ಈದ್ಗಾ ಮೈದಾನ ಪ್ರವೇಶಿಸದಂತೆ ಸಚಿವರಿಗೆ ತಡೆ
ದೇವದುರ್ಗ, ಅ.2: ವಯಸ್ಕರ ಶಿಕ್ಷಣ ಸಚಿವ ಶಿವನಗೌಡ ನಾಯಕರಿಗೆ ಈದ್ಗಾ ಮೈದಾನ ಪ್ರವೇಶಿಸದಂತೆ ಮುಸ್ಲಿಂ ಬಾಂಧವರು ತಡೆಯೊಡ್ಡಿದ ಘಟನೆ ರಾಯಚೂರು ಜಿಲ್ಲೆ ದೇವದುರ್ಗದಲ್ಲಿ ಗುರುವಾರ ನಡೆದಿದೆ.
ರಂಜಾನ್ ಹಬ್ಬದ ಪ್ರಯುಕ್ತ ಸಚಿವರು ಮುಸ್ಲಿಂರ ಸಾಮೂಹಿಕ ಪ್ರಾರ್ಥನಾ ಸ್ಥಳ ಈದ್ಗಾ ಮೈದಾನಕ್ಕೆ ಪ್ರಾರ್ಥನೆ ಸಲ್ಲಿಸಲು ಹೋಗಿದ್ದರು. ಈ ಸಂದರ್ಭದಲ್ಲಿ ಮುಸ್ಲಿಂ ಬಾಂಧವರಿಂದ ತೀವ್ರ ವಿರೋಧ ವ್ಯಕ್ತವಾಯಿತು. ಈ ಘಟನೆಯಿಂದ ಶಿವನಗೌಡರು ತೀವ್ರ ಮುಜುಗರಕ್ಕೆ ಒಳಗಾದರು. ಶಿವನಗೌಡ ನಾಯಕರು ಬರಲಿರುವ ಉಪಚುನಾವಣೆ ಎದುರಿಸಬೇಕಾಗಿದ್ದು ಈ ಘಟನೆಯಿಂದ ಕಸಿವಿಸಿಗೊಂಡರು.
ಸಚಿವರು ಈದ್ಗಾ ಪ್ರಾರ್ಥನಾ ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಅವರನ್ನು ತಡೆದ ಮುಸ್ಲಿಂ ಬಾಂಧವರು, ''ಜೆಡಿಎಸ್ ನಿಂದ ಆಯ್ಕೆಯಾದ ನೀವು ಸ್ಥಳೀಯ ಮತದಾರರ ಅಭಿಪ್ರಾಯಕ್ಕೆ ವಿರುದ್ಧವಾಗಿ ಕೋಮುವಾದಿ ಪಕ್ಷ ಬಿಜೆಪಿ ಸೇರಿದ್ದೀರಿ. ಮತದಾರರೊಂದಿಗೆ ನಡೆದುಕೊಂಡ ರೀತಿ ಸರಿಯಿಲ್ಲ. ನೀವು ನಮ್ಮೊಂದಿಗೆ ಬೆರೆಯಲು ಅರ್ಹರಲ್ಲ. ದಯಮಾಡಿ ಇಲ್ಲಿಂದ ತೆರಳಬೇಕು'' ಎಂದು ಪಟ್ಟುಹಿಡಿದರು. ಶಿವನಗೌಡ ವಿರುದ್ಧ ಪ್ರತಿಭಟನೆ ನಡೆಸಲು ಮುಂದಾದರು. ಕೆಲ ಕಾಲ ಸಚಿವರ ಬೆಂಬಲಿಗರು ಹಾಗೂ ಮುಸ್ಲಿಂರೊಂದಿಗೆ ತೀವ್ರ ವಾಗ್ವಾದ ನಡೆಯಿತು. ಪರಿಸ್ಥಿತಿ ಗಂಭೀರವಾಗುತ್ತಿರುವುದನ್ನು ಅರಿತ ಸಚಿವರು ಅಲ್ಲಿಂದ ಕಾಲ್ತೆಗೆದರು.
ದೇವದುರ್ಗ ವಿಧಾನಸಭೆ ಕ್ಷೇತ್ರದಿಂದ ಜೆಡಿಎಸ್ ಶಾಸಕರಾಗಿ ಶಿವನಗೌಡ ನಾಯಕ ಆಯ್ಕೆಯಾಗಿದ್ದರು. ನಂತರ ರಾಜೀನಾಮೆ ನೀಡಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡು ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದೇ ಪ್ರಾರ್ಥನಾ ಸ್ಥಳದಲ್ಲಿ ಮಾಜಿ ಸಚಿವ ಹಾಲ್ಕೋಡ್ ಹನುಮಂತಪ್ಪ, ಕಾಂಗ್ರೆಸ್ ಮುಖಂಡ ಬಿ.ವಿ.ನಾಯಕ್ ಸಹ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು. ಅವರಿಗೆ ಯಾವುದೇ ವಿರೋಧ ವ್ಯಕ್ತವಾಗಲಿಲ್ಲ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications