ರಾಜ್ಯ ರಾಜಕೀಯದಲ್ಲಿ ತಮಿಳರಿಗೆ ಪಾಲುಬೇಕಂತೆ!
ಬೆಂಗಳೂರು, ಅ.1: ಕರ್ನಾಟಕದೊಡನೆ ನೆಲ, ಜಲದ ವಿಷಯದಲ್ಲಿ ತಲೆತಲಾಂತದಿಂದ ಕಿತ್ತಾಡುತ್ತಾ ಬಂದಿರುವ ತಮಿಳರಿಗೆ ಈಗ ರಾಜ್ಯ ಸರ್ಕಾರದ ಆಡಳಿತದಲ್ಲಿ ಪಾಲು ಬೇಕಂತೆ. ಇಲ್ಲಿನ ತಮಿಳರ ರಕ್ಷಣೆ ಮಾಡಲು ನಮಗೆ ಅಧಿಕಾರ ಕೈಗೆ ಸಿಗಬೇಕು ಎಂದು ತಮಿಳು ಸಂಘಟನೆಗಳು ಒಮ್ಮತದ ನಿರ್ಧಾರಕ್ಕೆ ಬಂದಿವೆ. ಮುಂಬರುವ ವಿಧಾನಸಭಾ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಇಲ್ಲಿನ ತಮಿಳು, ಈಬಾರಿ ಹೇಗಾದರೂ ಮಾಡಿ ವಿಧಾನಸೌಧದ ಮೆಟ್ಟಿಲೇರಿ, ಅಧಿಕಾರಿ ಗಿಟ್ಟಿಸಿಕೊಳ್ಳುವ ತವಕದಲ್ಲಿದ್ದಾರೆ.
ಕನಿಷ್ಠ ಐದು ಮಂದಿ ತಮಿಳು ಅಭ್ಯರ್ಥಿಗಳಾದರೂ ಗೆಲ್ಲಬೇಕು. ಅದಕ್ಕಾಗಿ ಎಲ್ಲರೂ ಶ್ರಮವಹಿಸಿ ಕಾರ್ಯನಿರತರಾಗಬೇಕು ಎಂಬುದು ಕಳೆದ ಎರಡು ತಿಂಗಳಲ್ಲಿ ನಡೆದ ತಮಿಳು ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಅಂಗೀಕರಿಸಿದ ಒಕ್ಕೊರಲ ನಿರ್ಣಯ.
ಆದರೆ ಈ ಪ್ರಚೋದನಾಕರಿ ನಿರ್ಣಯದ ತಡವಾಗಿ ತಿಳಿದುಬಂದಿದೆ ಎಂದು ಕೆಜಿಎಫ್ ನ ಕನ್ನಡ ಸಂಘದ ಮಾಜಿ ಉಪಾಧ್ಯಕ್ಷ ಎ.ಜಿ. ಗುರುಶಾಂತಪ್ಪ ಮಾಹಿತಿ ನೀಡಿದರು. ರಾಜ್ಯದ ಅಧಿಕಾರ ಮಾತ್ರವಲ್ಲ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿಯೀ ತಮಿಳು ಅಭ್ಯರ್ಥಿಗಳು ಗೆಲ್ಲುವಂತೆ ಮಾಡಬೇಕು ಎಂದು ಸಂಘ ಫರ್ಮಾನು ಹೊರಡಿಸಿದೆ. ಇಂಥ ನಿರ್ಣಯದ ಮೂಲಕ ಕನ್ನಡಿಗರನ್ನು ಕೆಣಕಲು ಹೊರಡಿದೆ ಎನ್ನುತ್ತಾರೆ ಗುರುಶಾಂತಪ್ಪ.
ಬೆಂಗಳೂರಿಗೆ ಸೀಮಿತವಾಗಿರುವ ತಮಿಳು ಸಂಘಂ ಅನ್ನು ಕರ್ನಾಟಕ ತಮಿಳು ಸಂಘವಾಗಿ ರೂಪಿಸಬೇಕು. ಕರ್ನಾಟಕದಾದ್ಯಂತ ಇರುವ ತಮಿಳರೆಲ್ಲರೂ ಒಗ್ಗೂಡಿದರೆ ಸದೆ ಬಡಿಯುವ ಧೈರ್ಯ ಯಾರಿಗೂ ಸಾಧ್ಯವಿಲ್ಲ. ಕಾವೇರಿ ವಿವಾದ, ಹೊಗೇನಕಲ್ ವಿವಾದ ಸೇರಿದಂತೆ ಹತ್ತು ಹಲವು ತೊಡಕುಗಳು ಎದುರಾದಾಗ ಕರ್ನಾಟಕದತಮಿಳರಿಗೆ ರಕ್ಷಣೆ ಇಲ್ಲದಂತಾಗಿದೆ. ಹೀಗಾಗಿ ಸರ್ಕಾರದ ಅಧಿಕಾರವನ್ನು ತಮಿಳರು ಹಿಡಿತದಲ್ಲಿಟ್ಟುಕೊಳ್ಳಬೇಕು ಎಂಬ ಸಂದೇಶ ಎಲ್ಲೆಡೆ ರವಾನೆಯಾಗಿದೆ.
ಇದೇ ನಮಗೆ ಸಕಾಲ
ಕಳೆದ 58 ಕ್ಕೂ ಹೆಚ್ಚು ವರ್ಷಗಳಿಂದ ನಾವು(ತಮಿಳರು) ಇಲ್ಲಿದ್ದರೂ ನಮಗೆ ಸಿಗಬೇಕಾದ ಸ್ಥಾನಮಾನ ದೊರೆತಿಲ್ಲ. ಅದನ್ನು ಅಧಿಕಾರಯುತವಾಗಿ ಪಡೆಯಲು ರಾಜಕೀಯವೊಂದೇ ದಾರಿ. ನಮ್ಮ ಸಂಘದಲ್ಲಿ ಬದಲಾವಣೆ ಅಗತ್ಯ. ಎಲ್ಲಾ ಪಕ್ಷಗಳ ರಾಜಕೀಯ ಮುಖಂಡರೊಡನೆ ಸೌಹಾರ್ದ ಸಂಬಂಧ ಇಟ್ಟುಕೊಳ್ಳುವುದು. ಐಪಿಎಸ್, ಐಎಎಸ್ ಅಧಿಕಾರಿಗಳೊಡನೆ ಸದಾ ಸಂಪರ್ಕದಲ್ಲಿರುವುದು ಅಗತ್ಯವಾಗಿದೆ. ನಮ್ಮ ಕುಂದುಕೊರತೆಯನ್ನು ನಾವೇ ನೀಗಿಸಿಕೊಳ್ಳಬೇಕು ಎಂದು ಸಂಘದ ಪ್ರಕಟಣೆಯಲ್ಲಿ ಹೇಳಲಾಗಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications