಡಿಎಸ್ ಒತ್ತಾಯ
ರಾಜ್ಯದಲ್ಲಿ ಆಡಳಿತದಲ್ಲಿರುವ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಭಾರಿ ಭ್ರಷ್ಟಾಚಾರದಲ್ಲಿ ತೊಡಗಿದೆ. ಸರ್ಕಾರ ಕೈಗೊಂಡಿರುವ ಎಲ್ಲ ಯೋಜನೆಗಳಲ್ಲಿ ಭ್ರಷ್ಟಾಚಾರ ಮುಖಕ್ಕೆ ರಾಚುತ್ತದೆ. ಯಡಿಯೂರಪ್ಪ ಕೈಗೊಂಡಿರುವ ಯಾವ ಕಾಮಗಾರಿಗಳೂ ಪಾರದರ್ಶಕವಾಗಿಲ್ಲ. ಉಚಿತ ಸೈಕಲ್ ವಿತರಣೆ ಯೋಜನೆ, ಭಾಗ್ಯಲಕ್ಷ್ಮಿ ಯೋಜನೆಯಲ್ಲಿ ಅವ್ಯವಹಾರ ನಡೆದಿರುವುದು ಈಗಾಗಲೇ ಸಾಬೀತಾಗಿದೆ. ಆದ್ದರಿಂದ ಎಲ್ಲ ಯೋಜನೆಗಳನ್ನು ಲೋಕಾಯುಕ್ತ ತನಿಖೆಗೆ ಒಳಪಡಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಗ್ರಹಪಡಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಪ್ರತಿಪಕ್ಷಗಳು ಕಾಡುಪ್ರಾಣಿಗಳಲ್ಲ ಎಂದ ಬಿಎಸ್ ವೈ
ಮಾನನಷ್ಟ ಮೊಕದ್ದಮೆಗೆ ಭಯವಿಲ್ಲ : ಕುಮಾರಸ್ವಾಮಿ












Click it and Unblock the Notifications